22ರಿಂದ ಜಾತಿ ಗಣತಿ, ಯಾರೂ ತಪ್ಪಿಸಬೇಡಿ : ಜನರಿಗೆ ಸಿದ್ದರಾಮಯ್ಯ ಮನವಿ

| N/A | Published : Sep 13 2025, 05:32 AM IST

 CM Siddaramaiah
22ರಿಂದ ಜಾತಿ ಗಣತಿ, ಯಾರೂ ತಪ್ಪಿಸಬೇಡಿ : ಜನರಿಗೆ ಸಿದ್ದರಾಮಯ್ಯ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ಕಾರ್ಯವನ್ನು ಸೆ. 22ರಿಂದ ಅ.7ರವರೆಗೆ ರಾಜ್ಯಾದ್ಯಂತ ನಡೆಸಲಿದ್ದು, ಈ ಸಮೀಕ್ಷೆಯಲ್ಲಿ ರಾಜ್ಯದ ಯಾರೊಬ್ಬರೂ ತಪ್ಪಿಸಿಕೊಳ್ಳದೆ ಪಾಲ್ಗೊಳ್ಳಬೇಕು

  ಬೆಂಗಳೂರು :  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ಕಾರ್ಯವನ್ನು ಸೆ. 22ರಿಂದ ಅ.7ರವರೆಗೆ ರಾಜ್ಯಾದ್ಯಂತ ನಡೆಸಲಿದ್ದು, ಈ ಸಮೀಕ್ಷೆಯಲ್ಲಿ ರಾಜ್ಯದ ಯಾರೊಬ್ಬರೂ ತಪ್ಪಿಸಿಕೊಳ್ಳದೆ ಪಾಲ್ಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಹಿಂದಿನ ಸಮೀಕ್ಷೆಗಳಲ್ಲಿ ಎದುರಾದ ಯಾವುದೇ ತಾಂತ್ರಿಕ ಸಮಸ್ಯೆ, ನ್ಯೂನತೆಗಳು ಈ ಬಾರಿ ಆಗದಂತೆ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಸಮೀಕ್ಷೆಗೂ ಮೊದಲೇ ಆಶಾ ಕಾರ್ಯಕರ್ತೆಯರಿಂದ ಪ್ರತಿ ಮನೆಗೂ ಪ್ರಶ್ನಾವಳಿ ನಮೂನೆ ತಲುಪಿಸಿ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಲಾಗುವುದು. ಯಾವ ಮನೆಯೂ ಬಿಟ್ಟುಹೋಗದಂತೆ ವಿದ್ಯುತ್‌ ಮೀಟರ್‌ ಆಧರಿಸಿ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳ ಮೀಟರ್ ರೀಡರ್‌ಗಳು ವಿಶೇಷ ಗುರುತಿನ ಸಂಖ್ಯೆ (ಯುಎಚ್‌ಐಡಿ) ಇರುವ ಸ್ಟಿಕ್ಕರ್ ಅಂಟಿಸಿದ್ದಾರೆ. ಆ ಎಲ್ಲಾ ಮನೆಗಳಿಗೆ 1.75 ಲಕ್ಷ ಶಿಕ್ಷಕರು ಭೇಟಿ ನೀಡಿ 60 ಪ್ರಶ್ನೆಗಳಿಗೆ ಉತ್ತರ ಪಡೆದು ಸಮೀಕ್ಷೆ ಮಾಡುತ್ತಾರೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳ ಸಮೀಕ್ಷೆಯನ್ನೂ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಾಗಿ ಕಾಂತರಾಜ್ ನೇತೃತ್ವದ ಆಯೋಗ ರಚಿಸಲಾಗಿತ್ತು. ಆದರೆ, ಕಾಂತರಾಜು ಆಯೋಗದ ಸಮೀಕ್ಷೆ ವರದಿಯಾಗಲಿ, ನಂತರದಲ್ಲಿ ಜಯಪ್ರಕಾಶ್ ಹೆಗ್ಡೆ ನೀಡಿದ ಪರಿಷ್ಕೃತ ವರದಿಯನ್ನಾಗಲಿ ಹತ್ತು ವರ್ಷಗಳ ಹಳೆಯ ಸಮೀಕ್ಷೆ ಎನ್ನುವ ಕಾರಣಕ್ಕೆ ಸರ್ಕಾರ ಒಪ್ಪಲಿಲ್ಲ. ಹೀಗಾಗಿ ಈಗಿನ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ ಅವರ ನೇತೃತ್ವದಲ್ಲಿ ಹೊಸದಾಗಿ ರಾಜ್ಯದ ಯಾವ ಜಾತಿ ಮತ್ತು ಧರ್ಮಗಳಿಗೆ ಸೇರಿದ ಜನರ ಸ್ಥಿತಿ ಗತಿ ಏನಿದೆ ಎಂಬುದನ್ನು ತಿಳಿಯುವ ಕೆಲಸ ಮಾಡಲಾಗುತ್ತಿದೆ ಎಂದರು.

ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದರೂ ಅಸಮಾನತೆಯನ್ನು ಸಂಪೂರ್ಣವಾಗಿ ತೊಲಗಿಸಲು ನಮಗೆ ಸಾಧ್ಯವಾಗಿಲ್ಲ. ನನ್ನ ಈ ಹಿಂದಿನ ಅವಧಿಯಲ್ಲಿ ಭಾಗ್ಯಗಳಿದ್ದವು ಮತ್ತು ಈ ಅವಧಿಯಲ್ಲಿ ‘ಗ್ಯಾರಂಟಿ’ಗಳಿವೆ. ಇವೆರಡರ ಮೂಲಕ ಸಮಾನತೆ ತಗ್ಗಿಸುವ ಪ್ರಯತ್ನ ಮಾಡಿದ್ದೇವೆ. ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಿದ್ದು, ಸುಮಾರು 2 ಕೋಟಿಯಷ್ಟು ಕುಟುಂಬಗಳಿವೆ. ಇವರೆಲ್ಲರಿಗೂ ಸಮಾನ ಅವಕಾಶ ಒದಗಿಸುವುದು ನಮ್ಮ ಕರ್ತವ್ಯ. ಹಾಗಾಗಿ ಅವರೆಲ್ಲರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಕುರಿತು ಹೊಸ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆಯ ದತ್ತಾಂಶಗಳನ್ನು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಕ್ರೋಢೀಕರಿಸಿ, ವಿಶ್ಲೇಷಿಸಿ ಬರುವ ಡಿಸೆಂಬರ್ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಅದನ್ನು ಆಧರಿಸಿ ಸರ್ಕಾರ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಎಂದರು.

ಶಿಕ್ಷಕರ ವಿಶೇಷ ಭತ್ಯೆಗೆ 325 ಕೋಟಿ ರು.:

ಸೆ.22ರಿಂದ ಅ.7ರವರೆಗೆ ರಾಜ್ಯ ಸರ್ಕಾರಿ ಶಾಲೆಗಳ 1.75 ಲಕ್ಷ ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ತೊಡಗಿಸಿಕೊಳ್ಳುತ್ತಿದ್ದೇವೆ. ಪ್ರತಿ ಶಿಕ್ಷಕರು 125ರಿಂದ 150 ಮನೆಗಳ ಸಮೀಕ್ಷೆ ಮಾಡಬೇಕು. ಪ್ರತಿ ಮನೆಗೆ 100 ರು. ನಂತೆ ಗರಿಷ್ಠ 20,000 ರು. ವರೆಗೆ ಅವರಿಗೆ ವಿಶೇಷ ಭತ್ಯೆ ನೀಡಲಾಗುವುದು. ಶಿಕ್ಷಕರ ವಿಶೇಷ ಭತ್ಯೆಗೆ 325 ಕೋಟಿ ರು. ಕೊಡಲಾಗುತ್ತದೆ. ಯುಎಚ್‌ಐಡಿ ವಿಶೇಷ ಸಂಖ್ಯೆಯ ಸ್ಟಿಕ್ಕರ್‌ ಅಂಟಿಸುವ ವಿದ್ಯುತ್‌ ಮೀಟರ್‌ ಮಾಪನದಾರರು, ಮನೆಗಳಿಗೆ ಪ್ರಶ್ನೆಗಳ ನಮೂನೆ ತಲುಪಿಸುವ ಆಶಾ ಕಾರ್ಯಕರ್ತೆಯರಿಗೂ ತಲಾ 2000 ರು. ವಿಶೇಷ ಭತ್ಯೆ ನೀಡಲಾಗುತ್ತದೆ. ಸಮೀಕ್ಷೆಗೆ ಒಟ್ಟಾರೆ 425 ಕೋಟಿ ರು. ಕೊಡುವುದಾಗಿ ಹೇಳಿದ್ದೆವು. ಹೆಚ್ಚಿನ‌ ಹಣದ ಅಗತ್ಯ ಕಂಡುಬಂದಲ್ಲಿ ಮಂಜೂರು ಮಾಡಲಾಗುವುದು ಎಂದರು.

60 ಪ್ರಶ್ನೆ ಕೇಳ್ತಾರೆ:

ಸಮೀಕ್ಷೆಗೆ ಬರುವ ಶಿಕ್ಷಕರು ಪ್ರತಿ ಕುಟುಂಬದ ಪ್ರತಿ ಸದಸ್ಯನ ಧರ್ಮ, ಜಾತಿ, ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಸರ್ಕಾರದ ಯಾವ್ಯಾವ ಯೋಜನೆ, ಸೌಲಭ್ಯ ಪಡೆಯುತ್ತಿದ್ದಾರೆ ಎಂಬುದು ಸೇರಿ ಒಟ್ಟು 60 ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಿದ್ದಾರೆ. ಈ ಸಂಬಂಧ ಆಶಾ ಕಾರ್ಯಕರ್ತೆಯರು ಶನಿವಾರದಿಂದಲೇ ಪ್ರತಿ ಮನೆಗೆ ಹೋಗಿ ಪ್ರಶ್ನೆ ನಮೂನೆ ತಲುಪಿಸುತ್ತಾರೆ. ಇದರಿಂದ ಶಿಕ್ಷಕರು ಸಮೀಕ್ಷೆಗೆ ಹೋದಾಗ ಯಾವ್ಯಾವ ಪ್ರಶ್ನೆಗಳಿಗೆ ಏನು ಉತ್ತರ ನೀಡಬೇಕೆಂದು ಮೊದಲೇ ಜನರು ಸಿದ್ಧರಾಗಲು ಅನುಕೂಲವಾಗಲಿದ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ, ಇಲಾಖಾ ಕಾರ್ಯದರ್ಶಿ ತುಳಸಿ ಮುದ್ದಿನೇನಿ, ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

 - ಸೆ.22ರಿಂದ ಅ.7ರವರೆಗೆ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ)

- 1.75 ಲಕ್ಷ ಶಿಕ್ಷಕರು ಸಮೀಕ್ಷೆಗೆ ನಿಯೋಜನೆ. ಪ್ರತಿ ಶಿಕ್ಷಕರಿಗೆ 125ರಿಂದ 150 ಮನೆಗಳು ನಿಗದಿ

- ಮನೆಗೆ 100 ರು.ನಂತೆ ಶಿಕ್ಷಕರಿಗೆ 20 ಸಾವಿರ ರು.ವರೆಗೆ ವಿಶೇಷ ಸಂಭಾವಣೆ ಮಂಜೂರು

- ವಿಶೇಷ ಗುರುತಿನ ಸಂಖ್ಯೆಯ ಸ್ಟಿಕ್ಕರ್‌ ಅಂಟಿಸುವ ವಿದ್ಯುತ್‌, ಆಶಾ ಸಿಬ್ಬಂದಿಗೆ 2000 ರು. ಭತ್ಯೆ

- ಸಮೀಕ್ಷೆಗೆ ಒಟ್ಟಾರೆ 425 ಕೋಟಿ ರು. ವೆಚ್ಚ. ಅಗತ್ಯ ಬಿದ್ದರೆ ಹೆಚ್ಚುವರಿ ಹಣ ಮಂಜೂರಾತಿ: ಸಿಎಂ

Read more Articles on