ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಕಾರಣಾಂತರಗಳಿಂದ ಮನೆ ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಗದವರು ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ವಿವರ ನೀಡಬಹುದು ಅಥವಾ ಆನ್ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

 ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಕಾರಣಾಂತರಗಳಿಂದ ಮನೆ ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಗದವರು ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ವಿವರ ನೀಡಬಹುದು ಅಥವಾ ಆನ್ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕೆಲವರು ತಮ್ಮ ಜಾತಿಯನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಶಿಕ್ಷಕರು ಬಂದಾಗ ನೇರವಾಗಿ ಜಾತಿ ಹೇಳಿಕೊಳ್ಳಲು ಕಷ್ಟ ಆಗದವರು ಸಹಾಯವಾಣಿ, ಆನ್‌ಲೈನ್‌ ಸಮೀಕ್ಷೆಯಲ್ಲಿ ದಾಖಲಿಸಬಹುದು. ಸಮೀಕ್ಷೆಯ ಯಾವುದೇ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದರು. ಈವರೆಗೆ 1.55 ಕೋಟಿ ಮನೆಗಳಿಗೆ ಸ್ಟಿಕ್ಕರ್‌

ನ್ಯಾ.ನಾಗಮೋಹನ ದಾಸ್ ಅವರು ಒಳಮೀಸಲಾತಿ ಸಮೀಕ್ಷೆಗೆ ವಿಶೇಷ ತಂತ್ರಜ್ಞಾನ ಬಳಸಿಕೊಂಡ ರೀತಿ ಈ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲೂ ಪ್ರತಿಯೊಂದು ಮನೆಯ ವಿದ್ಯುತ್ ಮೀಟರ್ ಆಧಾರದಲ್ಲಿ ಮನೆಯ ಜಿಯೋ ಟ್ಯಾಗ್ ಮಾಡಿ ಯುಎಚ್‌ಐಡಿ ವಿಶೇಷ ಸಂಖ್ಯೆ ನಮೂದಿಸಲಾಗುವುದು. ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ ಅನ್ನು ಮೊಬೈಲ್‌ಗೆ ಲಿಂಕ್ ಮಾಡುವ ಮೂಲಕ ಸಮೀಕ್ಷೆಗೆ ದತ್ತಾಂಶ ಸಂಗ್ರಹಿಸಲಾಗುವುದು. ಇದರಿಂದ ಇಡೀ ರಾಜ್ಯದಲ್ಲಿ ಇಬ್ಬರು ಒಮ್ಮೆ ಮಾತ್ರ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಜೊತೆಗೆ, ಮೊಬೈಲ್ ಇಲ್ಲದ ಮನೆಗಳಿಗೂ ಹೋಗಿ ಸಮೀಕ್ಷೆ ನಡೆಸಲಾಗುತ್ತದೆ. 

ಈಗಾಗಲೇ 1.55 ಕೋಟಿ ಮನೆಗಳಿಗೆ ಎಸ್ಕಾಂ ಮೀಟರ್‌ ರೀಡಿಂಗ್‌ ಸಿಬ್ಬಂದಿ ಮೂಲಕ ಈ ಸಂಖ್ಯೆಯ ಸ್ಟಿಕ್ಕರ್‌ ಅಂಟಿಸಲಾಗಿದೆ. ಉಳಿದ ಮನೆಗಳಿಗೂ ಸ್ಟಿಕ್ಕರ್‌ ಅಂಟಿಸುವ ಕಾರ್ಯ ನಡೆಯುತ್ತಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿದಾಗ ಸಮೀಕ್ಷೆ ನಡೆಸಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು. ಮತಾಂತರಗೊಂಡಿದ್ದರೆ ಹಿಂದಿನ ಧರ್ಮ ಪರಿಗಣನೆಗೆ ಬರುವುದಿಲ್ಲ

ಯಾವುದೇ ಜಾತಿ ಅಥವಾ ಪಂಗಡದಿಂದ ಇತರ ಧರ್ಮಕ್ಕೆ ಮತಾಂತರಗೊಂಡಿದ್ದರೆ ಅಂಥವರನ್ನು ಅವರು ಸ್ವೀಕರಿಸಿದ ಧರ್ಮದವರನ್ನಾಗಿಯೇ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.

ಮತಾಂತರಗೊಂಡವರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉದಾಹರಣೆ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡ ಕುರುಬರು ‘ಕ್ರಿಶ್ಚಿಯನ್‌ ಕುರುಬ’ ಎಂದು ದಾಖಲಿಸುತ್ತಾರೆ. ಆಗ ಅವರನ್ನು ಹೇಗೆ ಪರಿಗಣಿಸಲಾಗುತ್ತದೆ ಎಂದು ಕೇಳಿದಾಗ, ಯಾವುದೇ ಸಮುದಾಯದ ವ್ಯಕ್ತಿ ಅಥವಾ ಕುಟುಂಬ ಕ್ರಿಶ್ಚಿಯನ್ ಆಗಿ ಮತಾಂತರಗೊಂಡಿದ್ದರೆ, ಆ ವ್ಯಕ್ತಿ ಅಥವಾ ಕುಟುಂಬ ಕ್ರಿಶ್ಚಿಯನ್ನರೇ ಆಗುತ್ತಾರೆ. ಅದೇನೇ ಇರಲಿ, ಸದ್ಯ ಸಮೀಕ್ಷೆಯಲ್ಲಿ ಅವರು ನೀಡುವ ಮಾಹಿತಿಯನ್ನೆಲ್ಲ ದಾಖಲಿಸಿಕೊಳ್ಳಲಾಗುತ್ತದೆ. 

ನಂತರ ಮತಾಂತರಗೊಂಡವರು ಅಥವಾ ಜಾತಿ ಗೊಂದಲ ಇದ್ದವರನ್ನು ಆಯೋಗದ ತಜ್ಞರ ತಂಡ ವಿಶ್ಲೇಷಣೆ ಮಾಡಿ ತೀರ್ಮಾನಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.ಮುಖ್ಯಾಂಶಗಳು- ಡಿಸೆಂಬರ್ ನೊಳಗೆ ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆಯ ಗುರಿ- ಸಮೀಕ್ಷೆಯಲ್ಲಿ ಅಂದಾಜು 2 ಕೋಟಿ ಕುಟುಂಬದ 7 ಕೋಟಿ ಜನ ಭಾಗಿ- ಸಮೀಕ್ಷೆಗಾಗಿಯೇ ಒಟ್ಟು 420 ಕೋಟಿ ವೆಚ್ಚ, 325 ಕೋಟಿ ಬಿಡುಗಡೆ- ಈಗಾಗಲೇ 1.55 ಕೋಟಿ ಮನೆಗೆ ಸ್ಟಿಕ್ಕರ್‌ ಅಂಟಿಸುವ ಕಾರ್ಯ ಪೂರ್ಣ