- ನ್ಯಾಮತಿ ತಾಲೂಕು ಆರುಂಡಿ ಗ್ರಾಮದಲ್ಲಿ ಘಟನೆ ಬೆಳಕಿಗೆ
- ಬಾಲಕಿ ದೂರು ಆಧರಿಸಿ ಕೂಡಲೇ ನೆರವಿಗೆ ಬಂದ ಪೊಲೀಸರು- ಸ್ವಂತ ಖರ್ಚಿನಲ್ಲಿ ಶಾಲಾ ಪರಿಕರಗಳು, ಪುಸ್ತಕಗಳ ಕೊಡಿಸಿದ ಆರಕ್ಷಕ ಸಿಬ್ಬಂದಿ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ಆರುಂಡಿ ಗ್ರಾಮದಲ್ಲಿ ಮದ್ಯವ್ಯಸನಿ ತಂದೆಯೇ ಎಸ್ಸೆಸ್ಸೆಲ್ಸಿ ಓದುತ್ತಿರುವ ಮಗಳ ವಿದ್ಯಾಭ್ಯಾಸಕ್ಕೆ ಅಡ್ಡಪಡಿಸಿ, ಶಾಲಾ ಪಠ್ಯ ಪುಸ್ತಕಗಳು, ಪರಿಕರಗಳನ್ನು ಸುಟ್ಟಹಾಕಿರುವ ಘಟನೆ ನಡೆದಿದೆ.
ನೀನು ಶಾಲೆಗೆ ಹೋಗುವುದು ಬೇಡ ಎಂದು ಮಗಳಿಗೆ ಬೆದರಿಸಿ, 10ನೇ ತರಗತಿಯ ಶಾಲಾ ಪರಿಕರಗಳು, ಪಠ್ಯಪುಸ್ತಕಗಳನ್ನು ತಂದೆಯೇ ಸುಟ್ಟು ಹಾಕಿದ್ದಾನೆ. ತಂದೆಯ ಈ ಸಲ್ಲದ ವರ್ತನೆ ಕಂಡು ಮಗಳು ನ್ಯಾಮತಿ ಪೊಲೀಸ್ ಠಾಣೆಯ 112 ಸಹಾಯವಾಣಿಗೆ ತುರ್ತು ಕರೆ ಮಾಡಿ ಸಹಾಯ ಕೋರಿದ್ದಾಳೆ.
ಕರೆ ಸ್ವೀಕರಿಸಿದ ಕೂಡಲೇ ಪೊಲೀಸ್ ಸಿಬ್ಬಂದಿ ಹೇಮರಾಜ್ ಮತ್ತು ರವಿಕುಮಾರ್ ಆರುಂಡಿ ಗ್ರಾಮಕ್ಕೆ ಆಗಮಿಸಿ ವಿದ್ಯಾರ್ಥಿನಿಯ ಸಂಕಟ ವಿಚಾರಿಸಿದ್ದಾರೆ. ವಿದ್ಯಾರ್ಥಿನಿಯು ನಡೆದ ಘಟನೆ ವಿವರಿಸಿ ಕಣ್ಣೀರು ಹಾಕಿದ್ದಾಳೆ. ಆಗ ಪೊಲೀಸ್ ಠಾಣೆಯ ಪಿಐ ಎನ್.ಎಸ್.ರವಿ ಮಾರ್ಗದರ್ಶನದಲ್ಲಿ ಪೊಲೀಸರು ತಮ್ಮ ಸ್ವಂತ ಖರ್ಚಿನಲ್ಲಿಯೇ ವಿದ್ಯಾರ್ಥಿನಿಗೆ ಅಗತ್ಯ ಪುಸ್ತಕ ಹಾಗೂ ನೋಟ್‌ಬುಕ್‌ಗಳನ್ನು, ಶಾಲಾ ಪರಿಕರಗಳನ್ನು ಕೊಡಿಸಿ, ಧೈರ್ಯ ಹೇಳಿ, ಮಾನವೀಯತೆ ಹಾಗೂ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.- - -
-ಚಿತ್ರ:ಮದ್ಯವ್ಯಸನಿ ತಂದೆಯಿಂದ ಮಗಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗದಂತೆ ನ್ಯಾಮತಿ ಪೊಲೀಸ್ ಠಾಣೆಯ ಸಿಬ್ಬಂದಿ ವಿದ್ಯಾರ್ಥಿನಿಗೆ ಅಗತ್ಯ ಶಾಲಾ ಪರಿಕರಗಳ ನೆರವು ಕಲ್ಪಿಸಿ, ಧೈರ್ಯ ಹೇಳಿ, ವಿದ್ಯಾಭ್ಯಾಸ ಮುಂದುವರಿಸಲು ನೆರವಾದರು.