ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಅಂಜನಾಪುರದಲ್ಲಿ ಮೂರನೇ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಮತ್ತೆ ಭೀತಿ ಹುಟ್ಟಿಸಿದೆ. ಈ ಹಿಂದೆ ಫೆ. 3 ಮತ್ತು 6 ರಂದು ಇದೇ ಪ್ರದೇಶದಲ್ಲಿ ಸಂದೀಪ್ ಎಂಬುವರ ಮನೆ ಬಳಿ ಚಿರತೆ ಪ್ರತ್ಯಕ್ಷವಾಗಿತ್ತು. ಈಗ ಅಂಜನಾಪುರದ 5ಜಿ ಬ್ಲಾಕ್‌ನಲ್ಲಿ ಮೂರನೇ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದು ಎಲ್ಲರಲ್ಲೂ ಆತಂಕ ಮನೆ ಮಾಡಿದೆ.

ತಡರಾತ್ರಿ ಚಿರತೆ ಕಂಡು ನಿವಾಸಿಗಳು ಭಯಭೀತರಾಗಿದ್ದಾರೆ. ಮನೆಯಿಂದ ಹೊರಗಡೆ ಬರಲು ಭಯ ಪಡುವಂತಾಗಿದೆ. ಚಿರತೆ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿದು ಸ್ಥಳೀಯರ ಆತಂಕ ದೂರ ಮಾಡಬೇಕೆಂದು ಅರಣ್ಯ ಇಲಾಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಮ್ಮ ಎಲ್‌ಟಿಎಫ್ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಚಿರತೆ ಪಕ್ಕದ ಖೋಡೇಸ್ ಜಾಗದಿಂದ ನೈಸ್ ರಸ್ತೆ ದಾಟಿ ಮನೆಯ ಕಾಂಪೌಂಡ್ ಒಳಗೆ ಬಂದು ವಾಪಸ್ ತೆರಳಿದೆ. ಬೋನ್ ಇರಿಸಲಾಗಿದ್ದು, ಶೀಘ್ರದಲ್ಲೇ ಚಿರತೆ ಸೆರೆ ಹಿಡಿಯಲಾಗುವುದು.

- ಎನ್.ಆರ್.ಕಾಂಬ್ಲೆ, ಆರ್‌ಎಫ್ಓ, ಕಗ್ಗಲೀಪುರ ಅರಣ್ಯ ವ್ಯಾಪ್ತಿ.