ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ
ಎರಡು ರಾಜ್ಯಗಳ ಹಿತದೃಷ್ಟಿಯಿಂದ ಸಮುದ್ರ ಪಾಲಾಗುತ್ತಿರುವ ಹೆಚ್ಚುವರಿ ನೀರು ಸಂಗ್ರಹಣೆ ಮಾಡಲು ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರ ರಾಜಕೀಯ ಮಾಡದೆ ತಕ್ಷಣವೇ ಅನುಮತಿ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.ತಾಲೂಕಿನ ಬ್ಲಪ್‌ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯಿಂದ ನಡೆದ ಗಗನಚುಕ್ಕಿ ಜಲಪಾತೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮೇಕೆದಾಟು ಅಣೆಕಟ್ಟು ಯೋಜನೆಯಿಂದ 66 ಟಿಎಂಸಿಯಷ್ಟು ನೀರನ್ನು ಸಂಗ್ರಹ ಮಾಡಲು ಅವಕಾಶವಿದೆ. ಹೆಚ್ಚುವರಿ ನೀರು ಸಂಗ್ರಹಿಸಲು ಈ ಯೋಜನೆ ಅಗತ್ಯವಾಗಿದೆ. ತಮಿಳುನಾಡಿನವರು ರಾಜಕೀಯಕ್ಕಾಗಿ ಯೋಜನೆಗೆ ತಡೆಯೊಡ್ಡದೆ ಸಹಕಾರ ನೀಡಬೇಕು ಎಂದರು.
ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರನ್ನು ಮಾತ್ರ ನೀಡಬೇಕು. ಈ ವರ್ಷ ಸೆಪ್ಟಂಬರ್‌ವರೆಗೆ 98 ಟಿಎಂಸಿಯಷ್ಟು ಮಾತ್ರ ನೀರನ್ನು ಕೊಡಬೇಕಾಗಿತ್ತು. ಆದರೆ, 221 ಟಿಎಂಸಿ ನೀರು ಹರಿದುಹೋಗಿದೆ. ಹೆಚ್ಚುವರಿಯಾಗಿ 122 ಟಿಎಂಸಿ ನೀರು ಹರಿದುಹೋಗಿದೆ ಎಂದರು.ಈ ಬಾರಿ ರಾಜ್ಯದ ಎಲ್ಲಾ ಜಲಾಶಗಳು ಭರ್ತಿಯಾಗಿವೆ. ಉತ್ತಮ ಮಳೆಯಾದರೆ ನೀರು ಇಟ್ಟುಕೊಳ್ಳಲು ಆಗಲ್ಲ. ಹೆಚ್ಚುವರಿ ನೀರು ಬಿಟ್ಟಾಗಲೆಲ್ಲಾ ತಮಿಳುನಾಡಿನವರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಸಮುದ್ರ ಪಾಲಾಗುತ್ತಿದೆ. ಅಣೆಕಟ್ಟೆ ನಿರ್ಮಾಣವಾದರೆ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಮಳೆ ಕಡಿಮೆ ಇರುವ ದಿನಗಳಲ್ಲಿ ಬಳಕೆ ಮಾಡಿಕೊಳ್ಳಲು, ನೀವು ಕೇಳಿದಾಗ ನೀರು ಬಿಡಲು ಅನುಕೂಲವಾಗಲಿದೆ ಎಂದರು.
ರಾಜ್ಯದಲ್ಲಿ ಉತ್ತಮ ಮಳೆಯಾದರೆ ನೀರಿನ ಸಮಸ್ಯೆ ಬರಲ್ಲ. ಎರಡು ರಾಜ್ಯಗಳ ನಡುವೆ ಕಾವೇರಿ ವಿವಾದ ಬರಲ್ಲ. ಆದ್ದರಿಂದ ಮೇಕೆದಾಟು ಯೋಜನೆಗೆ ತಮಿಳುನಾಡು ಸೇರಿದಂತೆ ಕೇಂದ್ರ ಸರ್ಕಾರ ಕೂಡ ಕರ್ನಾಟಕದ ರಾಜ್ಯದ ಹಿತದೃಷ್ಟಿಯಿಂದ ವಿಳಂಬ ಮಾಡದೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.ಮೈಷುಗರ್‌ನಲ್ಲಿ ಬಾಯ್ಲಿಂಗ್ ಹೌಸ್ ನಿರ್ಮಾಣಕ್ಕೆ ಅನುಮತಿ ನೀಡಲು ನಾನು ಸಿದ್ಧನಿದ್ದೇನೆ. ಮೈಷುಗರ್ ಯಾವುದೇ ಕಾರಣಕ್ಕೂ ನಷ್ಟದಲ್ಲಿ ನಡೆಯಬಾರದು. ಕಾರ್ಖಾನೆ ನಷ್ಟದಲ್ಲಿ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸಚಿವರು ಮತ್ತು ಕಾರ್ಖಾನೆಯ ಅಧ್ಯಕ್ಷರದ್ದಾಗಿದೆ ಎಂದರು.
ನಾನು ಅಧಿಕಾರಕ್ಕೆ ಬಂದ ನಂತರ ಈವರೆಗೆ ಕಾರ್ಖಾನೆಗೆ 113 ಕೋಟಿ ರು. ಹಣ ನೀಡಿದ್ದೇನೆ. ಅಧಿಕಾರಕ್ಕೆ ಬಂದ ಕೂಡಲೇ 50 ಕೋಟಿ ರು. ನೀಡಿದ್ದು, ಕಾರ್ಖಾನೆಯ 53 ಕೋಟಿ ರು. ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡಿದ್ದೇನೆ. ಅಲ್ಲದೇ, ಈ ಸಾಲಿನಲ್ಲಿ ಕಬ್ಬು ಅರೆಯಲು 10 ಕೋಟಿ ರು. ಕೊಟ್ಟಿದ್ದೇನೆ ಎಂದರು.ಸರ್ಕಾರದಿಂದ ಹಣ ಪಡೆಯುವುದಷ್ಟೇ ಮುಖ್ಯವಲ್ಲ. ಕೊಟ್ಟ ಹಣವನ್ನು ಸದ್ಬಳಕೆ ಮಾಡಿಕೊಂಡು ಕಾರ್ಖಾನೆ ನಷ್ಟವಿಲ್ಲದೆ ಲಾಭದಾಯಕವಾಗಿ ನಡೆಸಬೇಕು. ನಾನು ಅಧಿಕಾರದಲ್ಲಿರುವಾಗ ಕಾರ್ಖಾನೆಗೆ ಎಷ್ಟೇ ಹಣ ನೀಡಲು ಸಿದ್ಧನಿದ್ದೇನೆ. ಆದರೆ, ಮುಂದೆ ಅಧಿಕಾರಕ್ಕೆ ಬರುವವರು ಕಾರ್ಖಾನೆಗೆ ಹಣ ಕೊಡುತ್ತಾರೆಂಬುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದರು.
ಕಾರ್ಖಾನೆ ಬಾಯ್ಲಿಂಗ್ ಹೌಸ್‌ಗೆ ಅಗತ್ಯವಿರುವ ಹಣವನ್ನು ದೊರಕಿಸಿಕೊಡಲು ಬದ್ಧನಿದ್ದೇನೆ. ಡಿಸ್ಟಿಲರಿ ಘಟಕಕ್ಕೂ ಹಣ ನೀಡಲು ಸಿದ್ಧ. ಆದರೆ, ಕಾರ್ಖಾನೆ ಯಾವುದೇ ಕಾರಣಕ್ಕೂ ನಷ್ಟದಲ್ಲಿ ನಡೆಯದಂತೆ ನೋಡಿಕೊಳ್ಳಬೇಕು ಎಂದರು.