ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಗತ್ತಿನಲ್ಲಿಯೇ ಭಾರತೀಯ ಸಂಸ್ಕೃತಿ ಶ್ರೀಮಂತ ಸಂಸ್ಕೃತಿಯಾಗಿದ್ದು, ನಮ್ಮ ಪರಂಪರೆ ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮ ಯುವ ಶಕ್ತಿ ಮೇಲಿದೆ ಎಂದು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಸಂಜೀವ ಚವ್ಹಾಣ ಹೇಳಿದರು.

ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಬಿವಿವಿಎಸ್ ಪಾಲಿಟೆಕ್ನಿಕ್ (ಸ್ವಾಯತ್ತ) ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಬಿವಿವಿ ಸಂಘ ನೂತನ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕ 1ಮತ್ತು 2 ರ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮಿಡಿಯಾ ಹಾಗೂ ಮೊಬೈಲ್‌ಗಳ ಹಾವಳಿಯಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿ ಮೆಚ್ಚಿಕೊಂಡು ಪ್ರೀತಿಸಿ ನಮ್ಮ ಸಂಸ್ಕೃತಿ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತಿಯರು ಪಾಶ್ಚಿಮಾತ್ಯ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿರುವುದು ವಿಷಾದಕರ ಸಂಗತಿ, ವಿದೇಶಗಳಲ್ಲಿ ತಂದೆ, ತಾಯಿ, ಅಜ್ಜ-ಅಜ್ಜಿ ಸಹೋದರ-ಸಹೋದರಿಯಂತಹ ಸಂಬಂಧಗಳಿಗೆ ಬೆಲೆ ಇಲ್ಲ. ಒಂದೇ ಸೂರಿನಡಿ ತಂದೆ-ತಾಯಿ, ಮಕ್ಕಳು, ಅಜ್ಜ-ಅಜ್ಜಿ, ಚಿಕ್ಕಪ್ಪ,ದೊಡ್ಡಪ್ಪ, ಸಹೋದರ-ಸಹೋದರಿ ಸೇರಿದಂತೆ ಹಲವು ತಲೆಮಾರುಗಳ ಸದಸ್ಯರು ಒಟ್ಟಿಗೆ ವಾಸಿಸುವ ಅವಿಭಕ್ತ ಕುಂಟುಂಬ ಸಂಸ್ಕೃತಿ ಭಾರತದ್ದು, ಇಲ್ಲಿ ಆರ್ಥಿಕ ಸಂಪನ್ಮೂಲಗಳು, ಜವಾಬ್ದಾರಿಗಳು, ಮತ್ತು ಪ್ರೀತಿ ವಿಶ್ವಾಸ ಹಂಚಿಕೊಳ್ಳುವ ಶ್ರೀಮಂತ ಸಂಸ್ಕೃತಿ ನಮ್ಮದು, ಇಂಥ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದು ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಕೇಂದ್ರ ಸರ್ಕಾರದ ಎನ್.ಎಸ್.ಎಸ್ ಪ್ರಾಂತಿಯ ನಿರ್ದೇಶಕ ಗಿರಿಧರ ಉಪಾಧ್ಯಾಯ ಮಾತನಾಡಿ, ಸಮಾಜಸೇವೆಯ ಮೂಲಕ ಮಾನವನ ವ್ಯಕ್ತಿತ್ವ ವಿಕಸನಗೊಳಿಸುವುದೇ ಎನ್.ಎಸ್.ಎಸ್ ಉದ್ದೇಶವಾಗಿದೆ. ಇದಕ್ಕೆ ಎಲ್ಲರ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಹೇಳಿದರು.


ರಾಜ್ಯ ಎನ್.ಎಸ್.ಎಸ್.ಅಧಿಕಾರಿ ಡಾ.ಪ್ರತಾಪ ಲಿಂಗಯ್ಯ ಮಾತನಾಡಿ, 1969ರಲ್ಲಿ ಸ್ಥಾಪಿತವಾದ ಎನ್ನೆಸ್ಸೆಸ್‌ 40 ಸಾವಿರ ವಿದ್ಯಾರ್ಥಿಗಳನ್ನು ಹೊಂದಿತ್ತು. ಇಂದು ದೇಶದಲ್ಲಿ 45 ಲಕ್ಷಕ್ಕೂ ಅಧಿಕ ಸ್ವಯಂ ಸೇವಕರನ್ನು ಹೊಂದಿದ ಬೃಹತ್ ಸಂಘಟನಯಾಗಿದೆ. ಪ್ರತಿಯೊಬ್ಬ ಎನ್.ಎಸ್.ಎಸ್. ಸ್ವಯಂ ಸೇವಕ ಕೂಡ ತನ್ನ ಜೀವನ ಪರ್ಯಂತರ ಸಮಾಜಸೇವೆಗೆ ಮುಂದಾಗಿರುತ್ತಾನೆ, ಸಂಸ್ಕೃತಿ ಸಂಪ್ರದಾಯ ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕರ್ತವ್ಯ ನಮ್ಮ ಮೇಲಿದೆ ಎಂದರು.

ಅಧ್ಯಕ್ಷತೆ ವಹಸಿ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶಿಕ್ಷಣವೇ ಬಾಳಿನ ಬೆಳಕು ಎಂಬುದನ್ನು ತಿಳಿಸಿ, ನಮ್ಮ ಪರಿಸರ, ನಮ್ಮ ಗ್ರಾಮವನ್ನು ಶುಚಿಯಾಗಿಟ್ಟುಕೊಂಡು ಆರೋಗ್ಯಪೂರ್ಣವಾಗಿ ಬಾಳುವಂತೆ ಪ್ರಜ್ಞೆ ಮೂಡಿಸಲು ಸಿಕ್ಕಿರುವ ಸದಾವಕಾಶ ಈ ಶಿಬಿರವಾಗಿದೆ. ಯುವಜನರಿಗಾಗಿ ನನ್ನ ಭಾರತ, ಯುವ ಜನರಿಗಾಗಿ ಡಿಜಿಟಲ್ ಸಾಕ್ಷರತೆ, ಯುವ ಜನರೆ ದೇಶದ ಅಭಿವೃದ್ಧಿಯ ನೇತಾರರು, ಸಮೃದ್ಧ ಭಾರತ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಹೇಳಿದರು.

ವೇದಿಕೆ ಮೇಲೆ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಯೋಜಕ ಡಾ.ಗುರುಪ್ರಸಾದ ಹೂಗಾರ, ಸಂಘದ ಆಡಳಿತಾಧಿಕಾರಿ ಪ್ರೊ.ವಿ.ಆರ್. ಶಿರೋಳ. ಪ್ರಾಚಾರ್ಯ ಎಸ್.ಎಸ್. ಹುಬ್ಬಳ್ಳಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಶೀನಿವಾಸ ಎಂ, ಸುನೀಲ ರಾಠೋಡ ವೇದಿಕೆ ಮೇಲಿದ್ದರು.

ಸಮೃದ್ಧಿ ಹಾಗೂ ಸೃಷ್ಟಿ ಪ್ರಾರ್ಥಿಸಿದರು. ಪ್ರತಿಕ್ಷಾ ಉಗರಗೋಳ ಎನ್.ಎಸ್.ಎಸ್ ಗೀತೆ ಪ್ರಸ್ತುತ ಪಡಿಸಿದರು. ಸ್ಮೀತಾ ಪೂಜಾರ ವಂದಿಸಿದರು. ಎಲ್.ಜಿ.ವೈದ್ಯ ಹಾಗೂ ಸಂಗೀತಾ ಶೆಟ್ಟರ ನಿರೂಪಿಸಿದರು.

ಯುವಜನೋತ್ವದಲ್ಲಿ ರಾಜ್ಯದ ವಿವಿಧ 12 ವಿಶ್ವವಿದ್ಯಾಲಯಗಳಿಂದ ಆಯ್ದ 115 ವಿದ್ಯಾರ್ಥಿಗಳು ಮತ್ತು 10 ಜನ ಎನ್ನೆಸ್ಸೆಸ್ಅ ಧಿಕಾರಿಗಳು ಭಾಗವಹಿಸಿದ್ದಾರೆ. ನಾಲ್ಕು ದಿನಗಳ ಯುವಜನೋತ್ಸವದಲ್ಲಿ ಶ್ರಮದಾನ, ವಿಶೇಷ ಉಪನ್ಯಾಸ, ಸಂಸ್ಕೃತಿಕ, ಸಾಹಿತ್ಯಕ, ಸಂಗೀತ, ಮೌಲ್ಯಮಾಪನ ಕಾರ್ಯಕ್ರಮ ನಡೆಯಲಿವೆ.

ಕಾರ್ಯಕ್ರಮಕ್ಕೂ ಮುನ್ನ ಬೀಳೂರ ಅಜ್ಜನ ಗುಡಿಯಿಂದ ನೂತನ ಸಭಾಭವನದವರೆಗೂ ಸಾಂಸ್ಕೃತಿಕ ಮೆರಣಿಗೆ ನಡೆಯಿತು. ವಿವಿಧ ದೇಸಿ ಉಡುಪುಗನ್ನು ತೊಟ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಭೂಮಿ ಮೇಲೆ ಸಿಹಿ ನೀರು ಕೇವಲ ಪ್ರತಿಷತ್ 3 ರಷ್ಟು ಇದೆ, 97 ಪ್ರತಿಷತ್ ನೀರು ಉಪ್ಪಿನಿಂದ ಕೂಡಿದೆ, ಸಿಹಿ ನೀರು ಮುಗಿದು ಹೋದರೆ ಮುಂದಿನ ಪೀಳಿಗೆಗೆ ನೀರಿನ ಅಭಾವ ಉಂಟಾಗಲಿರುವ ಕಾರಣ ನೀರನ್ನು ಮಿತವಾಗಿ ಬಳಸಬೇಕಾಗಿದೆ. - ಸಂಜೀವ ಚವ್ಹಾಣ ಜಂಟಿ ನಿರ್ದೇಶಕ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ