ಪ್ರೀತಿ ನಿರಾಕರಿಸಿದ ಕಾರಣಕ್ಕೆ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಖಾಸಗಿ ಕಾನೂನು ಕಾಲೇಜಿನ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದ ಸೋದರರನ್ನು ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಪ್ರೀತಿ ನಿರಾಕರಿಸಿದ ಕಾರಣಕ್ಕೆ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಖಾಸಗಿ ಕಾನೂನು ಕಾಲೇಜಿನ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದ ಸೋದರರನ್ನು ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋಡಿಹಳ್ಳಿ ನಿವಾಸಿ ಅಮೃತಾ (23) ಕೊಲೆಯಾದ ವಿದ್ಯಾರ್ಥಿನಿ. ಈ ಹತ್ಯೆ ಸಂಬಂಧ ಧನುಷ್ ಹಾಗೂ ಆತನ ಸೋದರ ಸೂರ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲಸ ಮುಗಿಸಿಕೊಂಡು ಮಂಗಳವಾರ ಸಂಜೆ ಅಮೃತಾ ಮನೆಗೆ ಮರಳುವಾಗ ಆಕೆಯನ್ನು ಅಡ್ಡಗಟ್ಟಿ ಸೂರ್ಯ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಹಲ್ಲೆಗೊಳಗಾಗಿದ್ದ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅಮೃತಾ ಕೊನೆಯುಸಿರೆಳಿದ್ದಾಳೆ. ಈ ಹತ್ಯೆಗೆ ಸೂರ್ಯನ ಆತನ ಸೋದರ ಪಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ಹತ್ಯೆ

ತನ್ನ ಕುಟುಂಬದ ಜತೆ ನೆಲೆಸಿದ್ದ ಅಮೃತಾ, ಖಾಸಗಿ ಕಾನೂನು ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅಲ್ಲದೆ ಫಿಜ್ಜಾ ಮಾರಾಟ ಮಳಿಗೆಯಲ್ಲಿ ಬಿಡುವಿನ ವೇಳೆ ಆಕೆ ಕೆಲಸ ಮಾಡುತ್ತಿದ್ದಳು. ವಿಲ್ಸನ್ ಗಾರ್ಡನ್ ಸಮೀಪದ ಹೊಂಬೇಗೌಡ ನಗರದಲ್ಲಿ ಧನುಷ್ ಕುಟುಂಬ ವಾಸವಾಗಿತ್ತು. ಕೆಲ ತಿಂಗಳ ಹಿಂದೆ ಓಂ ಶಕ್ತಿ ದೇವರ ಕಾರ್ಯಕ್ರಮದಲ್ಲಿ ಆತನಿಗೆ ಅಮೃತಾ ಪರಿಚಯವಾಗಿದ್ದಳು. ಈ ಸ್ನೇಹವು ಕ್ರಮೇಣ ಪರಸ್ಪರ ಪ್ರೀತಿಗೆ ತಿರುಗಿತು ಎಂದು ತಿಳಿದು ಬಂದಿದೆ.

ಈ ಜೋಡಿ ಹಸೆಮಣೆ ಏರಲು ಸಹ ನಿರ್ಧರಿಸಿತ್ತು. ಆದರೆ ಇತ್ತೀಚಿಗೆ ಧನುಷ್‌ನ ನಿಜ ಬಣ್ಣ ಆಕೆಗೆ ಗೊತ್ತಾಯಿತು. ಈಗಾಗಲೇ ಆತನಿಗೆ ಮದುವೆಯಾಗಿ 1 ಮಗುವಿನ ತಂದೆಯಾಗಿದ್ದ ಧನುಷ್‌, ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದ. ಆದರೆ ತನ್ನ ಮದುವೆ ವಿಚಾರವನ್ನು ಪ್ರಿಯತಮೆಗೆ ತಿಳಿಸದೆ ಆತ ಮುಚ್ಚಿಟ್ಟಿದ್ದ. ಇತ್ತ ಪ್ರಿಯಕರನ ಮೊದಲ ವಿವಾಹ ಸುದ್ದಿ ತಿಳಿದು ಅಮೃತಾಳಿಗೆ ಆಘಾತವಾಗಿತ್ತು. ಇದಾದ ಬಳಿಕ ಆತನ ಸಂಪರ್ಕ ಕಡಿದುಕೊಳ್ಳಲು ಅಮೃತಾ ನಿರ್ಧರಿಸಿದ್ದಳು. ಇನ್ನು ಪ್ರಿಯತಮೆ ಒಲೈಕೆಗೆ ಹಲವು ಬಾರಿ ಯತ್ನಿಸಿದರೂ ಧನುಷ್ ವಿಫಲವಾಗಿದ್ದ. ತನ್ನ ಅಣ್ಣನ ಪ್ರೇಮ ವೈಫಲ್ಯ ತಿಳಿದು ಕೋಪಗೊಂಡ ಸೂರ್ಯ, ಇದೇ ವಿಷಯವಾಗಿ ಅಮೃತಾಳನ್ನು ಭೇಟಿಯಾಗಿ ಸಂಧಾನದ ಮಾತುಕತೆ ನಡೆಸಿದ್ದ. ಆಗಲೂ ಆಕೆ ಪ್ರೇಮ ತಿರಸ್ಕರಿಸಿದ್ದಳು. ಈ ಬೆಳವಣಿಗೆಯಿಂದ ಕೆರಳಿದ ಸೋದರರು, ಕೊನೆಗೆ ಅಮೃತಾಳ ಹತ್ಯೆಗೆ ನಿರ್ಧರಿಸಿದ್ದಾನೆ.

ಅಂತೆಯೇ ಫಿಜ್ಜಾ ಮಳಿಗೆಯಲ್ಲಿ ಕೆಲಸ ಮುಗಿಸಿಕೊಂಡು ಮರಳುತ್ತಿದ್ದ ಅಮೃತಾಳನ್ನು ಅಡ್ಡಗಟ್ಟಿ ಚಾಕುವಿನಿಂದ ಸೂರ್ಯ ಇರಿದಿದ್ದಾನೆ. ಹಲವು ಬಾರಿ ಇರಿತಕ್ಕೊಳಗಾಗಿದ್ದ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಈ ಘಟನೆ ತಿಳಿದ ಕೂಡಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತನ್ನ ಪ್ರೇಮ ನಿರಾಕರಿಸಿದ್ದಕ್ಕೆ ಅಮೃತಾಳಿಗೆ ಧನುಷ್ ಕೂಡ ಕೊಲ್ಲುವ ಬೆದರಿಕೆ ಹಾಕಿದ್ದ. ಹೀಗಾಗಿ ಆತನನ್ನು ಕೂಡ ಬಂಧಿಸಲಾಗಿದೆ. ಔಷಧ ಮಾರಾಟ ಪ್ರತಿನಿಧಿಯಾಗಿ ಸೂರ್ಯ ಕೆಲಸ ಮಾಡುತ್ತಿದ್ದರೆ, ಧನುಷ್ ಸಹ ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದ. ಉಢಾಳತನದಿಂದ ಸೋದರರು ಜೈಲು ಸೇರುವಂತಾಗಿದೆ.