ಅಕ್ಷರ ಶ್ರೀ, ರಶ್ಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಾರವಾರಸಮಾಜಕ್ಕೆ ಸೇವೆ ನೀಡಲು ಹುಟ್ಟಿಕೊಂಡದ್ದು ಅಕ್ಷರ ಫೌಂಡೇಶನ್. ಇದರ ಮುಖೇನ ಪ್ರತಿ ವರ್ಷ ವಿವಿಧ ಕಾರ್ಯಕ್ರಮ ಮೂಲಕ ಅಕ್ಷರ ಪ್ರೀತಿಯನ್ನು ಹಂಚುತ್ತಿರುವುದು ಮಾದರಿ ಎಂದು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ ಕೆ.ಎಚ್. ನಾಯಕ ಹೇಳಿದರು.
ಜೋಯಿಡಾದ ಅಣಶಿಯಲ್ಲಿ ನಡೆದ ಅಕ್ಷರ ಶ್ರೀ, ರಶ್ಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಕ್ಷರಶ್ರೀ ಪ್ರಶಸ್ತಿ ಪಡೆದ ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಮಾತನಾಡಿ, ತಾನು ಕೆಲಸ ಮಾಡುತ್ತಿರುವ ಊರು ಅಣಶಿಗೆ ಬಂದು ಅಕ್ಷರ ಫೌಂಡೇಶನ್ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ. ಜೊತೆಗೆ ನಾನು ಕಲಿಸಿದ ವಿದ್ಯಾರ್ಥಿನಿ ಅಶ್ವಿನಿ ಬಿಲೇಕರ ನನ್ನ ಜೊತೆ ಅಕ್ಷರ ರಶ್ಮೀ ಪ್ರಶಸ್ತಿ ಪಡೆದದ್ದು ಶಿಕ್ಷಕಿಯಾಗಿ ಹೆಮ್ಮೆ ಎಂದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ ನರಸಿಂಹ ಭಟ್ ಪ್ರಕೃತಿಯೊಡನೆ ಮನುಷ್ಯನ ಒಡನಾಟ ಹಾಗೂ ಜೇನಿನ ಮಹತ್ವ ಕುರಿತಾಗಿ ತಿಳಿಸಿದರು.
ಅಕ್ಷರ ರಶ್ಮಿ ಪ್ರಶಸ್ತಿ ಪಡೆದ ಅಶ್ವಿನಿ ಬಿಲೇಕರ ತನಗೆ ಮಾರ್ಗದರ್ಶನ ನೀಡಿದ ಶಿಕ್ಷಕ ಬಳಗವನ್ನು ನೆನೆದರು.
ಪ್ರಾಸ್ತಾವಿಕ ಮಾತುಗಳನ್ನಡಿದ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಮಂಜುನಾಥ ನಾಯಕ, ಅನೇಕರು ಈ ತರಹದ ಕಾರ್ಯಕ್ರಮ ಮಾಡುವ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ನಡೆಯಲಿ ಎಂದರು.ಅಣಶಿಯ ಸ.ಹಿ.ಪ್ರಾ.ಕ. ಶಾಲೆಗೆ ₹೧೩ ಸಾವಿರ ಮೌಲ್ಯದ ಇಪ್ಪತ್ತು ನೀಲಕಮಲ್ ಪ್ಲ್ಯಾಸ್ಟಿಕ್ ಕುರ್ಚಿಯನ್ನು ಫೌಂಡೇಶನ್ ವತಿಯಿಂದ ನೀಡಲಾಯಿತು.
ಗೋಕರ್ಣ ಇಂಟರ್‌ನ್ಯಾಶನಲ್ ಮಾಲೀಕ ಜಿ.ಎನ್. ನಾಯಕ, ಗಾಂವಕಾರ ಮೆಮೋರಿಯಲ್ ಫೌಂಡೇಶನ್‌ನ ಅಧ್ಯಕ್ಷ ದೇವಾನಂದ ಗಾಂವಕಾರ ಶುಭ ಹಾರೈಸಿದರು. ಶಾಲೆಯ ಮುಖ್ಯೋಪಾಧ್ಯಾಯ ವಿದ್ಯಾನಂದ ನಾಯಕ ಅಧ್ಯಕ್ಷತೆ ವಹಿಸಿದ್ದರು. ಊರಿನ ಪ್ರಮುಖರಾದ ಶ್ರೀಕಾಂತ ಅಣಶಿಕರ, ರಾಜೇಂದ್ರ ದೇಸಾಯಿ ಉಪಸ್ಥಿತರಿದ್ದರು. ಕೆ.ಆರ್. ನಾಯಕ ಸ್ವಾಗತಿಸಿದರು. ವಿಷ್ಣು ಪಟಗಾರ ನಿರೂಪಿಸಿ, ಸಿ.ಟಿ. ನಾಯಕ ವಂದಿಸಿದರು.