ಸಮಾಜದಲ್ಲಿ ಅಸಮಾನತೆ, ದ್ವೇಷ ಮತ್ತು ವಿಭಜನೆಯ ರಾಜಕಾರಣ ತೊಡೆದು ಹಾಕಲು ಜನಪರ ಹೋರಾಟ, ಸಾಮಾಜಿಕ ಸೇವೆ ಹಾಗೂ ದೇಶಪ್ರೇಮದ ಮನೋಭಾವ ಬೆಳೆಸಬೇಕಿದೆ
ಕುಷ್ಟಗಿ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಜಾತಿ-ಧರ್ಮ ಆಧಾರಿತ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಿ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕಾದರೆ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಪ್ರಗತಿಪರ ಶಕ್ತಿಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕು ಎಂದು ಚಲನಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಕರೆ ನೀಡಿದರು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಅಸಮಾನತೆ, ದ್ವೇಷ ಮತ್ತು ವಿಭಜನೆಯ ರಾಜಕಾರಣ ತೊಡೆದು ಹಾಕಲು ಜನಪರ ಹೋರಾಟ, ಸಾಮಾಜಿಕ ಸೇವೆ ಹಾಗೂ ದೇಶಪ್ರೇಮದ ಮನೋಭಾವ ಬೆಳೆಸಬೇಕಿದೆ. ಪ್ರಗತಿಪರ ಚಿಂತನೆ ಸಮಾಜದಲ್ಲಿ ಬೇರೂರಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಪ್ರಜ್ಞಾವಂತ ಪ್ರಗತಿಪರ ಪ್ರಜಾಪ್ರಭುಗಳ ಹೋರಾಟ ವೇದಿಕೆಯವರು ನಡೆಸಿದ ಹೋರಾಟಕ್ಕೆ ಬೆಂಬಲ ಸೂಚಿಸಿ ಅಭಿಪ್ರಾಯಪಟ್ಟರು.ಸ್ಥಳೀಯ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯವರೆಗೆ ಬೈಕ್ ರ್ಯಾಲಿ ಹಾಗೂ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.
ಅಹಿಂಸಾ ಚೇತನ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ವೇಳೆ ನಟ ಚೇತನ್ ಸಾರ್ವಜನಿಕರತ್ತ ಕೈಮುಗಿದು ಅಭಿನಂದನೆ ಸಲ್ಲಿಸಿ ಜನರೊಂದಿಗೆ ಆತ್ಮೀಯವಾಗಿ ಬೆರೆತರು. ಅವರ ಆಗಮನಕ್ಕೆ ಅಭಿಮಾನಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಉತ್ಸಾಹದಿಂದ ಸ್ವಾಗತ ಕೋರಿದರು.ಈ ಸಂದರ್ಭದಲ್ಲಿ ಪ್ರಜ್ಞಾವಂತ-ಪ್ರಗತಿಪರ-ಪ್ರಜಾಪ್ರಭುಗಳ ಹೋರಾಟ ವೇದಿಕೆಯ ಪ್ರಧಾನ ಸಂಚಾಲಕ ಬಸವರಾಜ ಗಾಣಿಗೇರ, ಕಿರಣ ಜ್ಯೋತಿ, ಮರಿಯಪ್ಪ ಗುಮಗೇರ, ಪರಶುರಾಮ ಬೋದೂರು, ಹುಸೇನ್ ಬಳೂಟಗಿ, ಲೋಕೇಶ ನೆರೆಬೆಂಚಿ, ಮುತ್ತುರಾಜ ಕಟ್ಟಿಮನಿ, ದುರಗೇಶ ದೇವರಮನಿ, ಹುಸೇನಪ್ಪ ಚಲವಾದಿ, ಶಂಕ್ರಪ್ಪ ಜುಮಲಾಪೂರ, ಸಂಜೀವ ಚಲವಾದಿ, ದುರಗೇಶ ನವಲಹಳ್ಳಿ ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರು, ಕಾರ್ಯಕರ್ತರು ಹಾಗೂ ಚೇತನ್ ಅಭಿಮಾನಿಗಳು ಭಾಗವಹಿಸಿದ್ದರು.