ಡಂಬಳ: ಮೇವುಂಡಿ ಹಾಗೂ ಹೈತಾಪುರ ಗ್ರಾಮದ ಮಧ್ಯೆ ನಿರ್ಮಾಣವಾಗಿರುವ ಕೆಪಿಟಿಸಿಎಲ್ ಗ್ರಿಡ್ ಕಾಮಗಾರಿಯಿಂದ ಭೂಮಿ ಕಳೆದುಕೊಂಡ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ದೊರಕಿಲ್ಲ ಎಂದು ಆರೋಪಿಸಿ ರೈತರು ಗ್ರಿಡ್‌ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಿಡ್ ಕಾಮಗಾರಿಗಾಗಿ ಭೂಮಿ ಬಳಕೆ ಮಾಡಿಕೊಂಡಿರುವ ಇಲಾಖೆಯು ಕೇವಲ ಶೇ. 60ರಷ್ಟು ಪರಿಹಾರವನ್ನು ಮಾತ್ರ ನೀಡಿದ್ದು, ಉಳಿದ ಶೇ. 40ರಷ್ಟು ಪರಿಹಾರ, ಗೋಪುರ(ಕಂಬ) ನಿರ್ಮಾಣ, ವಿದ್ಯುತ್ ತಂತಿ ಅಳವಡಿಕೆ ಹಾಗೂ ಬೆಳೆ ನಷ್ಟಕ್ಕೆ ಸಂಬಂಧಿಸಿದ ಪರಿಹಾರವನ್ನು ಇದುವರೆಗೆ ನೀಡಿಲ್ಲ ಎಂದು ರೈತರು ದೂರಿದ್ದಾರೆ.

ಕಾಮಗಾರಿ ಪೂರ್ಣಗೊಂಡು ಸುಮಾರು ಆರು ತಿಂಗಳು ಕಳೆದಿದ್ದರೂ ರೈತರಿಗೆ ಬಾಕಿ ಪರಿಹಾರ ನೀಡದೇ ಇಲಾಖೆ ಹಾಗೂ ಗುತ್ತಿಗೆದಾರರು ಪರಸ್ಪರ ಹೊಣೆ ತಪ್ಪಿಸಿಕೊಳ್ಳುತ್ತಿದ್ದು, ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಹಕ್ಕಿನ ಪರಿಹಾರಕ್ಕಾಗಿ ನಿರಂತರವಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಬ್ಬು ಬೆಳೆಗಾರರ ಹೋರಾಟಗಾರ ವೀರನಗೌಡ ಪಾಟೀಲ, ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದಪ್ಪ ಇಟಗಿ ನೇತೃತ್ವದಲ್ಲಿ ರೈತರ ಸಭೆ ನಡೆಯಿತು. ಸಭೆಯಲ್ಲಿ ನಾಗಪ್ಪ ಚುಂಗಿನ್, ಪ್ರಭು ಕೊರ್ಲಹಳ್ಳಿ, ಹನುಮಪ್ಪ ಚುಂಗಿನ್, ಶರಣಪ್ಪ ಕೊರ್ಲಹಳ್ಳಿ, ಮಂಜಪ್ಪ ಹಾರೂಗೇರಿ, ಶೇಖಪ್ಪ ಯಾವಗಲ್ಲ, ಮುತ್ತಪ್ಪ, ದೇವೇಂದ್ರಗೌಡ ಪಾಟೀಲ, ಬಸವರಾಜ ಆನಿ, ಯಲ್ಲವ್ವ ಆನಿ, ಶಿವಶಂಕರ ಮುದಿಯಜ್ಜನವರ, ಸಿದ್ದಪ್ಪ ಮಟ್ಟ, ಬಸವರಾಜ ಸೂಗಿ, ಶೇಖಪ್ಪ ಮಟ್ಟಿ, ಚಿದಾನಂದ, ಬಸನಗೌಡ ಪಾಟೀಲ, ಮಲ್ಲಪ್ಪ ಮಲ್ಲಪ್ಪನವರ, ಹನುಮಪ್ಪ ಪೂಜಾರ, ರಾಮಣ್ಣ ರೋಣದ, ಮಹಾಂತೇಶ ಚುಂಗಿನ್, ಹಾಲಪ್ಪ ಚುಂಗಿನ್, ಶರಣಪ್ಪ ಚುಂಗಿನ್, ಶಿವಕುಮಾರ ಲಕ್ಕುಂಡಿ, ಯಲ್ಲಪ್ಪ ಕೋವಿ, ಮುತ್ತಪ್ಪ ಗೂಡಿ, ನವೀನ್ ಕುಮಾರ ತಿಪ್ಪಣ್ಣವರ, ಮಾದೇವಪ್ಪ ಚಿಕ್ಕನಕೊಪ್ಪ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಕ್ಷಣವೇ ಬಾಕಿ ಇರುವ ಪರಿಹಾರವನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಗ್ರಿಡ್ ಕಾಮಗಾರಿಯನ್ನು ಸ್ಥಗಿತಗೊಳಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.