ರಟ್ಟಿಹಳ್ಳಿ: ರಾಜ್ಯದಲ್ಲಿ ಮುಸ್ಲಿಂರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ನೀವು ಇನ್ನು 2 ವರ್ಷ ಎಷ್ಟೇ ಅಟಾಟೋಪಗಳನ್ನು ಮಾಡಿದರೂ, ಮುಂದೆ ನಮ್ಮ ಸರಕಾರ ಬರುತ್ತೆ, ಆ ಸಂದರ್ಭದಲ್ಲಿ ಮತೀಯ ಶಕ್ತಿಗಳ ಮನೆಗೆ ಹೊಕ್ಕು ತಕ್ಕ ಪಾಠ ಕಲಿಸಿ ಕಾನೂನಿನ ಮೂಲಕ ಕಠಿಣ ಕ್ರಮವಾಗುವಂತೆ ನೋಡಿಕೊಳ್ಳಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದಾರೆ.

ಇತ್ತೀಚಿಗೆ ಹತ್ಯೆಯಾದ ಇಲ್ಲಿಯ ಶಿವಾಜಿರಾವ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೇ ವೈಯಕ್ತಿಕವಾಗಿ ₹2.5 ಲಕ್ಷ ಧನಸಹಾಯ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅ‍ವರು, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹಿಂದಿನ ಆಡಳಿತ ನಡೆಸಿದ ಸರಕಾರವನ್ನು ಕಿತ್ತು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮತೀಯ ಶಕ್ತಿಗಳು ಮೂಲೆಗುಂಪಾಗಿವೆ. ಅದೇ ರೀತಿ ರಾಜ್ಯದಲ್ಲೂ ಹಿಂದೂಗಳು ಜಾತಿ ಮತ ಭೇದ ಬಿಟ್ಟು ಒಟ್ಟಾಗಿ ಬಾಳಿ ಎಂದರು.

ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆ ಹಾಗೂ ಹತ್ಯೆಗಳ ಬಗ್ಗೆ ವಿಧಾನಭೆಯಲ್ಲಿ ಚರ್ಚೆ ನಡೆಸಿ ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಸರಕಾರಕ್ಕೆ ಒತ್ತಡ ಹಾಕಲಾಗುವುದು ಎಂದರು.

ಪೊಲೀಸ್‌ ಕಾರ್ಯಕ್ಕೆ ಶ್ಲಾಘನೆ: ಶಿವಾಜಿರಾವ್ ಹತ್ಯೆಯಾದ 2-3 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸ್ ಇಲಾಖೆಯ ಕಾರ್ಯವೈಕರಿ ಅತ್ಯಂತ ಶ್ಲಾಘನೀಯ. ಆದರೆ ರಾಜ್ಯವನ್ನು ಆಡಳಿತ ನಡೆಸುವ ಸರಕಾರ ಕ್ಯಾಬಿನೆಟ್‍ನಲ್ಲಿ ಕೇಸ್‍ಗಳನ್ನು ವಾಪಸ್‌ ಪಡೆದು ಇಲಾಖೆಯ ನೈತಿಕತೆಯನ್ನು ಕುಗ್ಗಿಸುವಂತೆ ಮಾಡುವುದು ಅತ್ಯಂತ ಕೆಟ್ಟ ಬೆಳವವಣಿಗೆ ಎಂದು ಯತ್ನಾಳ್ ಆರೋಪಿಸಿದರು.


ರಾಜ್ಯದ ಕಾನೂನು ಸುವ್ಯಸ್ಥೆ ಕಾಪಾಡಬೇಕಾದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತನ್ನ ಇಲಾಖೆಯ ಬೆಳವಣಿಗೆಯ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಕೇವಲ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಾರೆ. ಆರ್.ಎಸ್.ಎಸ್. ಬ್ಯಾನ್ ಮಾಡುವ ತಾಕತ್ತ ಇಲ್ಲ, ಆಗಿನ ಪ್ರಧಾನ ಮಂತ್ರಿ ನೆಹರು, ಇಂದಿರಾ ಗಾಂಧಿ, ವಲ್ಲಭಭಾಯಿ ಪಟೇಲ್ ಹಾಗೂ ಗೃಹ ಸಚಿವರ ಅಪ್ಪನಿಂದಲೂ ಏನೂ ಮಾಡಲು ಆಗಿಲ್ಲ. ಆದ್ದರಿಂದ ಆರ್.ಎಸ್.ಎಸ್. ಎಂಬ ಬೃಹತ್ ಆಲದ ಮರದ ಸುದ್ದಿ ಬಿಟ್ಟು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಿ ಎಂದು ಟೀಕಿಸಿದರು. ಶಿವಾಜಿರಾವ್ ಹತ್ಯೆಯಲ್ಲಿ ಭಾಗಿಯಾದ ಇನ್ನೊಬ್ಬ ಆರೋಪಿ ಶಿರಾಜ್ ಮುಲ್ಲಾನನ್ನು ಮಂಗಳವಾರ ಮುಂಜಾನೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.