ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಉಮೇಶ ಮರ್ಚಪ್ಪನವರ ಮಾತನಾಡಿ, ದೇಶಕ್ಕೆ ರೈತ ಹೋರಾಟ ಚಳವಳಿ ತಿಳಿಸಿಕೊಟ್ಟ ನಾಡಿನಲ್ಲಿ ರೈತ ಸ್ಮಾರಕ ಇಲ್ಲದಿರುವುದು ಖಂಡನೀಯ ಎಂದರು.

ನರಗುಂದ: ರೈತ ಹೋರಾಟದಲ್ಲಿ ಮಡಿದ ರೈತರ ನೆನಪಿಗಾಗಿ ಸ್ಮಾರಕ ಭವನವನ್ನು ಸರ್ಕಾರ ಸ್ಥಾಪನೆ ಮಾಡದಿರುವುದು ನೋವು ತಂದಿದೆ ಎಂದು ಕರ್ನಾಟಕ ರೈತಸೇನೆ ರಾಜ್ಯ ಅಧ್ಯಕ್ಷ ಶಂಕರಣ್ಣ ಅಂಬಲಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಪಟ್ಟಣ ತಹಸೀಲ್ದಾರ್ ಕಾರ್ಯಾಲಯದಲ್ಲಿ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 1980ರಲ್ಲಿ ನೀರಿನ ಕರ ವಿರೋಧಿಸಿ ಸರ್ಕಾರದ ವಿರುದ್ಧ ಹೋರಾಟದ ವೇಳೆ ತಾಲೂಕಿನ ಚಿಕ್ಕನರಗುಮದ ಗ್ರಾಮದ ರೈತ ವೀರಪ್ಪ ಕಡ್ಲಿಕೊಪ್ಪ ಅವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಅವರ ಸ್ಮಾರಕವನ್ನು ಕೋರ್ಟ್‌ ವೃತ್ತದ ಬಳೆ ನಿರ್ಮಾಣ ಮಾಡಬೇಕೆಂದು 2025ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ರೈತರು ಮನವಿ ಮಾಡಿದಾಗ ಸಚಿವರು ಖಾಸಗಿ ಜಾಗದವರ ಜತೆ ಮಾತನಾಡಿ, ಅವರನ್ನು ಒಪ್ಪಿಸಿ ರೈತ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ 1 ವರ್ಷ ಗತಿಸಿದರೂ ಕಾಮಗಾರಿ ಮಾಡಲು ಸರ್ಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆಂದು ಗಂಭೀರವಾದ ಆರೋಪ ಮಾಡಿದರು.

ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಉಮೇಶ ಮರ್ಚಪ್ಪನವರ ಮಾತನಾಡಿ, ದೇಶಕ್ಕೆ ರೈತ ಹೋರಾಟ ಚಳವಳಿ ತಿಳಿಸಿಕೊಟ್ಟ ನಾಡಿನಲ್ಲಿ ರೈತ ಸ್ಮಾರಕ ಇಲ್ಲದಿರುವುದು ಖಂಡನೀಯ. ಎಲ್ಲ ರೈತ ಸಂಘಟನೆಗಳು ಮತ್ತು ಸಂಘ- ಸಂಸ್ಥೆಯ ಆಶ್ರಯದಲ್ಲಿ ರೈತ ಸ್ಮಾರಕ ಭವನ ನಿರ್ಮಾಣ ಮಾಡಲು ದೇಣಿಗೆ ಸೇರಿಸಿ ನಿರ್ಮಾಣ ಮಾಡಲು ಕರೆ ನೀಡಿದರು.

ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಜು. 21ರಂದು ಬೆಳಗ್ಗೆ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ರೈತ ಸಂಘಗಳು ಮತ್ತು ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳಿಗೆ ಸಮಯ ನಿಗದಿ ಮಾಡಲಾಗುವುದು ಎಂದರು.

ರೈತ ಮುಖಂಡರಾದ ಬಸವರಾಜ ಸಾಬಳೆ, ಚನ್ನ ನಂದಿ, ಫಕೀರಪ್ಪ ಜೋಗಣ್ಣವರ, ವೀರಣ್ಣ ಸೊಪ್ಪಿನ, ವಿಠಲ ಜಾಧವ, ಶಂಕರಗೌಡ ಪಾಟೀಲ, ನಾಗೇಶ ಅಪೋಜಿ, ಮನೋಹರ ಹುಯಿಲಗೋಳ, ನಬಿಸಾಬ ಕಿಲ್ಲೇದಾರ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ, ಎಸ್.ಬಿ. ಮಾಲಗೊಂಡ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.12ರಂದು 11ನೇ ಪುಣ್ಯಸ್ಮರಣೋತ್ಸವ

ನರಗುಂದ: ಪಟ್ಟಣದ ಸಿದ್ದೇಶ್ವರ ಬೆಟ್ಟದ ಶರಣೆ ಕಲ್ಯಾಣಮ್ಮನವರ 11ನೇ ಪುಣ್ಯಸ್ಮರಣೋತ್ಸವ ಹಾಗೂ ಮೂರ್ತಿ ಪ್ರತಿಷ್ಠಾಪಣೆಯ ದ್ವಿತೀಯ ವಾರ್ಷಿಕೋತ್ಸವ ಜು. 12ರಂದು ಜರುಗಲಿದೆ.ಪಂಚಗೃಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜು. 11ರಂದು ರಾತ್ರಿ ಭಜನಾ ಮೇಳದವರ ಜಾಗರಣೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.ಜು. 12ರಂದು ಬೆಳಗ್ಗೆ ಸಿದ್ದೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ, ಪೂಜಾ ವಿಧಿವಿಧಾನಗಳು ನಡೆಯಲಿವೆ. ಶಾಸಕ ಸಿ.ಸಿ. ಪಾಟೀಲ ಭಾಗವಹಿಸಲಿದ್ದಾರೆ ಎಂದು ಭಕ್ತರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.