ಲಕ್ಷ್ಮೇಶ್ವರ: ಮುಂಗಾರು ಹಂಗಾಮಿನ ಮಳೆ ಕೊರತೆ ಆಗಿರುವುದರಿಂದ ಲಕ್ಷ್ಮೇಶ್ವರ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರಿಂದ ಬೆಳೆವಿಮೆ ಪರಿಹಾರ ಕೊಡಿಸುವ ಹೆಸರಿನಲ್ಲಿ ಹಣ ವಸೂಲಿ ಮಾಡುವ ಮಧ್ಯವರ್ತಿಗಳ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮಂಗಳವಾರ ಪಟ್ಟಣದ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು. ತಾಲೂಕಿನಲ್ಲಿ 2025- 26ನೇ ಸಾಲಿನ ಹಿಂಗಾರು ಬೆಳೆವಿಮೆ ಜಾರಿ ಮಾಡಬೇಕು ಹಾಗೂ 2026-27ನೇ ಸಾಲಿನ ಮುಂಗಾರು ಮಳೆ ತೀವ್ರವಾಗಿ ಕೊರತೆಯಾಗಿರುವ ಪರಿಣಾಮ ರೈತರು ಬಿತ್ತನೆ ಮಾಡಿದ ಹೆಸರು, ಜೋಳ, ಮೆಣಸಿನಕಾಯಿ, ಬೆಳ್ಳುಳ್ಳಿ ಮೆಕ್ಕೆಜೋಳ, ಹತ್ತಿ, ತೊಗರಿ, ಶೇಂಗಾ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳು ನೀರಿನ ಕೊರತೆಯಿಂದ ಬಾಡುತ್ತಿವೆ. ಅನೇಕ ಗ್ರಾಮಗಳಲ್ಲಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ಹೊಲದಲ್ಲಿ ಬಿತ್ತಿದ ಬೆಳೆಯು ಮೇಲಕ್ಕೆ ಏಳದೆ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಬೆಳೆವಿಮೆ ಪರಿಹಾರದ ಸಂಪೂರ್ಣ ಮೊತ್ತವನ್ನು ಯಾವುದೇ ಕಡಿತ ಅಥವಾ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಜಮಾ ಮಾಡಬೇಕು. 2025- 26ನೇ ಸಾಲಿನ ಬಹುವಾರ್ಷಿಕ ಬೆಳೆವಿಮೆ ಏಜೆಂಟರು 50-50 ಅನುಪಾತದಲ್ಲಿ ಬೆಳೆವಿಮೆ ಜಮಾ ಆಗಿವೆ. ನೇರವಾಗಿ ಬೆಳೆವಿಮೆ ಮಾಡಿಸಿದ ರೈತರಿಗೆ ಬೆಳೆವಿಮೆ ಜಮಾ ಆಗಿರುವುದಿಲ್ಲ. ಕೂಡಲೇ ಅಂತಹ ರೈತರಿಗೆ ಬೆಳೆವಿಮೆ ಜಮಾ ಹಣ ರೈತ ಖಾತೆಗೆ ಜಮಾ ಮಾಡಬೇಕು. ರೈತರಿಂದ ಕೃಷಿ ಮತ್ತು ಸಹಕಾರಿ ಬ್ಯಾಂಕ್‌ಗಳ ಸಾಲ ವಸೂಲಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಬಡ್ಡಿ ಮನ್ನಾ ಹಾಗೂ ಮರುಪಾವತಿಗೆ ವಿಶೇಷ ಸೌಲಭ್ಯ ನೀಡಬೇಕು. ಇಲ್ಲವಾದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಈ ವೇಳೆ ಮಹಾಂತೇಶ ಮಣಕವಾಡ, ಮಲ್ಲಿಕಾರ್ಜುನ ನಿರಾಲೋಟ, ವಿನಯ ಪಾಟೀಲ, ಆನಂದ ಅಮರಶೆಟ್ಟಿ, ಸಿರಾಜ ಡಾಲಾಯತ, ಪ್ರವೀಣ ಆಚಾರಿ, ಲಕ್ಷ್ಮಣ ಬೆಟಗೇರಿ, ಕೈಸರಮಹಮ್ಮದ ಅಲಿ, ಮಹಾಂತೇಶ ಇಟಗಿ, ನಾಗರಾಜ ಸಾಲಾವಳಿಮಠ, ಕಿರಣ ಬಡಿಗೇರ, ಅಷ್ಪಾಕ ಬಾಗೋಡಿ, ಮಲ್ಲೇಶ ಬನ್ನಿ, ದುದ್ದು ಅಕ್ಕಿ, ಆಕಾಶ ಭಜಂತ್ರಿ, ಬಸವರಾಜ ಬೂದಿಹಾಳ, ಮಲ್ಲಿಕಜಾನ ಗದ್ವಾಲ್, ನವಾಜ ಅತ್ತಾರ, ಮಹಾಂತೇಶ ಉಮಚಗಿ, ಧರ್ಮಶಿಂಗ್ ಕಿಲ್ಲೆದಾರ ಇದ್ದರು. ಬರಪೀಡಿತ ಜಿಲ್ಲೆ ಎಂದು ಘೋಷಿಸಿ

ಗದಗ: ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಯನಗೌಡ್ರ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿದ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಜಯನಗೌಡ್ರ ಮಾತನಾಡಿ, ಪ್ರಸಕ್ತ ವರ್ಷ ಜಿಲ್ಲಾದ್ಯಂತ ಮಳೆ ಇಲ್ಲದ ಕಾರಣಕ್ಕಾಗಿ ಬರಪೀಡಿತ ಪ್ರದೇಶವಾಗಿದೆ. ಬಿತ್ತಿದ್ದ ಬೆಳೆಗಳು ಮಳೆ ಇಲ್ಲದೇ ಒಣಗುತ್ತಿವೆ. ಜಾನುವಾರುಗಳಿಗೆ ಹೊಟ್ಟು, ಮೇವು ಕೊರತೆ ಉಂಟಾಗುವ ಸಂಭವ ಇದೆ. ರೈತರು ಗುಳೆ ಹೋಗುವ ದಿನಗಳು ಬರಬಹುದು. ಈ ಎಲ್ಲ ಕಾರಣದಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಬರಗಾಲ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಹಾಗೂ ದನಕರುಗಳಿಗೆ ಮೇವಿನ ಬ್ಯಾಂಕ್‌ ತೆರೆಯಬೇಕು ಎಂದು ಆಗ್ರಹಿಸಿದರು.ಈ ವೇಳೆ ಸಂಜೀವ ಹುಡೇದ, ರವಿ, ವೀರಯ್ಯಸ್ವಾಮಿ ಹಿರೇಮಠ, ಈರಪ್ಪ ಸಿದ್ನೆಕೊಪ್ಪ ಸೇರಿದಂತೆ ಅನೇಕರು ಇದ್ದರು.