ನಗರದ ರಸ್ತೆಗಳ ಅವ್ಯವಸ್ಥೆಯಿಂದಾಗಿ ಜಿಬಿಎ 5 ನಗರ ಪಾಲಿಕೆಗಳ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳ ಸಮೀಕ್ಷೆಯನ್ನು ಡ್ಯಾಶ್ ಕ್ಯಾಮ್‌ಗಳ ಮೂಲಕ ನಡೆಸಿ, ವರದಿ ಸಲ್ಲಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು : ನಗರದ ರಸ್ತೆಗಳ ಅವ್ಯವಸ್ಥೆಯಿಂದಾಗಿ ಜಿಬಿಎ 5 ನಗರ ಪಾಲಿಕೆಗಳ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳ ಸಮೀಕ್ಷೆಯನ್ನು ಡ್ಯಾಶ್ ಕ್ಯಾಮ್‌ಗಳ ಮೂಲಕ ನಡೆಸಿ, ವರದಿ ಸಲ್ಲಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದೋಷಗಳ ಸಂಬಂಧ ಗುತ್ತಿಗೆದಾರರಿಂದಲೇ ದುರಸ್ತಿ
ವರದಿ ಬಂದ ನಂತರ 5 ನಗರ ಪಾಲಿಕೆಗಳ ದೋಷ ಹೊಣೆಗಾರಿಕೆ ಅವಧಿಯಲ್ಲಿರುವ ಹಾಗೂ ಈ ಅವಧಿ ಮುಕ್ತಾಯಗೊಂಡಿರುವ ರಸ್ತೆಗಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಬೇಕು. ಡಿಎಲ್‌ಪಿ ಅವಧಿ ಒಳಗಿರುವ ರಸ್ತೆಗಳಲ್ಲಿ ಕಂಡುಬರುವ ದೋಷಗಳ ಸಂಬಂಧ ಗುತ್ತಿಗೆದಾರರಿಂದಲೇ ದುರಸ್ತಿಪಡಿಸುವಂತೆ ಸೂಚಿಸಿದ್ದಾರೆ.
ರಸ್ತೆಗಳ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಗುರುವಾರ ನಡೆದ ವರ್ಚುವಲ್ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎಂಜಿನಿಯರ್‌ಗಳ ವಾಹನಗಳಿಗೆ ಡ್ಯಾಶ್ ಕ್ಯಾಮ್ ಅಳವಡಿಸಬೇಕು. ಅವುಗಳಿಂದ ರೆಕಾರ್ಡ್ ಮಾಡಲಾದ ವಿಡಿಯೋ ದಾಖಲಾತಿಗಳ ಆಧಾರದ ಮೇಲೆ ರಸ್ತೆಗಳ ಗುಣಮಟ್ಟದ ಕುರಿತು ಸಮಗ್ರ ವರದಿ ಸಲ್ಲಿಸಬೇಕು. ಮೊದಲ ಹಂತದಲ್ಲಿ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳ ಸಮೀಕ್ಷೆ ನಡೆಸಬೇಕು. ನಂತರ ವಾರ್ಡ್ ರಸ್ತೆಗಳನ್ನು ಇದೇ ವಿಧಾನದಲ್ಲಿ ಪರಿಶೀಲಿಸಬೇಕೆಂದು ಸೂಚಿಸಿದರು.
ಡ್ಯಾಶ್ ಕ್ಯಾಮ್‌ಗಳ ಮೂಲಕ ಪ್ರತಿದಿನ ಸಮೀಕ್ಷೆ
ಡ್ಯಾಶ್ ಕ್ಯಾಮ್‌ಗಳ ಮೂಲಕ ಪ್ರತಿದಿನ ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ಸಮೀಕ್ಷೆ ನಡೆಸಬೇಕು. ಸೆರೆಹಿಡಿಯಲಾದ ರಸ್ತೆಗಳ ದೃಶ್ಯಾವಳಿಗಳನ್ನು ಆಯಾಪಾಲಿಕೆಗಳ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ(ಐಟಿ ವಿಭಾಗ) ಸಲ್ಲಿಸಬೇಕು. ದೃಶ್ಯಾವಳಿಗಳ ದತ್ತಾಂಶವನ್ನು ಕೂಲಂಕಷವಾಗಿ ಪರಿಶೀಲಿಸಿ, ವರದಿ ಸಿದ್ಧಪಡಿಸಿ ಕೂಡಲೇ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳು, ಪಾದಚಾರಿ ಮಾರ್ಗಗಳು ಹಾಗೂ ಇತರೆ ರಸ್ತೆ ಮೂಲಸೌಕರ್ಯಗಳ ಪ್ರಸ್ತುತ ಸ್ಥಿತಿಯನ್ನು ವಿಡಿಯೋ ದಾಖಲಾತಿಗಳ ಮೂಲಕ ಸಂಗ್ರಹಿಸಿ, ಸಮಗ್ರ ರಸ್ತೆ ಮೂಲಸೌಕರ್ಯ ಸಂಗ್ರಹ ಸಿದ್ಧಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಮಾಹಿತಿ ರಸ್ತೆ ನಿರ್ವಹಣೆ, ಭವಿಷ್ಯದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆ ಹಾಗೂ ರಸ್ತೆ ಮೂಲಸೌಕರ್ಯಗಳ ಪರಿಣಾಮಕಾರಿ ಮೇಲ್ವಿಚಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ವಿಶೇಷ ಆಯುಕ್ತ ನಿತೀಶ್, ನಗರ ಪಾಲಿಕೆಗಳ ಆಯುಕ್ತರಾದ ಜಿ. ಜಗದೀಶ್ ಹಾಗೂ ಡಾ. ರಾಜೇಂದ್ರ ಕೆ.ವಿ, ಅಪರ ಆಯುಕ್ತರಾದ ಕವಿತಾ ರಾಜರಾಂ, ಲೋಖಂಡೆ ಸ್ನೇಹಲ್ ಸುಧಾಕರ್, ವೆಂಕಟಾಚಲಪತಿ, ನವೀನ್ ಕುಮಾರ್ ರಾಜು, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್ ಇದ್ದರು.


