ಎಚ್‌ಎಂಟಿ ಕಾರ್ಖಾನೆಗೆ ಸೇರಿದ ಜಾಗದ ಲೂಟಿಯಲ್ಲಿ 1999ರಿಂದ 2004ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದ ನಗರಾಭಿವೃದ್ಧಿ ಖಾತೆ ಸಚಿವರ ನೇರ ಪಾತ್ರವಿದೆ’ ಎಂದು ಕೇಂದ್ರದ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಗಂಭೀರ ಆಪಾದನೆ ಮಾಡಿದ್ದಾರೆ.
ಬೆಂಗಳೂರು : ‘ನಗರದ ಎಚ್‌ಎಂಟಿ ಕಾರ್ಖಾನೆಗೆ ಸೇರಿದ ಜಾಗದ ಲೂಟಿಯಲ್ಲಿ 1999ರಿಂದ 2004ರ ಅವಧಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ನಗರಾಭಿವೃದ್ಧಿ ಖಾತೆ ಸಚಿವರ ನೇರ ಪಾತ್ರವಿದೆ’ ಎಂದು ಕೇಂದ್ರದ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಗಂಭೀರ ಆಪಾದನೆ ಮಾಡಿದ್ದಾರೆ.
ಗುರುವಾರ ಕುಮಾರಸ್ವಾಮಿ ಅವರು ಎಚ್‌ಎಂಟಿಗೆ ಸೇರಿದ ಜಾಗವನ್ನು ಮಾಧ್ಯಮ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಳೆದ 1999-2004ರ ಅವಧಿಯಲ್ಲಿ ಎಚ್ಎಂಟಿ ಕಂಪನಿಗೆ ಸೇರಿದ 175 ಎಕರೆ ಭೂಮಿ ಪರಭಾರೆ ಆಗಿದ್ದು, ಆ ಪೈಕಿ ಖಾಸಗಿ ಶಕ್ತಿಗಳು ಅಕ್ರಮವಾಗಿ ಲೂಟಿ ಹೊಡೆದು ಭವ್ಯವಾದ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಭೂಮಿ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವರಿಂದ ವರದಿ ಬಂದ ನಂತರ ಸೂಕ್ತ ತನಿಖೆ ನಡೆಸಲಾಗುವುದು ಎಂದು ಘೋಷಿಸಿದರು.
ಆ ಅವಧಿಯಲ್ಲಿ ಅಕ್ರಮವಾಗಿ ಪರಭಾರೆ ಮಾಡಲಾಗಿರುವ ಭೂಮಿಯಲ್ಲಿ ತಲೆ ಎತ್ತಿರುವ ಅಪಾರ್ಟ್‌ಮೆಂಟ್‌ಗಳು ಹಾಗೂ ಗಗನಚುಂಬಿ ಕಟ್ಟಡಗಳ ಪ್ರದೇಶಗಳನ್ನು ಖುದ್ದಾಗಿ ಪರಿಶೀಲಿಸಿದ ಕುಮಾರಸ್ವಾಮಿ ಅವರು ಮುಖ್ಯವಾಗಿ ಅಕ್ವಿಲಾ ಹೈಟ್ಸ್, ಗೋವಿಯಾನು ಎರಿಟಿಸ್, ಪ್ರೆಸ್ಟೀಜ್ ಕೆನ್ಸಿಂಗ್ಟನ್ ಗಾರ್ಡನ್, ಕೆಕೆಆರ್ ಎಎಂಆರ್ ರುಬೆ ಅಪಾರ್ಟ್‌ಮಂಟ್ ಸೇರಿ ವಿವಿಧ ಭವ್ಯ ಕಟ್ಟಡಗಳು ಇರುವ ಪ್ರದೇಶಗಳ ಪರಿಶೀಲನೆ ನಡೆಸಿದರು.
ಕೈಗಾರಿಕೆ ಉದ್ದೇಶಕ್ಕಾಗಿ ಮೀಸಲಾಗಿದ್ದ ಎಚ್ಎಂಟಿ ಜಾಗ ಲೂಟಿ
ಕೈಗಾರಿಕೆ ಉದ್ದೇಶಕ್ಕಾಗಿ ಮೀಸಲಾಗಿದ್ದ ಎಚ್ಎಂಟಿ ಜಾಗವನ್ನು ಲೂಟಿ ಮಾಡುವ ಕೆಲಸದಲ್ಲಿ ಅಂದಿನ ಕಂಪನಿ ಅಧಿಕಾರಿಗಳು, ರಾಜ್ಯ ಸರ್ಕಾರದ ಪ್ರಭಾವಿಗಳು ಭಾಗಿಯಾಗಿದ್ದರು. ಅಕ್ರಮವಾಗಿ ಕಬಳಿಸಿರುವ ಈ ಭೂಮಿಯನ್ನು ಸಚಿವ ಈಶ್ವರ ಖಂಡ್ರೆ ಅವರು ರಾಜ್ಯ ಸರ್ಕಾರಕ್ಕೆ ವಾಪಸ್ ಪಡೆಯುತ್ತಾರೆಯೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೊರಟಿದ್ದವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದವರ ಪ್ರಮೇಯದಿಂದ ಎಚ್ಎಂಟಿ ಭೂಮಿ ಖಾಸಗಿಯವರ ಪಾಲಾಗಿದೆ.
ಈ ರಾಜ್ಯದ ಜನತೆಗೆ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಇವತ್ತು ಬಿಡದಿ ಟೌನ್ ಶಿಪ್ ಮಾಡುತ್ತೇನೆ ಎಂದು ಹೊರಟಿರುವ ಮಹಾನುಭಾವನೇ ಅಂದು ಎಚ್ಎಂಟಿ ಜಾಗ ಖಾಸಗಿ ಶಕ್ತಿಗಳ ಪಾಲಾಗಲು ಪ್ರಮುಖ ಪಾತ್ರ ವಹಿಸಿದ್ದವರು. 1999-2004ರ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ನಗರಾಭಿವೃದ್ಧಿ ಮಂತ್ರಿಯಾಗಿದ್ದ ವ್ಯಕ್ತಿ ಮಾಡಿರುವ ನಗರಾಭಿವೃದ್ಧಿಯ ಹಣೆಬರಹ ಇದು. ಇಂದು ಪ್ರಜಾಸೇವೆ ಎಂದು ಭಜನೆ ಮಾಡುತ್ತಿರುವ ವ್ಯಕ್ತಿ ಅಂದು ಎಚ್‌ಎಂಟಿ ವಿಷಯದಲ್ಲಿ ಮಾಡಿರುವ ಪ್ರಜಾಸೇವೆ ಇಲ್ಲಿ ಯಾವ ರೀತಿ ಇದೆ ಎಂಬುದನ್ನು ನೋಡಿ ಎಂದು ಹರಿಹಾಯ್ದರು.
ಕಟ್ಟಡಗಳಿಗೆ ಜಾಗ ಕೊಡಿಸಿದವರು ಯಾರು?: ಎಚ್ಎಂಟಿಯ ಜಾಗದಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಖಾಸಗಿ ಅಪಾರ್ಟ್‌ಮೆಂಟ್‌ಗಳು, ಗಗನಚುಂಬಿ ಕಟ್ಟಡಗಳಿಗೆ ಜಾಗ ಕೊಡಿಸಿದವರು ಯಾರು? ಅವುಗಳಲ್ಲಿ ಯಾರು ಯಾರು ವಾಸ ಮಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಭೂಮಿ ನುಂಗಿ ನೀರು ಕುಡಿದ ವ್ಯಕ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ಸಚಿವ ಕುಮಾರಸ್ವಾಮಿ ಅವರು ಸಂಬಂಧಪಟ್ಟ ದಾಖಲೆ ಮತ್ತು ನಕ್ಷೆಗಳ ಸಮೇತ ಮಾಹಿತಿ ನೀಡಿದರು.
ಅರಣ್ಯ ಭೂಮಿ...ಅರಣ್ಯ ಭೂಮಿ...ಎಂದು ದಿನನಿತ್ಯ ಹೇಳಿಕೆ ನೀಡುವ ಮಿಸ್ಟರ್ ಈಶ್ವರ ಖಂಡ್ರೆ ಅವರೇ, ಎಚ್ಎಂಟಿಯ ಜಾಗದಲ್ಲಿ ಅಕ್ರಮವಾಗಿ ಕೊಳ್ಳೆ ಹೊಡೆದವರಲ್ಲಿ ಬೆಂಗಳೂರು, ಬಿಡದಿ ಪ್ರದೇಶಗಳನ್ನು ವಿಶ್ವ ದರ್ಜೆ ಪ್ರದೇಶಗಳನ್ನಾಗಿ ಮಾಡಲು ಹೊರಟಿರುವ ವ್ಯಕ್ತಿ ಪಾಲು ಎಷ್ಟಿದೆ ಎಂಬುದನ್ನು ಸ್ವಲ್ಪ ಹೇಳುವಿರಾ ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಹೇಗಾದರೂ ಮಾಡಿ ಎಚ್ಎಂಟಿ ಕಾರ್ಖಾನೆಗೆ ಮರುಜೀವ ಕೊಡಬೇಕೆಂದು ನಾನು ಪ್ರಯತ್ನಿಸುತ್ತಿದ್ದರೆ, ಅದರ ಜಾಗವನ್ನು ಕೊಳ್ಳೆ ಹೊಡೆಯಲು ಕೆಲವರು ಹೊಂಚು ಹಾಕಿ ಕೂತಿದ್ದಾರೆ. ಯಾವುದೇ ಕಾರಣಕ್ಕೂ ಎಚ್ಎಂಟಿ ಉಳಿಯಬಾರದು ಎಂದು ರಾಜ್ಯ ಸರ್ಕಾರ ಭಾವಿಸಿದಂತಿದೆ. ಹೀಗಾಗಿ ಅನಗತ್ಯವಾಗಿ ಕಾಟ ಕೊಟ್ಟು ಇಡೀ ಭೂಮಿ ಹೊಡೆಯುವ ಪ್ಲ್ಯಾನ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ, ಪ್ರೇಮಚಂದ್ ಮೌರ್ಯ, ಎಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಕ್ರಮ ಪರಭಾರೆ ನಿಲ್ಲಿಸಿದ್ದೇ ನಾನು:ಎಚ್‌ಡಿಕೆ
ಹಿಂದೆ 2006ರಲ್ಲಿ ನಾನು ಮುಖ್ಯಮಂತ್ರಿ ಆಗುವ ತನಕ ಎಚ್ಎಂಟಿ ಭೂಮಿಯನ್ನು ಮನಸೋ ಇಚ್ಛೆ ನುಂಗಿ ನೀರು ಕುಡಿದರು. ನಾನು ಅಧಿಕಾರಕ್ಕೆ ಬಂದ ಕೂಡಲೇ ಯಾವುದೇ ಕಾರಣಕ್ಕೂ ಎಚ್ಎಂಟಿ ಭೂಮಿ ಮಾರಾಟ ಮಾಡುವಂತಿಲ್ಲ ಹಾಗೂ ಅದನ್ನು ನೋಂದಣಿ ಮಾಡುವಂತಿಲ್ಲ ಎಂದು ಕಟ್ಟಾದೇಶ ಹೊರಡಿಸಿದೆ. ಅದರ ಫಲವಾಗಿಯೇ ಇವತ್ತು ಇಷ್ಟು ಭೂಮಿ ಉಳಿದುಕೊಂಡಿದೆ.
ನಿಮಗೆ ಗೊತ್ತಿರಲಿ, ಅಕ್ರಮ ಪರಭಾರೆ ಮಾಡಲಾಗಿರುವ ಜಾಗದಲ್ಲಿ ನಿರ್ಮಿಸಿರುವ ಅಪಾರ್ಟ್ಮೆಂಟ್ ಗಳಿಗೆ ಇನ್ನೂ ಖಾತೆಯೇ ಆಗಿಲ್ಲ. ಅಲ್ಲಿನ ಫ್ಲ್ಯಾಟ್ ಮಾಲೀಕರಿಗೆ ಈವರೆಗೂ ಇ-ಖಾತಾ ಆಗಿಲ್ಲ. ನನ್ನನ್ನು ಭೇಟಿಯಾಗಿದ್ದ ಪ್ಲಾಟುಗಳ ಮಾಲೀಕರು ಖಾತೆ ಮಾಡಿಸಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ಕಟ್ಟಡ ಕಟ್ಟಿ ಇವರಿಗೆ ಮಾರಿ ಹೋದವರು ಹೀಗೆ ಮೋಸ ಮಾಡಿದ್ದಾರೆ. ಪ್ಲಾಟ್ ಖರೀದಿ ಮಾಡಿದವರು ಈಗ ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಚಿವರು ಹೇಳಿದರು.
ಅರಣ್ಯ ಭೂಮಿ...ಅರಣ್ಯ ಭೂಮಿ...ಎಂದು ದಿನನಿತ್ಯ ಹೇಳಿಕೆ ನೀಡುವ ಮಿಸ್ಟರ್ ಈಶ್ವರ ಖಂಡ್ರೆ ಅವರೇ, ಎಚ್ಎಂಟಿಯ ಜಾಗದಲ್ಲಿ ಅಕ್ರಮವಾಗಿ ಕೊಳ್ಳೆ ಹೊಡೆದವರಲ್ಲಿ ಬೆಂಗಳೂರು, ಬಿಡದಿ ಪ್ರದೇಶಗಳನ್ನು ವಿಶ್ವದರ್ಜೆ ಪ್ರದೇಶಗಳನ್ನಾಗಿ ಮಾಡಲು ಹೊರಟಿರುವ ವ್ಯಕ್ತಿಯ ಪಾಲು ಎಷ್ಟಿದೆ ಎಂಬುದನ್ನು ಸ್ವಲ್ಪ ಹೇಳುವಿರಾ?
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ
