ನವಲಗುಂದ:
ರಾಜ್ಯಾದ್ಯಂತ ಕುಡಿಯಲು ನೀರಿನ ಬರ ಹೋಗಲಾಡಿಸಲು ಪ್ರತಿಯೊಂದು ತಾಲೂಕಿನಲ್ಲಿ ಕೆರೆಗಳ ಪುನಶ್ಚೇತನಗೊಳಿಸಿ ಅಂತರ್ಜಲ ಮಟ್ಟ ಕಾಪಾಡಲು ಡಿ. ವೀರೇಂದ್ರ ಹೆಗ್ಗಡೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.ಸೋಮವಾರ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಕೆರೆ ಹೊಳೆತ್ತುವ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಜಗದೀಶ ಹಡಪದ ಮಾತನಾಡಿ, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಯೋಜನೆ ಯಶಸ್ಸಿಗೆ ಸಹಕಾರ ನೀಡುವ ಅವಶ್ಯಕತೆಯಿದೆ ಎಂದರು.ಕೆರೆ ಸಮಿತಿ ಅಧ್ಯಕ್ಷ ಕೆಂಪೇಗೌಡ ಪಾಟೀಲ ಮಾತನಾಡಿ, ಗ್ರಾಮದ ಕೆರೆ ಅಭಿವೃದ್ಧಿ ಕಾರ್ಯ ನೆರವೇರುತ್ತಿರುವುದು ಇಡೀ ಗ್ರಾಮಕ್ಕೆ ಹೆಮ್ಮೆಯ ವಿಷಯ. ಕೆರೆ ಪುನಶ್ಚೇತನ ಯಶಸ್ವಿಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಯೋಜನಾಧಿಕಾರಿ ದಿನೇಶ ಸೇರಿಗಾರ, ಸತೀಶ, ಫಕೀರೇಶ ಎಣಿಗಾರ, ಕೃಷಿ ಮೇಲ್ವಿಚಾರಕ ತೋಟಯ್ಯ ಎಂ.ಬಿ. ಹಾಗೂ ಕೆರೆ ಸಮಿತಿಯ ಸದಸ್ಯರು ಮತ್ತು ಸ್ವಸಹಾಯ ಸಂಘ, ಪ್ರಗತಿ ಬಂದು ತಂಡದ ಸದಸ್ಯರು ಗ್ರಾಪಂ ಸದಸ್ಯರು ಮತ್ತು ಸೇವಾ ಪ್ರತಿನಿಧಿ ಸವಿತಾ ಪಾಲ್ಗೊಂಡಿದ್ದರು.