ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಜು. 16ರಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ರೈತ ಜಾಗೃತ ಸಮಾವೇಶ ಏರ್ಪಡಿಸಲಾಗಿದೆ.

ಹುಬ್ಬಳ್ಳಿ:

ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಜು. 16ರಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ರೈತ ಜಾಗೃತ ಸಮಾವೇಶ ಏರ್ಪಡಿಸಲಾಗಿದೆ ಎಂದು ಸೇನೆ ರಾಜ್ಯಾಧ್ಯಕ್ಷ ಡಾ. ವಾಸುದೇವ ಮೇಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಭಿತ್ತಿಪತ್ರ ಬಿಡುಗಡೆಗೊಳಿಸಿದ ಅವರು, ಅಂದು ಬೆಳಗ್ಗೆ 10ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸವಾಯಿ ಗಂಧರ್ವ ಸಭಾಭವನದ ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀ, ಅಣ್ಣಿಗೇರಿ ದಾಸೋಹ ಮಠದ ಡಾ. ಶಿವಕುಮಾರ ಶ್ರೀ, ಮಂಟೂರು ಆನಂದ ಆಶ್ರಮದ ಮಹಾಂತಲಿಂಗ ಶ್ರೀ, ಅಂಕಲಗಿ ಅಡವಿ ಸಿದ್ಧೇಶ್ವರಮಠದ ಇಂದುಧರ ದೇವರು, ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಮನಸೂರು ಮಠದ ಬಸವರಾಜ ದೇವರು ವಹಿಸುವರು ಎಂದರು.

ಸೇನೆ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಪೂಜಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಸಂತೋಷ ಲಾಡ್, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಎಂ.ಆರ್‌. ಪಾಟೀಲ, ಎನ್‌.ಎಚ್‌. ಕೋನರಡ್ಡಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಉದ್ಯಮಿ ಡಾ. ವಿ.ಎಸ್‌.ವಿ. ಪ್ರಸಾದ ಸೇರಿದಂತೆ ಹಲವರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಸಮಾವೇಶದಲ್ಲಿ ರೈತರ ಸಾಲಮನ್ನಾ, ರಾಜ್ಯವನ್ನು ಬರಪೀಡಿತವೆಂದು ಘೋಷಣೆ, ಬೆಣ್ಣಿಹಳ್ಳದ ಅವೈಜ್ಞಾನಿಕ ಕಾಮಗಾರಿ ಸರಿಪಡಿಸುವುದು, ಬೆಳೆ ಪರಿಹಾರ ಬಿಡುಗಡೆ, ನಮ್ಮ ಹೊಲ-ನಮ್ಮ ದಾರಿ ಕಾಮಗಾರಿ ಆರಂಭಿಸುವುದು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಲಾಗುವುದು. ಈ ಸಮಾವೇಶದಲ್ಲಿ ಸಾವಿರಕ್ಕೂ ಅಧಿಕ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಫಕೀರಪ್ಪ ಪೂಜಾರ, ತಾಲೂಕು ಅಧ್ಯಕ್ಷರಾದ ರಾಮನಗೌಡ ಪರ್ವತಗೌಡ್ರ, ಯಲ್ಲಪ್ಪ ದುಂದೂರ, ಶಿವಾನಂದ ಮಾಯಕಾರ, ರಾಮನಗೌಡ ಬಸನಗೌಡ, ಕಲ್ಲಪ್ಪ ಶಿಶುವಿನಹಳ್ಳಿ ಸೇರಿದಂತೆ ಹಲವರಿದ್ದರು.