ದೆಹಲಿಯಲ್ಲಿ ಮಂಗಳವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮಂಡಲಹಳ್ಳಿ ಗ್ರಾಮದ ರೈತರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಕನ್ನಡಪ್ರಭ ವಾರ್ತೆ ನವದೆಹಲಿ

ಸರ್ಕಾರದ ಚಿತಾವಣೆಯಿಂದಲೇ ಅಧಿಕಾರಿಗಳು ಸೋಮವಾರ ಮಂಡಲಹಳ್ಳಿಗೆ ಸರ್ವೆಗೆ ಹೋಗಿದ್ದರು. ಬಿಡದಿ ಟೌನ್‌ಶಿಪ್‌ ವಿಷಯದಲ್ಲಿ ಮುಖ್ಯಮಂತ್ರಿಗೆ ಇಷ್ಟೊಂದು ಹಠ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರ ಮೇಲೆ ಎರಡು ಎಫ್ಐಆರ್‌ ಹಾಕಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಕೇಸ್ ಹಾಕಲಿ. ನಾನೇ ಚಿತಾವಣೆ ಮಾಡುತ್ತಿದ್ದೇನೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಪಾಪ.. ಎಫ್‌ಐಆರ್‌ನಲ್ಲಿ ನನ್ನ ಹೆಸರನ್ನು ಏಕೆ ಬಿಟ್ಟರೋ ಗೊತ್ತಿಲ್ಲ. ನನ್ನನ್ನೇ ಎ1 ಆರೋಪಿ ಮಾಡಿ. ಧೈರ್ಯವಿದ್ದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮಂಡಲಹಳ್ಳಿ ಗ್ರಾಮದ ರೈತರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ‘ಗುರುವಾರ ಬೆಳಗ್ಗೆ ಆ ಗ್ರಾಮಕ್ಕೆ ನಾನು ಹೋಗುತ್ತೇನೆ, ತಾಕತ್ತಿದ್ದರೆ ನನ್ನ ವಿರುದ್ಧ ಎಫ್ಐಆರ್ ಮಾಡಿ’ ಎಂದು ಸವಾಲು ಹಾಕಿದರು.

ಮಂಡಲಹಳ್ಳಿ ಘಟನೆ ಸರ್ಕಾರದ ಪೂರ್ವ ನಿಯೋಜಿತ ಸಂಚು. ರೈತರು, ರೈತ ಮಹಿಳೆಯರ ಮೇಲೆ ಎಫ್ಐಆರ್ ಹಾಕಿದ್ದು ಕೂಡ ಸಂಚು. ಸಂಬಂಧವಿಲ್ಲದವರು ಕೊಟ್ಟ ದೂರಿನ ಮೇಲೆ ವಿನಾಕಾರಣ ರೈತರ ಮೇಲೆ ಎಫ್ಐಆರ್ ಹಾಕಿದ್ದಾರೆ. ಊರಿನಲ್ಲಿ ಇಲ್ಲದವರ ವಿರುದ್ಧವೂ ಕೇಸ್ ದಾಖಲು ಮಾಡಿದ್ದಾರೆ. ದೆಹಲಿಗೆ ಬಂದಿದ್ದವರ ಮೇಲೆಯೂ ಪ್ರಕರಣ ದಾಖಲಿಸಿ ಎಫ್ಐಆರ್ ಮಾಡಿದ್ದಾರೆ. ಅಕ್ರಮವಾಗಿ ಜಮೀನಿಗೆ ಬಂದು ಸರ್ವೆ ಮಾಡಿದ್ದಕ್ಕೆ ರೈತರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಜನೆಗೆ ರೈತರಿಂದ ಇಷ್ಟೆಲ್ಲಾ ವಿರೋಧ ಇದ್ದರೂ ಫಲವತ್ತಾದ ಭೂಮಿಯನ್ನು ಕೊಳ್ಳೆ ಹೊಡೆಯಲು ಸರ್ಕಾರ ಹೊರಟಿದೆ. ಇದರ ಹಿಂದಿನ ಉದ್ದೇಶ ಜನರಿಗೆ ಅರ್ಥವಾಗುತ್ತಿದೆ ಎಂದು ಕಿಡಿಕಾರಿದರು.

ಇಂತಹ ಬೆದರಿಕೆ ಮತ್ತು ಕೇಸುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ರೈತರೇ, ಶಾಂತಿಯುವಾಗಿ ನಿಮ್ಮ ಪ್ರತಿಭಟನೆ ಮುಂದುವರಿಸಿ. ನ್ಯಾಯಾಲಯದ ಮುಂದೆ ಹೋರಾಟ ಮಾಡೋಣ. ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಕರೆ ನೀಡಿದರು.

ತಮ್ಮ ಜಮೀನನ್ನು ಕಿತ್ತುಕೊಳ್ಳಲು ಬಂದರೆ ಹೆಣ್ಣುಮಕ್ಕಳು ಸುಮ್ಮನೆ ಇರಲು ಸಾಧ್ಯವೇ?. ಭೂಮಿ ಹೋಗುತ್ತದೆ ಎಂಬ ಆತಂಕದಲ್ಲಿ ಹೆಣ್ಣು ಮಕ್ಕಳು ಪೊರಕೆ ತೋರಿಸಿರಬಹುದು. ಈಗಾಗಲೇ ಈ ಸರ್ಕಾರ ಕೊಲೆಗಡುಕ ಸರ್ಕಾರ ಎಂಬ ಬಿರುದು ತೆಗೆದುಕೊಂಡಿದೆ. ಅಂಥ ಸರ್ಕಾರದ ಮುಖ್ಯಸ್ಥರೇ ನೀವಾಗಿದ್ದೀರಿ. ಸುಳ್ಳು ಆರೋಪಗಳ ಮೇಲೆ ರೈತರನ್ನು ಕೊಲೆಗಡುಕರನ್ನಾಗಿ ಮಾಡಬೇಡಿ ಎಂದು ಎಚ್ಚರಿಸಿದರು.

ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೇಳುತ್ತಿದೆಯಲ್ಲ, ಅದಕ್ಕೆ ಏನು ಮಾಡುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವೂ ನಮ್ಮ ಹೋರಾಟವನ್ನು ಬಿಡುವ ಪ್ರಶ್ನೆಯೇ ಇಲ್ಲ. ಮುಂದೆ ಏನೇನಾಗುತ್ತದೆಯೋ ನೋಡೋಣ, ಎಲ್ಲಕ್ಕೂ ಸಿದ್ಧವಾಗಿಯೇ ಇದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.ಡಿಕೆಶಿಗೆ ರೈತರ ಹಿತಕ್ಕಿಂತ ರಿಯಲ್ ಎಸ್ಟೇಟ್ ಉದ್ಯಮವೇ ಮುಖ್ಯ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರೈತರ ಹಿತಕ್ಕಿಂತ ರಿಯಲ್ ಎಸ್ಟೇಟ್ ಉದ್ಯಮವೇ ಮುಖ್ಯವಾಗಿದೆ. ಬಡ ರೈತರ ಬದುಕನ್ನು ಬೀದಿಗೆ ತಳ್ಳಿ ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಲಬುರಗಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಡಿಕೆಶಿಯವರು ರಾಜ್ಯದ ರೈತರ ಹಿತಾಸಕ್ತಿಯನ್ನು ಬದಿಗಿಟ್ಟು ರಿಯಲ್ ಎಸ್ಟೇಟ್ ಹಿಂದೆ ಹೋಗುತ್ತಿರುವ ಪರಿಣಾಮವಾಗಿ ಬಿಡದಿಯಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅವರು ಕಿಡಿಕಾರಿದರು.ಕಾಂಗ್ರೆಸ್ ಸರ್ಕಾರ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಿಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯನವರು ಸಹ ಸಮಗ್ರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಿಲ್ಲ. ಬೆಂಗಳೂರು ಅಭಿವೃದ್ಧಿಯಾದರೆ, ಇಡೀ ಕರ್ನಾಟಕ ಅಭಿವೃದ್ಧಿಯಾಗುತ್ತದೆ ಎಂಬ ಭಾವನೆ ಅವರಲ್ಲಿ ಕಾಣುತ್ತಿತ್ತು. ಈಗಿನ ಮುಖ್ಯಮಂತ್ರಿಯವರ ಧೋರಣೆಯೂ ಅದೇ ಆಗಿದೆ. ಡಿಕೆಶಿಯವರು ಬಿಡದಿ ಟೌನ್‌ಶಿಪ್‌ ಬಗ್ಗೆ, ಬೆಂಗಳೂರಿನ 2ನೇ ಏರ್‌ಪೋರ್ಟ್‌ ಬಗ್ಗೆ ತೋರುತ್ತಿರುವ ಆತುರ ನೋಡಿದರೆ ಡಿಕೆಶಿಯವರ ಹಣೆಬರಹವೂ ಅಷ್ಟೇ ಎಂದು ಅನಿಸುತ್ತಿದೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗದ 30 ಲಕ್ಷ ಹೆಕ್ಟೇರ್ ಪೈಕಿ ಶೇ.15 ರಿಂದ 20ರಷ್ಟು ಮಾತ್ರ ಬಿತ್ತನೆಯಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ರೈತರ ನೆರವಿಗೆ ಬರಬೇಕಾದ ಕೃಷಿ ಸಚಿವರೇ ಇಲ್ಲದಿರುವುದು ದುರಾದೃಷ್ಟ. ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳಾದರೂ ಸಂಪುಟ ವಿಸ್ತರಣೆ ಮಾಡದೆ ಕಾಲಹರಣ ಮಾಡಲಾಗುತ್ತಿದೆ. ಮುಖ್ಯಮಂತ್ರಿಯವರು ಕೇವಲ ಫೋಟೋಶೂಟ್‌ಗಾಗಿ ಕಲ್ಯಾಣ ಕರ್ನಾಟಕಕ್ಕೆ ಬಂದು ಹೋಗುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಬಿಡಡಿ ಟೌನ್‌ಶಿಪ್‌: ಪರ, ವಿರೋಧ ಪ್ರತಿಭಟನೆ

ಬಿಡದಿ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನಕ್ಕಾಗಿ ಜಂಟಿ ಸರ್ವೆ ಕಾರ್ಯಕ್ಕೆ ಬಂದಿದ್ದ ಜಿಬಿಡಿಎ ಅಧಿಕಾರಿಗಳಿಗೆ ಪೊರಕೆ ಏಟು ನೀಡಿ ಓಡಿಸಿದ್ದ ರೈತ ಮಹಿಳೆಯರು, ಮಂಗಳವಾರ ಕ್ರಿಮಿನಾಶಕದ ಬಾಟಲ್‌ ಜೊತೆಗೆ ಒನಕೆ ಹಿಡಿದು ಪ್ರತಿಭಟನೆ ಮುಂದುವರಿಸಿದರು.ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಕಳೆದ 491 ದಿನಗಳಿಂದ ರೈತರು ಮತ್ತು ರೈತ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಕ್ರಿಮಿನಾಶಕದ ಬಾಟಲ್‌ ಜೊತೆಗೆ ಒನಕೆ ಹಿಡಿದು ಪ್ರತಿಭಟಿಸುವ ಮೂಲಕ ಬಲವಂತವಾಗಿ ಭೂಸ್ವಾಧೀನಕ್ಕೆ ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ನಮ್ಮ ಸಮಾಧಿ ಮೇಲೆ ಎಐ ಸಿಟಿ ಕಟ್ಟಲಿ. ನಾವು ಅವರ ಭೂಮಿ ಕೇಳುತ್ತಿಲ್ಲ. ನಮ್ಮ ಪೂರ್ವಜರ ಭೂಮಿ ಉಳಿಸಿಕೊಳ್ಳಲು ನಾವು ವಿಷ ಕುಡಿಯಲು ಸಿದ್ಧರಿದ್ದೇವೆ. ನಾಟಕ ಮಾಡಿ ಜೀವನ ಮಾಡಲು ನಾವು ಪ್ರತಿಭಟನೆ‌ ಮಾಡುತ್ತಿಲ್ಲ. ನಾವು ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವೆ ಮುಗಿಸಿ ಪರಿಹಾರ ನೀಡಿ:

ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಕೂಡಲೇ ಜೆಎಂಸಿ ಸರ್ವೆ ಮುಗಿಸಿ ಪರಿಹಾರ ವಿತರಿಸುವಂತೆ ಆಗ್ರಹಿಸಿ ಯೋಜನೆ ಪರವಾಗಿ ರೈತರು ಮಂಗಳವಾರ ಬಿಡದಿ-ಹಾರೋಹಳ್ಳಿ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ರಸ್ತೆ ಮಧ್ಯೆ ಕುರ್ಚಿ ಹಾಕಿಕೊಂಡು ಕುಳಿತು ಪ್ರತಿಭಟಿಸಿದ ರೈತರು, ನಾವು ಟೌನ್‌ಶಿಪ್ ಯೋಜನೆಗೆ ಭೂಮಿ ಬಿಟ್ಟುಕೊಡಲು ಸಿದ್ಧರಿದ್ದೇವೆ. ನಮ್ಮ ಜಮೀನಿನ ಸರ್ವೆ ಮಾಡಿಸಿ, ಶಾಪಗ್ರಸ್ಥವಾಗಿರುವ ಭೈರಮಂಗಲ ಭಾಗದ ನಮ್ಮ ಭೂಮಿಗಳಿಗೆ ಪರಿಹಾರ ವಿತರಿಸಿ ಮುಕ್ತಿ ಕೊಡಿ ಎಂದು ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಡದಿ ಠಾಣೆ ಇನ್‌ಸ್ಪೆಕ್ಟರ್‌ ವಿಜಯಕುಮಾರ್, ರಸ್ತೆ ತಡೆ ಮಾಡದಂತೆ ರೈತರ ಮನವೊಲಿಸಲು ಮುಂದಾದರು. ಅದಕ್ಕೆ ಬಗ್ಗದ ರೈತರು ಸ್ಥಳಕ್ಕೆ ಎಸ್‌ಪಿ ಬರಬೇಕು. ಕೂಡಲೇ ನಮ್ಮ ಜಮೀನುಗಳಲ್ಲಿ ಸರ್ವೆ ಆರಂಭಿಸಬೇಕು ಎಂದು ಆಗ್ರಹಿಸಿದರು. ಇದರಿಂದಾಗಿ ಹಾರೋಹಳ್ಳಿ-ಬಿಡದಿ ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ, ಪೊಲೀಸರ ಮನವೊಲಿಕೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್‌ ಪಡೆಯಲಾಯಿತು.