ರಾಜಧಾನಿಗೆ ಮೂಲಭೂತ ಬವಣೆಯಾಗಿ ಕಾಡುತ್ತಿರುವ ಸಂಚಾರ ಸಮಸ್ಯೆ ಪರಿಹಾರಕ್ಕೆ ಕಾರ್ ಪೂಲಿಂಗ್ ಅನ್ನು ಅಧಿಕೃತಗೊಳಿಸುವುದು, ಕೇಂದ್ರ ಸರ್ಕಾರದ ಸಂಚಾರ ನಿಯಮ ಉಲ್ಲಂಘನೆಗಳ ದಂಡ ಪರಿಷ್ಕರಣೆ ಆದೇಶ ಸೇರಿ ರಾಜ್ಯ ಸರ್ಕಾರದ ಮುಂದೆ ಬಹುಮುಖ್ಯ ‘ಪಂಚ ಸೂತ್ರ’ ಗಳನ್ನು ಸಂಚಾರ ವಿಭಾಗದ ಪೊಲೀಸರು ಪ್ರಸ್ತಾಪ ಮಾಡಿದ್ದಾರೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರಾಜಧಾನಿಗೆ ಮೂಲಭೂತ ಬವಣೆಯಾಗಿ ಕಾಡುತ್ತಿರುವ ಸಂಚಾರ ಸಮಸ್ಯೆ ಪರಿಹಾರಕ್ಕೆ ಕಾರ್ ಪೂಲಿಂಗ್ ಅನ್ನು ಅಧಿಕೃತಗೊಳಿಸುವುದು, ಕೇಂದ್ರ ಸರ್ಕಾರದ ಸಂಚಾರ ನಿಯಮ ಉಲ್ಲಂಘನೆಗಳ ದಂಡ ಪರಿಷ್ಕರಣೆ ಆದೇಶ ಜಾರಿ ಹಾಗೂ ರಾಷ್ಟ್ರೀಯ ಸಾರಿಗೆ ಪರವಾನಿಗೆ ಹೊಂದಿದ ಖಾಸಗಿ ಬಸ್‌ಗಳಿಗೆ ನಗರ ಪ್ರವೇಶ ಸಂಪೂರ್ಣ ನಿರ್ಬಂಧ ಸೇರಿದಂತೆ ರಾಜ್ಯ ಸರ್ಕಾರದ ಮುಂದೆ ಬಹುಮುಖ್ಯ ‘ಪಂಚ ಸೂತ್ರ’ ಗಳನ್ನು ಸಂಚಾರ ವಿಭಾಗದ ಪೊಲೀಸರು ಪ್ರಸ್ತಾಪ ಮಾಡಿದ್ದಾರೆ.
ವಿಶ್ವ ಭೂಪಟದಲ್ಲಿ ಉದ್ಯಾನ ನಗರಿ, ಐಟಿ ಸಿಟಿ ಎಂದೆಲ್ಲ ಬಿರುದಾಂಕಿತವಾಗಿರುವ ಬೆಂಗಳೂರಿಗೆ ಸಂಚಾರ ದಟ್ಟಣೆ (ಟ್ರಾಫಿಕ್ ) ಶಾಪವಾಗಿ ಪರಿಣಮಿಸಿದೆ. ಇತ್ತ ಶಾಪ ವಿಮೋಚನೆಗೆ ಶಬರಿಯಂತೆ ನಾಗರಿಕರು ಕಾಯುತ್ತಿದ್ದರೆ, ಅತ್ತ ಈ ಸಮಸ್ಯೆ ಪರಿಹರಿಸುವ ಮಾರ್ಗೋಪಾಯಗಳನ್ನು ಸಂಚಾರ ವಿಭಾಗದ ಹಾಗೂ ಸರ್ಕಾರ ಅವಿರತವಾಗಿ ಅರಸುತ್ತಿವೆ.
ಅಂತೆಯೇ ರಾಜಧಾನಿಯಲ್ಲಿ ವಾಹನಗಳ ಸುಗಮ ಓಡಾಟಕ್ಕೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಅವರ ಸಾರಥ್ಯದಲ್ಲಿ ‘ಪಂಚಸೂತ್ರ’ವನ್ನು ಪೊಲೀಸರು ಸಿದ್ಧಗೊಳಿಸಿದ್ದಾರೆ. ಅವುಗಳನ್ನು ಕಾರ್ಯರೂಪಕ್ಕಿಳಿಸುವಲ್ಲಿ ಎದುರಾಗುವ ತಾಂತ್ರಿಕ ತೊಡಕುಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಗೃಹ ಇಲಾಖೆಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಸಮಾಲೋಚನೆ ನಡೆದಿದೆ ಎಂದು ಮೂಲಗಳು ಹೇಳಿವೆ.
1. ಭಾರಿ ವಾಹನಗಳಿಗೆ ಶಾಶ್ವತ ತಡೆ
ನಗರದಲ್ಲಿ ಭಾರಿ ಸರಕು ಸಾಗಾಣಿಕೆ ವಾಹನಗಳ ಪ್ರವೇಶಕ್ಕೆ ಶಾಶ್ವತವಾಗಿ ನಿರ್ಬಂಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. 2014ರಲ್ಲಿ ನಗರಕ್ಕೆ ರಾತ್ರಿ 10 ರಿಂದ ಬೆಳಗ್ಗೆ 7 ಗಂಟೆವರೆಗೆ ಸರಕು ಸಾಗಾಣಿಕೆ ವಾಹನಗಳಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಭಾರಿ ಪ್ರಮಾಣದ ಸರಕು ಸಾಗಿಸುವ ವಾಹನಗಳಿಗೆ ನಗರದ ವಲಯದಲ್ಲೇ ತಡೆ ಹಾಕಿದರೆ ಇತರೆ ವಾಹನಗಳ ಓಡಾಟಕ್ಕೆ ಅಡ್ಡಿ ತಪ್ಪಲಿದೆ. ಅಲ್ಲಿಂದ ಸಣ್ಣ ಟ್ರಕ್‌ಗಳಲ್ಲಿ ಸರಕು ಸಾಗಾಣಿಕೆಗೆ ಅವಕಾಶ ಮಾಡಿಕೊಡ ಲಾಗುತ್ತದೆ. ಅಲ್ಲದೆ ಪಿಕ್ ಆವರ್‌ನಲ್ಲಿ ಅಂದರೆ ಬೆಳಗ್ಗೆ 8 ರಿಂದ 10 ಹಾಗೂ ಸಂಜೆ 5 ರಿಂದ 7 ಗಂಟೆವರೆಗೆ ಎಲ್ಲ ಮಾದರಿಯ ಸರಕು ಸಾಗಾಣಿಕೆ ವಾಹನಗಳಿಗೆ ಕೂಡ ಬ್ರೇಕ್ ಹಾಕಬೇಕು.
2. ಸರ್ಕಾರವೇ ಕಾರ್ ಪೂಲಿಂಗ್ ಅಧಿಕೃತಗೊಳಿಸಬೇಕು
ಸಂಚಾರ ಸಮಸ್ಯೆ ನಿವಾರಣೆಗೆ ಕಾರ್ ಪೂಲಿಂಗ್ ದೊಡ್ಡ ಕೊಡುಗೆ ನೀಡುತ್ತದೆ. ಕೊರೋನಾ ಮುನ್ನ ನಗರದಲ್ಲಿ ಈ ವ್ಯವಸ್ಥೆಯನ್ನು ಆ್ಯಪ್ ಆಧಾರಿತ ಸಾರಿಗೆ ಕಂಪನಿಗಳು ರೂಪಿಸಿದ್ದವು. ಇದಕ್ಕೆ ಐಟಿ-ಬಿಟಿ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರತಿದಿನ 60 ಸಾವಿರ ಜನರು ಬಳಸುತ್ತಿದ್ದರು. ಇದರಿಂದ ಸುಮಾರು 1 ಲಕ್ಷ ವಾಹನಗಳು ರಸ್ತೆಗಿಳಿಯುವುದು ತಪ್ಪಿತು. ಕೊರೋನಾ ಬಳಿಕ ಕಾರ್ ಪೂಲಿಂಗ್ ಬಳಕೆದಾರರ ಸಂಖ್ಯೆ 60 ರಿಂದ 20 ಸಾವಿರಕ್ಕಿಳಿಯಿತು. ಈ ನಡುವೆ ಕಾರ್ ಪೂಲಿಂಗ್‌ಗೆ ಸಾರಿಗೆ ಇಲಾಖೆ ತಾಂತ್ರಿಕ ತೊಡಕು ಮುಂದಿಟ್ಟಿತು. ಇದರಿಂದ ಮತ್ತೆ ವಾಹನಗಳ ಓಡಾಟ ಸಂಖ್ಯೆ ಏರಿತು.
3. ಕೇಂದ್ರ ಸರ್ಕಾರದ ದಂಡ ಹೆಚ್ಚಳ ಆದೇಶ ಜಾರಿ
2018ರಲ್ಲಿ ಸಂಚಾರ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡವನ್ನು 2 ಪಟ್ಟು ಹೆಚ್ಚಳ ಮಾಡಿ ಕೇಂದ್ರ ಸಾರಿಗೆ ಇಲಾಖೆ ಆದೇಶಿಸಿತ್ತು. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು. ಆಗ ಮಧ್ಯಪ್ರವೇಶಿಸಿದ ರಾಜ್ಯ ಸರ್ಕಾರವು, ರಾಜ್ಯದ ಮಟ್ಟಿಗೆ ಕೇಂದ್ರ ಸರ್ಕಾರದ ಆದೇಶಕ್ಕಿಂತ ಅರ್ಧದಷ್ಟು ದಂಡ ಪರಿಷ್ಕರಿಸಿತು. ಈಗ ಕೇಂದ್ರ ಸರ್ಕಾರದ ಹಳೇ ಆದೇಶ ಜಾರಿಗೆ ಪೊಲೀಸರು ಪ್ರಸ್ತಾಪ ಮುಂದಿಟ್ಟಿದ್ದಾರೆ. ಅದರಲ್ಲೂ ಸಿಗ್ನಲ್ ಜಂಪ್, ಏಕಮುಖ ಸಂಚಾರ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಹಾಗೂ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಸೇರಿದಂತೆ ಪ್ರಮುಖ 5 ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಏರಿಕೆ ಮಾಡುವಂತೆ ಕೋರಿದ್ದಾರೆ. ಇದಕ್ಕೊಪ್ಪಿದರೆ 500 ರು. ನಿಂದ 1 ಸಾವಿರ ರು.ಗೆ ದಂಡ ಏರಿಕೆಯಾಗಲಿದೆ. ‘ದಂಡ’ ವಿಧಿಸದೆ ಹೋದರೆ ಜನರು ಕಾನೂನು ಪಾಲಿಸುವುದಿಲ್ಲ ಎಂದಿದ್ದಾರೆ ಪೊಲೀಸರು.
4. ಮೇಲ್ಸೇತುವೆಗಳಲ್ಲಿ ಬೈಕ್ ನಿರ್ಬಂಧ
ನಗರದ ಕೆಲ ಮೇಲ್ಸೇತುವೆಗಳಲ್ಲಿ ಬೈಕ್ ವಾಹನಗಳಿಗೆ ನಿಷೇಧಿಸುವ ಬಗ್ಗೆ ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಮೇಲ್ಸೇತುವೆಗಳಲ್ಲಿ ಬೈಕ್‌ಗಳ ಅಪಘಾತ ಪ್ರಮಾಣ ಹಾಗೂ ಅವುಗಳಿಂದ ಸಂಚಾರಕ್ಕೆ ಉಂಟಾಗಿರುವ ಅಡ್ಡಿ ಬಗ್ಗೆ ಪೊಲೀಸರು ಪರಾಮರ್ಶಿಸಿದ್ದಾರೆ. ಇನ್ನು ನಗರದ ಎಲ್ಲ ಮೇಲ್ಸೇತುವೆಗಳಲ್ಲಿ ಸರಕು ಸಾಗಾಣಿಕೆ ವಾಹನಗಳು (ಟಾಟಾ ಏಸ್, ಮಿನಿ ಟ್ಯಾಂಕರ್‌ಗಳು) ಓಡಾಟಕ್ಕೆ ನಿರ್ಬಂಧಿಸುವುದಕ್ಕೆ ಪೊಲೀಸರು ಶಿಫಾರಸು ಮಾಡಿದ್ದಾರೆ.
5. ಖಾಸಗಿ ಬಸ್‌ಗಳಿಗೆ ನೋ ಎಂಟ್ರಿ
ನಗರದ ಹೊರವಲಯಗಳಿಂದಲೇ ಖಾಸಗಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಅದರಲ್ಲೂ ರಾಷ್ಟ್ರೀಯ ಸಂಚಾರ ಪರವಾನಿಗೆ (ಆಲ್ ಇಂಡಿಯಾ ಫರ್ಮಿಟ್) ಬಸ್‌ಗಳಿಗೆ ನಗರ ಒಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧಿಸಬೇಕಿದೆ. ನಗರದೊಳಗೆ ಬಸ್‌ಗಳ ಪ್ರವೇಶಿಸದೆ ಹೋದರೆ ಸಂಚಾರ ದಟ್ಟಣೆ ತಗ್ಗಲಿದೆ. ಖಾಸಗಿ ಬಸ್‌ಗಳ ನಿಲುಗಡೆಗೆ ನಿಖರ ಸ್ಥಳ ಮೀಸಲಿಡಬೇಕು. ಎಲ್ಲೆಂದರಲ್ಲಿ ಆ ಬಸ್‌ಗಳು ನಿಲುಗಡೆ ಮಾಡುತ್ತಿರುವುದು ಸಹ ಸಂಚಾರ ಅಡ್ಡಿಯಾಗಿದೆ ಎಂದಿದ್ದಾರೆ.
ಪಂಚ ಸೂತ್ರ ಸಿದ್ಧತೆ ಹೇಗೆ?
ರಸ್ತೆಗಳಲ್ಲಿ ವಾಹನಗಳ ಸಂಚಾರ ಪ್ರಮಾಣ, ಅಪಘಾತ ಪ್ರಕರಣಗಳು ಹಾಗೂ ಸಂಚಾರ ದಟ್ಟಣೆ ಹೀಗೆ ಎಲ್ಲ ಅಂಶಗಳನ್ನು ಅವಲೋಕಿಸಿ ಸಂಚಾರ ದಟ್ಟಣೆ ನಿವಾರಣೆಗೆ ‘ಪಂಚ ಸೂತ್ರ’ವನ್ನು ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ನೇತೃತ್ವದ ಹಿರಿಯ ಅಧಿಕಾರಿಗಳ ತಂಡವು ಸಿದ್ಧಪಡಿಸಿದೆ ಎಂದು ತಿಳಿದು ಬಂದಿದೆ. ಮೇಲ್ಸೇತುವೆಗಳು, ಐಟಿ ಕಾರಿಡಾರ್, ಹೊರ ವರ್ತುಲ ರಸ್ತೆಗಳು (ರಿಂಗ್ ರೋಡ್) ಹಾಗೂ ಸಿಬಿಡಿ ಪ್ರದೇಶಗಳಲ್ಲಿ ಯಾವ ಸಮಯದಲ್ಲಿ ಸಂಚಾರ ದಟ್ಟಣೆಯಾಗಲಿದೆ ಎಂದು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಅಲ್ಲದೆ ಆ ಸಂಚಾರ ಸಮಸ್ಯೆ ಹೆಚ್ಚು ಭಾದಿತ ಸ್ಥಳಗಳಿಗೆ ಖದ್ದು ಎರಡ್ಮೂರು ಬಾರಿ ಜಂಟಿ ಆಯುಕ್ತರು ತೆರಳಿ ಪರಿಶೀಲಿಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ ಮಾಹಿತಿ ನೀಡಿವೆ.
ಸೆಪ್ಟೆಂಬರಲ್ಲೇ ಹೆಚ್ಚು ಟ್ರಾಫಿಕ್!
ನಗರದಲ್ಲಿ ಸಂಚಾರ ದಟ್ಟಣೆ ಬಗ್ಗೆ ಶೈಕ್ಷಣಿಕ ವರ್ಷ ಆಧರಿಸಿ ತಿಂಗಳುವಾರು ಪೊಲೀಸರು ಪರಾಮರ್ಶಿಸಿದ್ದಾರೆ. ಯಾವ್ಯಾವ ತಿಂಗಳು ಸಂಚಾರ ಸಮಸ್ಯೆ ಹೆಚ್ಚು, ಯಾವ ತಿಂಗಳ ಕಡಿಮೆ ಇದೆ. ಇದಕ್ಕೆ ಕಾರಣಗಳೇನು ಎಂದು ಕೂಡ ವಿಶ್ಲೇಷಿಸಿದ್ದಾರೆ. ಶಾಲೆಗಳ ಆರಂಭದ ಜೂನ್‌ನಿದ ನವೆಂಬರ್‌ವರೆಗೆ ಸಂಚಾರ ಸಮಸ್ಯೆ ಬಾಧಿಸುತ್ತದೆ. ಅದರಲ್ಲೂ ಸೆಪ್ಟೆಂಬರ್‌ನಲ್ಲಿ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ನೂರೆಂಟು ವಿಘ್ನಗಳು ಜಾಸ್ತಿ ಎದುರಾಗುತ್ತವೆ. ಇದಕ್ಕೆ ಕಾರಣ ಆ ತಿಂಗಳಲ್ಲಿ ಹೆಚ್ಚಿನ ಮಳೆ ಹಾಗೂ ಹಬ್ಬಗಳು ಎನ್ನಲಾಗಿದೆ. ಆದರೆ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಸಂಚಾರದ ಮೇಲೆ ದುಷ್ಪರಿಣಾಮ ಕ್ಷೀಣವಾಗಿರುತ್ತದೆ. ಅಂತೆಯೇ ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳು ಕಾಕದೃಷ್ಟಿ ಬೀರದೆ ಜನರು ನಿರಾಳವಾಗಿ ವಾಹನಗಳಲ್ಲಿ ಓಡಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.


