ಸಿದ್ಧೇಶ್ವರ ಅಪ್ಪಗಳು ರೈತರ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ನಂದಿ ಆಧಾರಿತ ಹಾಗೂ ಮರ ಆಧಾರಿತ ಕೃಷಿ ಪೂಜ್ಯರಿಗೆ ಅಚ್ಚುಮೆಚ್ಚಾಗಿತ್ತು. ಅದರಂತೆ ಎತ್ತು ಸಾಕಿ, ಮರ ಬೆಳೆಸಿ, ಮಣ್ಣು ಉಳಿಸಿ ಎನ್ನುವ ತತ್ವವನ್ನು ನಾವು ಪಾಲಿಸಬೇಕಿದೆ

ಕನ್ನಡಪ್ರಭ ವಾರ್ತೆ ವಿಜಯಪುರ

ನಾವು ಬಳಸುತ್ತಿರುವ ಆಹಾರ ಪದ್ಧತಿಯಿಂದ ಭಾರತ ಇಂದು ಜಗತ್ತಿನ ಡಯಾಬಿಟಿಕ್ ರಾಜಧಾನಿಯಾಗಿದೆ ಎಂದು ಅಂತಾರಾಷ್ಟ್ರೀಯ ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಕಳವಳ ವ್ಯಕ್ತಪಡಿಸಿದರು.

ನಗರದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ಹಾಗೂ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಂದಿ ಹಾಗೂ ಮರ ಆಧಾರಿತ ಕೃಷಿ ಪದ್ಧತಿಗೆ ಮರಳಬೇಕು. ಸಿದ್ಧೇಶ್ವರ ಅಪ್ಪಗಳು ಹಾಕಿಕೊಟ್ಟ ನಂದಿ ಕೃಷಿ ಆಧಾರಿತ ಬದುಕು ನಮ್ಮದಾಗಿಸಿಕೊಂಡರೇ ಆರೋಗ್ಯಯುತ ಬದುಕು ನಮ್ಮದಾಗುತ್ತದೆ. ಸಿದ್ಧೇಶ್ವರ ಅಪ್ಪಗಳು ರೈತರ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ನಂದಿ ಆಧಾರಿತ ಹಾಗೂ ಮರ ಆಧಾರಿತ ಕೃಷಿ ಪೂಜ್ಯರಿಗೆ ಅಚ್ಚುಮೆಚ್ಚಾಗಿತ್ತು. ಅದರಂತೆ ಎತ್ತು ಸಾಕಿ, ಮರ ಬೆಳೆಸಿ, ಮಣ್ಣು ಉಳಿಸಿ ಎನ್ನುವ ತತ್ವವನ್ನು ನಾವು ಪಾಲಿಸಬೇಕಿದೆ ಎಂದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವನಗೌಡ ಪಾಟೀಲ ಮಾತನಾಡಿ, ಸಿದ್ಧೇಶ್ವರ ಸ್ವಾಮೀಜಿಗಳು ರೈತರ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ನಾವು ಇಂದು ಕೃಷಿ ಇಲಾಖೆಯಿಂದ ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ್‌ ಸ್ಪರ್ಧೆಯಲ್ಲಿ ಹಲವಾರು ಜನ ಮಹಿಳೆಯರು ಭಾಗವಹಿಸಿದ್ದು ಮರೆತುಹೋದ ಖಾದ್ಯಗಳನ್ನು ಮತ್ತೆ ನೆನಪಿಸುವ ಹಾಗೂ ಆರೋಗ್ಯದ ಗುಟ್ಟನ್ನು ತಿಳಿಸಿದ್ದಾರೆ ಎಂದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಹಾಗೂ ವೀರಭದ್ರ ಮಹಾಸ್ವಾಮೀಜಿ ಮಾತನಾಡಿ, ಸಿದ್ಧೇಶ್ವರ ಅಪ್ಪಗಳಿಗೆ ಪ್ರೀಯವಾದ ಭೂಜನ ಎಂದರೇ ಅದು ಸಿರಿಧಾನ್ಯಗಳಿಂದ ಮಾಡಿದ ಆಹಾರ. ಅಪ್ಪಗಳು ರೈತರನ್ನು ಜಗತ್ತಿಗೆ ಆಹಾರ ನೀಡುವ ಅನ್ನದಾತ ಅವನಿಲ್ಲದೇ ಇದ್ದರೆ ಜಗತ್ತು ಉಪವಾಸ ಇರಬೇಕಾಗುತ್ತದೆ. ನಂದಿ ಆಧಾರಿತ ಕೃಷಿಯ ಎಂದರೇ ಅಪ್ಪಗಳಿಗೆ ಎಲ್ಲಿಲ್ಲದ ಸಂತಸ ಎಂದು ನುಡಿದರು.

ಹಿಟ್ನಳ್ಳಿ ಕೃಷಿ ವಿವಿ ಮಾಜಿ ಕೃಷಿ ವಿಸ್ತರಣಾ ಅಧಿಕಾರಿ ಆರ್.ಬಿ.ಬೆಳ್ಳಿ ಮಾತನಾಡಿ, ಸಿದ್ಧೇಶ್ವರ ಅಪ್ಪಗಳ ಜೊತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೃಷಿ ಚಟುವಟಿಕೆ ಹಾಗೂ ಸಾವಯುವ ಕೃಷಿ ಗೋಷ್ಠಿಯಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದೇವು. ಪೂಜ್ಯರು ಎಲ್ಲ ಗೋಷ್ಠಿಗಳನ್ನು ನೋಡಿ ರೈತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಿದ್ಧೇಶ್ವರ ಅಪ್ಪಗಳು ಅಂದು, ಇಂದು, ಎಂದೆಂದಿಗೂ ನಮ್ಮೊಂದಿಗಿದ್ದಾರೆ, ರೈತರ ಮನೆ-ಮನಗಳಲ್ಲಿ ಇದ್ದಾರೆ. ಸಿರಿಧಾನ್ಯಗಳಲ್ಲಿ ಬಹಳಷ್ಟು ನಾರಿನಾಂಶ ಹಾಗೂ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ. ನಾವೆಲ್ಲರೂ ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು ಎಂದರು.

ಈ ವೇಳೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ, ವಿಜಯಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಂಗನಗೌಡ ಪಾಟೀಲ, ಕೃಷಿ ಉಪ ನಿರ್ದೇಶಕ ಶರಣಗೌಡ ರಂಗನಗೌಡರ, ಸಹಾಯಕ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಮಂಜುನಾಥ ಜಾನಮಟ್ಟಿ, ಎ.ಪಿ.ಬಿರಾದಾರ, ವಿಜಯಲಕ್ಷ್ಮೀ ಚವ್ಹಾಣ, ಜಯಶ್ರೀ ಪಾಟೀಲ ಉಪಸ್ಥಿತರಿದ್ದರು.

ನಮ್ಮ ಕೃಷಿ ನಿಂತಿರುವುದೇ ಗೋ ಹಾಗೂ ಮರ ಆಧಾರಿತ. ಮಾನವನ ಹಲ್ಲು-ದವಡೆಗಳ ಅಧ್ಯಯನ ಮಾಡಿದಾಗ ಹಣ್ಣು-ಹಂಪಲು, ಗಡ್ಡೆ-ಗೆಣಸುಗಳು ನಮ್ಮ ಮೂಲ ಆಹಾರಗಳಾಗಿವೆ ಎನ್ನುವುದು ಗೊತ್ತಾಗುತ್ತದೆ. ನನ್ನ ಎಲ್ಲ ಅಧ್ಯಯನಗಳಿಗೂ ಸಿದ್ಧೇಶ್ವರ ಅಪ್ಪಗಳೇ ಸ್ಫೂರ್ತಿಯಾಗಿದ್ದಾರೆ.

-ಡಾ.ಚಂದ್ರಶೇಖರ ಬಿರಾದಾರ, ಅಂತಾರಾಷ್ಟ್ರೀಯ ಕೃಷಿ ವಿಜ್ಞಾನಿ.

ಸಿರಿಧಾನ್ಯ ಬಡವರ ಧಾನ್ಯವಾಗಿತ್ತು. ಇಂದು ಅದು ಶ್ರೀಮಂತರ ಧಾನ್ಯವಾಗಿ ಮಾರ್ಪಟ್ಟಿದೆ. ಸಿರಿಧಾನ್ಯ ಆರೋಗ್ಯದಲ್ಲಿ ಗುಟ್ಟು ಅಡಗಿದೆ. ಸಿರಿಧಾನ್ಯದಲ್ಲಿ ರೈತರು ಅಥವಾ ಆಸಕ್ತರು ಯಾವುದಾದರೂ ಉದ್ಯಮೆ ಸ್ಥಾಪಿಸಿದರೇ ಇಲಾಖೆಯಿಂದ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು.

-ಡಾ.ಶಿವನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕರು.