ಬೆಂಗಳೂರು : ಇಸ್ರೇಲ್‌-ಇರಾನ್‌ ಯುದ್ಧದಿಂದಾಗಿ ರದ್ದುಗೊಂಡಿದ್ದ ವಿಮಾನಯಾನ ಸೇವೆ ಸೋಮವಾರ ಪುನರಾರಂಭವಾಗಿದ್ದು, ಅಬುಧಾಬಿಯಲ್ಲಿ ಸಿಲುಕಿದ್ದ 100ಕ್ಕೂ ಅಧಿಕ ಕನ್ನಡಿಗರು ರಾತ್ರಿ 10 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.

ಯುದ್ಧದ ಪರಿಸ್ಥಿತಿ

ಯುದ್ಧದ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ದುಬೈ, ಅಬುಧಾಬಿ, ರಿಯಾದ್‌, ಜೆಡ್ಡಾ, ದೋಹಾ ಮತ್ತಿತರ ನಗರಗಳ ವಾಯು ಪ್ರದೇಶಗಳನ್ನು ನಿರ್ಬಂಧಿಸಿದ ಕಾರಣದಿಂದಾಗಿ ಶನಿವಾರದಿಂದ ವಿಮಾನ ಸೇವೆ ಸ್ಥಗಿತಗೊಳಿಸಲಾಗಿತ್ತು.

ಪರಿಸ್ಥಿತಿ ಆಧರಿಸಿ ವಿಮಾನ ಸೇವೆ

 ಇದೀಗ ಸೋಮವಾರ ಬೆಳಗ್ಗೆಯಿಂದ ಪರಿಸ್ಥಿತಿ ಆಧರಿಸಿ ವಿಮಾನ ಸೇವೆ ಮರುಸ್ಥಾಪಿಸಲು ನಿರ್ಧರಿಸಲಾಗಿದೆ. ಅದರಂತೆ ಸೋಮವಾರ ರಾತ್ರಿ 10ಕ್ಕೆ ಅಬುಧಾಬಿಯಿಂದ ಎಥಿಹಾದ್ ಏರ್‌ಲೈನ್ಸ್‌ ಮೂಲಕ 100ಕಕೂ ಅಧಿಕ ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಅದೇ ವಿಮಾನ ಮತ್ತೆ ರಾತ್ರಿ 11.10ಕ್ಕೆ ಅಬುಧಾಬಿಗೆ ವಾಪಸ್‌ ತೆರಳಿದೆ.