ವಿಜಯಪುರ: ಪಟ್ಟಣದ ಹಳೆ ನಾಡಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿ ಬೀದಿ ಬದಿ ಅಂಗಡಿಗಳನ್ನು ಏಕಾಏಕಿ ಪುರಸಭೆಯಿಂದ ತೆರವುಗೊಳಿಸಿದ್ದರಿಂದ. ಪುರಸಭೆ ಎದುರು ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.

ಯಾವುದೇ ಮುನ್ಸೂಚನೆ ಹಾಗೂ ನೋಟಿಸ್ ನೀಡದೆ ತೆರವು ಮಾಡಿದ್ದರಿಂದ ಬಡ ವ್ಯಾಪಾರಿಗಳ ಜೀವನಕ್ಕೆ ತೊಂದರೆಯಾಗಿದೆ. ತಳ್ಳುವ ಗಾಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ತರಕಾರಿ, ಹಣ್ಣು ಕಾಣುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬೀದಿ ಬದಿ ವ್ಯಾಪಾರಿಗಳು ಸಮಸ್ಯೆಯನ್ನು ಆಲಿಸಿದ ಪುರಸಭೆ ಅಧ್ಯಕ್ಷೆ ಭವ್ಯಾಮಹೇಶ್, ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಬೀದಿ ಬದಿ ಅಂಗಡಿಗಳಿಂದ ಸಾರ್ವಜನಿಕರ ಓಡಾಡಕ್ಕೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆ. ವ್ಯಾಪಾರಿಗಳು ಇದನ್ನು ಅರ್ಥ ಮಾಡಿಕೊಂಡು ಪುರಸಭೆಯಿಂದ ನಿಗದಿ ಪಡಿಸುವ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಮುಖ್ಯಾಧಿಕಾರಿ ಸತ್ಯನಾರಾಯಣ್‌ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ತಾತ್ಕಲಿಕವಾಗಿ ದುರ್ಗಾ ತಾಯಿ ಕಾಲೋನಿಯಲ್ಲಿ ಪ್ರತಿ ಶುಕ್ರವಾರ ನಡೆಯುವ ಸಂತೆ ಜಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ನಡೆಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವ್ಯಾಪಾರಿಗಳಿಗೆ ಸೂಚಿಸಿದರು. ನೀವು ಸೂಚಿಸಿದ ಎರಡು ಜಾಗದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ. ಇದರಿಂದ ನಮ್ಮ ವ್ಯಾಪಾರಕ್ಕೆ ಹೆಚ್ಚು ನಷ್ಟ. ತೆರವುಗೊಳಿಸದ ಜಾಗದಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡಬೇಕೆಂದು ವ್ಯಾಪಾರಿಗಳು ಪಟ್ಟು ಹಿಡಿದರು.

ತೆರವುಗೊಳಿಸಿದ ಜಾಗದಲ್ಲಿಯೇ ಬೆಳಿಗ್ಗೆ ತಳ್ಳುವಗಾಡಿ ತಂದು ವ್ಯಾಪಾರ ನಡೆಸಿ, ಸಂಜೆ ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕೆಂದು ವ್ಯಾಪಾರಿಗಳು ಮನವಿ ಮಾಡಿದರು.


ಹಳೆ ನಾಡಕಚೇರಿ ಮುಂಭಾಗದ ರಸ್ತೆ ಹಳ್ಳ ಗುಂಡಿಗಳು ಬಿದ್ದಿದ್ದು, ರಸ್ತೆಗೆ ಡಾಂಬರೀಕರಣ ಹಾಕಬೇಕಿದೆ. ತೆರವುಗೊಳಿಸಿದ ಜಾಗದಲ್ಲಿ ಬೀದಿ ಬದಿ ಅಂಗಡಿಗಳನ್ನು ಇಟ್ಟರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಒಂದು ವಾರ ಅವಕಾಶ ನೀಡಿ. ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ವಿಶೇಷ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಪುರಸಭೆ ಸದಸ್ಯ ನಂದಕುಮಾರ್ ಬಿಜೆಪಿ ಟೌನ್ ಅಧ್ಯಕ್ಷ ವೆಂಕಟೇಶ ಪ್ರಭು, ಅಂಬೇಡ್ಕರ್ ರಕ್ಷಣಾ ಸಮಿತಿ ರಾಜ್ಯಾಧ್ಯಜ್ಷ ಸಿ.ಶ್ರೀನಿವಾಸ್, ವ್ಯಾಪಾರಿಗಳಾದ ಮುನಿಕೃಷ್ಣ, ಹನುಮಂತಪ್ಪ, ಮಂಜುನಾಥ್, ಅನಿತಾ, ಕಮಲಮ್ಮ, ಕಲಾವತಿ, ಜಯಮ್ಮ, ಹರೀಶ್, ಪದ್ಮ, ದೇವಮ್ಮ, ಮಣಿಕಂಠ, ರಾಮಾಂಜಿ, ಕೃಷ್ಣಪ್ಪ, ದೇವಮ್ಮ ಇದ್ದರು.

(ಫೋಟೊ ಕ್ಯಾಪ್ಷನ್‌)

ವಿಜಯಪುರ ಪಟ್ಟಣದ ಹಳೆ ನಾಡಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿ ಬೀದಿ ಬದಿ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸುತ್ತಿರುವುದು.