ಕನ್ನಡಪ್ರಭ ವಾರ್ತೆ ಬೆಂಗಳೂರು
ಇಸ್ರೇಲ್-ಇರಾನ್ ಯುದ್ಧ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 19 ಹಾಗೂಮಂಗಳೂರು ವಿಮಾನ ನಿಲ್ದಾಣದಿಂದ ಎಂಟಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಆರಂಭವಾಗಿರುವ ಕಾರಣ ಅನೇಕ ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಮತ್ತು ಕೆಲ ದೇಶಗಳ ವಾಯು ಪ್ರದೇಶದಲ್ಲಿ ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಹೀಗಾಗಿ ಶನಿವಾರ ಮತ್ತು ಭಾನುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇವೆ ನೀಡುತ್ತಿದ್ದ 19 ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ. ಅವುಗಳಲ್ಲಿ 9 ಆಗಮನ ಮತ್ತು 10 ನಿರ್ಗಮನ ವಿಮಾನಗಳಾಗಿವೆ. ಪ್ರಮುಖವಾಗಿ ಅಬುದಾಬಿ, ರಿಯಾದ್, ಜೆಡ್ಡಾ, ದಮ್ಮಮ್, ದುಬೈ ಮತ್ತು ದೋಹಾ ನಗರಗಳಿಗೆ ಸೇವೆ ನೀಡುವ ವಿಮಾನಗಳಾಗಿವೆ.
ಯುದ್ಧದ ಸ್ಥಿತಿ ಹೀಗೆಯೇ ಮುಂದುವರಿದರೆ ಮತ್ತಷ್ಟು ವಿಮಾನಗಳ ಹಾರಾಟ ರದ್ದಾಗಲಿದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಅಲ್ಲದೆ, ಯಾವ ವಿಮಾನಗಳ ಹಾರಾಟ ರದ್ದಾಗಿದೆ ಮತ್ತು ವಿಮಾನ ಸೇವೆಯ ಕುರಿತು ಮಾಹಿತಿ ನೀಡಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಶೇಷ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಟರ್ಮಿನಲ್ 2ರ ಲೆವೆಲ್ 3ರಲ್ಲಿ ಈ ತಾತ್ಕಾಲಿಕ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.ಟೇಕ್‌ಆಫ್ ಆದ ವಿಮಾನ ವಾಪಸ್:
ಇನ್ನು ಮಂಗಳೂರು ಏರ್ಪೋರ್ಟಿಂದ ಗಲ್ಫ್ ರಾಷ್ಟ್ರಗಳತ್ತ ತೆರಳಬೇಕಿದ್ದ ಹಲವು ವಿಮಾನಗಳಲ್ಲಿ ಕೆಲವು ಮುಂಬೈನಲ್ಲಿಳಿದರೆ, ಇನ್ನು ಕೆಲವು ಪ್ರಯಾಣ ಆರಂಭಿಸಿದ ಕೆಲವೇ ಹೊತ್ತಲ್ಲಿ ವಾಪಸಾಗಿವೆ. ಇನ್ನು ಕೆಲವುಗಳ ಸಂಚಾರವನ್ನೇ ರದ್ದು ಮಾಡಲಾಗಿದೆ. ಸುಮಾರು ಎಂಟು ವಿಮಾನಗಳ ಹಾರಾಟ ರದ್ದಾಗಿದೆ ಎಂದು ಹೇಳಲಾಗಿದೆ.
-ಬಾಕ್ಸ್-
ಕಠ್ಮಂಡು ವಿಮಾನಗಳು ರದ್ದುನೇಪಾಳದ ಕಠ್ಮಂಡುವಿನಲ್ಲಿ ಪ್ರತಿಕೂಲ ಹವಮಾನದ ಕಾರಣದಿಂದಾಗಿ ಫೆ.26, 27 ಮತ್ತು 28ರಂದು ಬೆಂಗಳೂರು-ಕಠ್ಮಂಡು ವಿಮಾನಗಳ ಸೇವೆ ಬೇರೆಡೆಗೆ ವರ್ಗಾಯಿಸಲಾಗಿತ್ತು. ಅದೇ ರೀತಿ ಶನಿವಾರವೂ ಕೂಡ ವಿಮಾನ ಹಾರಾಟವನ್ನು ಬೇರೆಡೆ ತಿರುಗಿಸಲಾಗಿದೆ. ಈ ಅಡಚಣೆಯಿಂದಾಗಿ ಪ್ರಯಾಣಿಕರು ಸಂಚರಿಸದಂತಾಗಿ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಬಾಧಿತರಿಗೆ ಟಿಕೆಟ್ ಮೊತ್ತ ಮರುಪಾವತಿಸಲು ವಿಮಾನಯಾನ ಸಂಸ್ಥೆ ನಿರ್ಧರಿಸಿದೆ ಎಂದು ಬಿಐಎಎಲ್ ತಿಳಿಸಿದೆ.ಎಂಎಲ್ಸಿ ಭೋಜೇಗೌಡ ಕುಟುಂಬ ದುಬೈ ಏರ್‌ಪೋರ್ಟ್‌ನಲ್ಲಿ ಲಾಕ್:
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹಾಗೂ ಅವರ ಕುಟುಂಬ ದುಬೈನ ವಿಮಾನ ನಿಲ್ದಾಣದಲ್ಲೇ ಸಿಲುಕಿದ್ದಾರೆ.ಈ ಬಗ್ಗೆ ಖುದ್ದು ಎಸ್.ಎಲ್.ಭೋಜೇಗೌಡ ಅವರು ದುಬೈ ವಿಮಾಣ ನಿಲ್ದಾಣದಿಂದ ವಿಡಿಯೋ ಮಾಡಿದ್ದಾರೆ. ಆ ವಿಡಿಯೋದಲ್ಲಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಮತ್ತು ನನ್ನ ಕುಟುಂಬ ಜೋಹನ್ಸ್ ಬರ್ಗ್‌ನಿಂದ ದುಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದೇವೆ. ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು. ವಿಮಾನದಲ್ಲಿ ಕುಳಿತಿದ್ದ ನಮ್ಮನ್ನು ಕೆಳಗಿಳಿಸಿದ್ದಾರೆ. ದುಬೈನಿಂದ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಮುಂದೆ ಏನು ಎಂದು ಯಾರೊಬ್ಬರೂ ಹೇಳುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ವಿಮಾನ ನಿಲ್ದಾಣದಲ್ಲಿ ಎಲ್ಲರೂ ಆತಂಕದಲ್ಲಿದ್ದಾರೆ. ಊಟ-ತಿಂಡಿಗೂ ತೊಂದರೆ ಆಗುತ್ತಿದೆ. ಮೊಬೈಲ್‌ಗಳಲ್ಲಿ ಬ್ಯಾಟರಿ ಕೂಡ ಖಾಲಿಯಾಗುತ್ತಿದ್ದು, ಹೆಚ್ಚಿನ ಪ್ರಯಾಣಿಕರು ಇರುವುದರಿಂದ ಚಾರ್ಜ್ ಮಾಡಿಕೊಳ್ಳುವುದು ಸಮಸ್ಯೆಯಾಗುತ್ತಿದೆ. ಮುಂದೆ ಏನು ಮಾಡಬೇಕು ಎಂದು ಯಾರೊಬ್ಬರೂ ಯಾವುದೇ ಮಾಹಿತಿ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.ವೀಸಾ ಇದ್ದವರಿಗೆ ಮಾತ್ರ ವಿಮಾನ ನಿಲ್ದಾಣದಿಂದ ಹೊರ ಹೋಗಲು ಅವಕಾಶ ನೀಡಿದ್ದಾರೆ. ನನ್ನ ಬಳಿ ಅಮೆರಿಕ ವೀಸಾ ಇದೆ. ಆಚೆ ಹೋದರೆ ಪರಿಸ್ಥಿತಿ ಏನೆಂಬುದು ಗೊತ್ತಿಲ್ಲ. ಹೀಗಾಗಿ ಕುಟುಂಬದ ಜೊತೆ ವಿಮಾನ ನಿಲ್ದಾಣದಲ್ಲೇ ಇದ್ದೇನೆ. ಸದ್ಯಕ್ಕೆ ನಮಗೇನೂ ತೊಂದರೆಯಿಲ್ಲ. ಮುಂದೇನು ಎಂಬುದರ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಭೋಜೇಗೌಡರು ತಿಳಿಸಿದ್ದಾರೆ.