ಖಾಲಿ ನಿವೇಶನಗಳಲ್ಲಿ ಬಿದ್ದಿರುವ ತ್ಯಾಜ್ಯವನ್ನು ಸ್ವತಃ ಮಾಲೀಕರೇ ಆ.15ರ ಒಳಗೆ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯಿಂದ ಸ್ವಚ್ಛಗೊಳಿಸಿ ಅದರ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುವುದು. ಪುನಃ ನಿವೇಶನದಲ್ಲಿ ಕಸ ಬಿದ್ದರೆ ಕನಿಷ್ಠ 25 ಸಾವಿರ ರು.ಗಳಿಂದ ಗರಿಷ್ಠ 1 ಲಕ್ಷ ರು.ವರೆಗೆ ದಂಡ ವಿಧಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಲಿ ನಿವೇಶನಗಳಲ್ಲಿ ಬಿದ್ದಿರುವ ತ್ಯಾಜ್ಯವನ್ನು ಸ್ವತಃ ಮಾಲೀಕರೇ ಆ.15ರ ಒಳಗೆ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯಿಂದ ಸ್ವಚ್ಛಗೊಳಿಸಿ ಅದರ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುವುದು. ಪುನಃ ನಿವೇಶನದಲ್ಲಿ ಕಸ ಬಿದ್ದರೆ ಕನಿಷ್ಠ 25 ಸಾವಿರ ರು.ಗಳಿಂದ ಗರಿಷ್ಠ 1 ಲಕ್ಷ ರು.ವರೆಗೆ ದಂಡ ವಿಧಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ತಿಳಿಸಿದ್ದಾರೆ.ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವಾಗಿಸುವ ಉದ್ದೇಶದಿಂದ ಆಗಸ್ಟ್ ತಿಂಗಳಿಡಿ ‘ತ್ಯಾಜ್ಯದಿಂದ ಸ್ವಾತಂತ್ರ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಗರ ಪಾಲಿಕೆಗಳು ಹಾಗೂ ಇತರೇ ಸಂಸ್ಥೆಗಳಿಂದ ನಗರದ ರಸ್ತೆಗಳಲ್ಲಿ ಬ್ಲ್ಯಾಕ್ ಸ್ಪಾಟ್‌ಗಳು, ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ, ಮರದ ಕೊಂಬೆಗಳು, ವಿದ್ಯುತ್ ಕಂಬಗಳು, ಪೈಪ್‌ಗಳನ್ನು ಸಾಮೂಹಿಕವಾಗಿ ತೆರವುಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ನಗರದ ಅನೇಕ ಖಾಲಿ ನಿವೇಶನಗಳಲ್ಲೂ ವ್ಯಾಪಕ ಪ್ರಮಾಣದಲ್ಲಿ ಬಿದ್ದಿರುವ ಕಸ, ಕಟ್ಟಡ ತ್ಯಾಜ್ಯ ಸೇರಿದಂತೆ ಮತ್ತಿತರ ತ್ಯಾಜ್ಯಗಳನ್ನು ಮಾಲೀಕರೇ ಸ್ವಚ್ಛಗೊಳಿಸಿ ತೆರವುಗೊಳಿಸಬೇಕು.ನಿಯಮದ ಪ್ರಕಾರ ಖಾಲಿ ನಿವೇಶನಗಳನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತ ಸ್ಥಿತಿಯಲ್ಲಿ ನಿರ್ವಹಿಸುವುದು ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ ದಂಡ ವಸೂಲಿ: ಆ.15ರೊಳಗಾಗಿ ಸಂಬಂಧಿಸಿದ ನಿವೇಶನಗಳ ಮಾಲೀಕರು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದಲ್ಲಿ, ಪಾಲಿಕೆಯಿಂದ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತದೆ. ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣ ಹಾಗೂ ತೆರವುಗೊಳಿಸಿದ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುತ್ತದೆ. ತೆರಿಗೆಯನ್ನು ಕರ್ನಾಟಕ ಭೂಕಂದಾಯ ಕಾಯ್ದೆ ಅನುಸಾರ ವಸೂಲಿ ಮಾಡಲು ಕ್ರಮ ಜರುಗಿಸಲಾಗುವುದು.
ನಂತರವೂ ನಿವೇಶನದಲ್ಲಿ ಕಸ ಬಿಸಾಡಿದರೆ ಮೊದಲ ಉಲ್ಲಂಘನೆಗೆ 25ಸಾವಿರ ರು., ನಂತರದ ಉಲ್ಲಂಘನೆಗಳಿಗೆ 50 ಸಾವಿರ ರುಗಳಿಂದ ಒಂದು ಲಕ್ಷ ರು.ವರೆಗೆ ದಂಡ ವಿಧಿಸಲಾಗುವುದು. ನಿವೇಶನಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಮಾಲೀಕರು ಸುತ್ತಮುತ್ತ ಬೇಲಿ, ಕಾಂಪೌಂಡ್ ನಿರ್ಮಿಸಿಕೊಂಡು, ಅನಧಿಕೃತ ತ್ಯಾಜ್ಯ ವಿಲೇವಾರಿಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.ಜನರು ಮಾಹಿತಿ ನೀಡಲು ಕೋರಿಕೆ
ಆ.15ರ ನಂತರವೂ ಸ್ವಚ್ಛಗೊಳಿಸದೆ ಕಸ, ತ್ಯಾಜ್ಯ ಬಿದ್ದಿರುವ ನಿವೇಶನಗಳ ಛಾಯಾಚಿತ್ರಗಳನ್ನು ಜಿಪಿಎಸ್ ಮಾಹಿತಿ ಸಹಿತ ಸಾರ್ವಜನಿಕರು ಜಿಬಿಎ ವಾಟ್ಸ್‌ಆ್ಯಪ್ ಸಂಖ್ಯೆಗೆ ಹಂಚಿಕೊಳ್ಳಬಹುದು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಬಿಎ ತಿಳಿಸಿದೆ. ನಂಬರ್: +91-9448197197.ಮನೆಯಲ್ಲಿ ಹೆಚ್ಚು ಕಸವಿದ್ದರೆ
ಶುಲ್ಕ ಪಾವತಿಸಿ: ಜಿಬಿಎಸಣ್ಣ ಪ್ರಮಾಣದ ಕಸವನ್ನು ಮಾತ್ರ ದಿನನಿತ್ಯ ಮನೆಯ ಬಳಿ ಬರುವ ಕಸ ಸಾಗಿಸುವ ವಾಹನದಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ನಿಗದಿತ ಮಿತಿಗಿಂತ ಹೆಚ್ಚು ಕಸ ಇದ್ದರೆ ಅದನ್ನು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿಕೊಂಡು ಕಸ ಸಾಗಿಸಬೇಕು. ಹೀಗಾಗಿ, ನಿವೇಶನಗಳಲ್ಲಿ ಹೆಚ್ಚು ಕಸ ಇರುವ ನಾಗರಿಕರು ತ್ಯಾಜ್ಯ ಸಾಗಣೆ ಮಾಡುವ ಸಿಬ್ಬಂದಿಗೆ ಮನವಿ ಮಾಡುವ ಮೂಲಕ ಹೆಚ್ಚುವರಿ ವಾಹನದ ವ್ಯವಸ್ಥೆ ಮಾಡಿಸಿಕೊಂಡು ಸಾಗಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನು ಭರಿಸಬೇಕು ಎಂದು ಜಿಬಿಎ ಅಧಿಕಾರಿಯೊಬ್ಬರು ತಿಳಿಸಿದರು.