ಸಾರ್ವಜನಿಕರಿಂದ ರಸ್ತೆ ನಿರ್ವಹಣೆ ಕುರಿತು ಸತತ ದೂರುಗಳು ಬಂದ ಹಿನ್ನೆಲೆಯಲ್ಲಿ ಉತ್ತರ ಪಾಲಿಕೆ ಆಯುಕ್ತರು ರಾತ್ರಿ ವೇಳೆ ವಿವಿಧ ಪ್ರದೇಶಗಳ 156 ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪರಿಣಾಮ 845 ರಸ್ತೆಗುಂಡಿ, ಕೆಟ್ಟಿರುವ 2,300 ಬೀದಿ ದೀಪ ಪತ್ತೆಯಾಗಿವೆ. ಸಮಸ್ಯೆ ತೀವ್ರತೆ ಅರಿತ ಕೂಡಲೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಆಯುಕ್ತರು ರಿಪೇರಿಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.
ಬೆಂಗಳೂರು : ಸಾರ್ವಜನಿಕರಿಂದ ರಸ್ತೆ ನಿರ್ವಹಣೆ ಕುರಿತು ಸತತ ದೂರುಗಳು ಬಂದ ಹಿನ್ನೆಲೆಯಲ್ಲಿ ಉತ್ತರ ಪಾಲಿಕೆ ಆಯುಕ್ತರು ರಾತ್ರಿ ವೇಳೆ ವಿವಿಧ ಪ್ರದೇಶಗಳ 156 ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪರಿಣಾಮ 845 ರಸ್ತೆಗುಂಡಿ, ಕೆಟ್ಟಿರುವ 2,300 ಬೀದಿ ದೀಪ ಪತ್ತೆಯಾಗಿವೆ. ಸಮಸ್ಯೆ ತೀವ್ರತೆ ಅರಿತ ಕೂಡಲೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಆಯುಕ್ತರು ರಿಪೇರಿಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.
ಆಯುಕ್ತ ಪೊಮ್ಮುಲ ಸುನಿಲ್ ಕುಮಾರ್ ಹಾಗೂ ಹೆಚ್ಚುವರಿ ಆಯುಕ್ತರು ಸೇರಿ ನಾಲ್ಕು ತಂಡಗಳಾಗಿ ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಸರ್ವಜ್ಞನಗರ, ಪುಲಕೇಶಿನಗರ ಹಾಗೂ ಯಲಹಂಕ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರಮುಖ ರಸ್ತೆಗಳು ಮತ್ತು ಸಂಪರ್ಕ ರಸ್ತೆಗಳ ಸ್ಥಿತಿ ಪರಿಶೀಲನೆ ನಡೆಸಿದ ವೇಳೆ ಈ ಸಮಸ್ಯೆಗಳು ಕಂಡುಬಂದಿವೆ.
ನಾಗವಾರ, ಥಣಿಸಂದ್ರ ಮುಖ್ಯರಸ್ತೆ, ದಾಸರಹಳ್ಳಿ ಮುಖ್ಯರಸ್ತೆ, ಬಾಗಲೂರು ರಸ್ತೆ, ಜಕ್ಕೂರು, ಕೆ.ನಾರಾಯಣಪುರ ರಸ್ತೆ, ವಿದ್ಯಾರಣ್ಯಪುರ ಮುಖ್ಯರಸ್ತೆ, ಕೊಡಿಗೇಹಳ್ಳಿ, ತಿಂಡ್ಲು ಮುಖ್ಯರಸ್ತೆ, ಬಾಣಸವಾಡಿ ಮುಖ್ಯರಸ್ತೆ, ಹೆಣ್ಣೂರು,ಬಾಗಲೂರು ಮುಖ್ಯರಸ್ತೆ, ಟ್ಯಾನರಿ ರಸ್ತೆ, ಶಾಂಪುರ ಮುಖ್ಯರಸ್ತೆ ಹಾಗೂ ಯಲಹಂಕದ ವಿವಿಧ ಪ್ರಮುಖ ರಸ್ತೆಗಳು ಸೇರಿ ಒಟ್ಟು 156 ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಲ್ಲಿ ಪರಿಶೀಲನೆ ನಡೆಸಲಾಯಿತು.
ಪರಿಶೀಲನೆ ವೇಳೆ ರಸ್ತೆಗುಂಡಿಗಳಲ್ಲದೆ, ರಸ್ತೆ ಕಟಿಂಗ್‌ನಿಂದ ಉಂಟಾಗಿರುವ ಹಾನಿ, ಕಾರ್ಯನಿರ್ವಹಿಸದ ಬೀದಿ ದೀಪಗಳು, ರಸ್ತೆಬದಿಯ ಕಟ್ಟಡ ತ್ಯಾಜ್ಯ ಮತ್ತು ಕಾಮಗಾರಿ ಸಾಮಗ್ರಿಗಳ ರಾಶಿಗಳು, ಘನತ್ಯಾಜ್ಯ, ಬ್ಲ್ಯಾಕ್‌ಸ್ಪಾಟ್‌ಗಳು ಹಾಗೂ ಪಾದಚಾರಿ ಮಾರ್ಗಗಳ ಸ್ಥಿತಿಯನ್ನೂ ಪರಿಶೀಲಿಸಲಾಯಿತು.
ಈ ವೇಳೆ ಒಟ್ಟು 845 ರಸ್ತೆಗುಂಡಿಗಳು, 196 ರಸ್ತೆ ಕಟಿಂಗ್ ಸ್ಥಳಗಳು, 2,300 ಕಾರ್ಯನಿರ್ವಹಿಸದ ಬೀದಿ ದೀಪಗಳು, 279 ತ್ಯಾಜ್ಯ ಅಥವಾ ಕಾಮಗಾರಿ ಸಾಮಗ್ರಿಗಳ ರಾಶಿ ಇರುವ ಸ್ಥಳಗಳು ಹಾಗೂ 256 ಘನತ್ಯಾಜ್ಯ ಬ್ಲ್ಯಾಕ್‌ಸ್ಪಾಟ್‌ಗಳನ್ನು ಪತ್ತೆ ಹಚ್ಚಲಾಯಿತು.
ಬೀದಿ ದೀಪಗಳ ಕುರಿತು ನೂತನ ವ್ಯವಸ್ಥೆ (ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ)ಯನ್ನು ಅಳವಡಿಸಿ ನಾಲ್ಕು ತಿಂಗಳು ಕಳೆದರೂ ಸಾರ್ವಜನಿಕರಿಂದ ಬೀದಿ ದೀಪಗಳು ಇಲ್ಲವೆಂಬ ದೂರುಗಳು ಬರುತ್ತಿದ್ದ ಕಾರಣ ಶೋಧ ನಡೆಸಿದಾಗ ಗುತ್ತಿಗೆದಾರ ನಾಲ್ಕು ತಿಂಗಳಿಂದ ಸಂಪೂರ್ಣ ಬೀದಿ ದೀಪಗಳನ್ನೇ ಎಲ್ ಇಡಿ ಬಲ್ಬ್ ಗಳನ್ನೇ ಅಳವಡಿಸಿರಲಿಲ್ಲ ಎಂಬುದು ಪತ್ತೆಯಾಯಿತು.
ಎಲೆಕ್ಟ್ರಿಕಲ್ ಎಂಜಿನಿಯರ್‌ಗೆ ನೊಟೀಸ್ ಜಾರಿ:
ಬೀದಿದೀಪ ಅಳವಡಿಸುವಲ್ಲಿ ವಿಳಂಬ ಮಾಡಿದ್ದ ಗುತ್ತಿಗೆದಾರನನ್ನು ನಿಯಂತ್ರಿಸದ ಕಾರಣ ಎಲೆಕ್ಟ್ರಿಕಲ್ ಎಂಜಿನಿಯರ್‌ಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ ಆಯುಕ್ತರು ಕೂಡಲೆ ಬೀದಿದೀಪ ಅಳವಡಿಸುವಂತೆ ತಾಕೀತು ಮಾಡಿದ್ದಾರೆ.
ಅಲ್ಲದೆ, ಗುರುತಿಸಲಾದ ರಸ್ತೆಗುಂಡಿಗಳನ್ನು ಆದ್ಯತೆಯ ಮೇರೆಗೆ ಮುಚ್ಚಬೇಕು, ರಸ್ತೆ ಕಟಿಂಗ್‌ನಿಂದ ಹಾನಿಗೊಳಗಾದ ಭಾಗಗಳನ್ನು ಸಮರ್ಪಕವಾಗಿ ಪುನರ್‌ಸ್ಥಾಪಿಸಬೇಕು ಹಾಗೂ ರಸ್ತೆಬದಿಯಲ್ಲಿ ಸಂಗ್ರಹವಾಗಿರುವ ಕಟ್ಟಡ ತ್ಯಾಜ್ಯ ಮತ್ತು ಕಾಮಗಾರಿ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ
ಇದೇ ಸಮಯದಲ್ಲಿ ಪಾದಚಾರಿ ರಸ್ತೆಯಲ್ಲಿ ಅಡ್ಡಿ ಮತ್ತು ಅತಿಕ್ರಮಣಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಕಾಮಗಾರಿಗಳು ಪ್ರಗತಿಯಲ್ಲಿರುವ ಸ್ಥಳಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಬೀದಿ ದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ದಂಡ ವಿಧಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಸಮಸ್ಯೆ ಮರುಕಳಿಸಿದರೆ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
