ಸರ್ ಎಂ.ವಿಶ್ವೇಶ್ವರಯ್ಯ ದೂರದೃಷ್ಟಿ ಹೊಂದಿದ ಅದಮ್ಯ ಚೇತನರಾಗಿದ್ದು, ಎಂಜಿನಿಯರ್‌ಗಳಿಗೆ ಆದರ್ಶಪ್ರಾಯರಾಗಿದ್ದಾರೆ. ಮೈಸೂರು ದಿವಾನರಾಗಿ ಕನ್ನಡ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೆಸ್ಕಾಂ ವಿಭಾಗದ ಕಾರ್ಯಪಾಲಕ ಅಭಿಯಂತರ ಜಿ.ವಿ.ಸಂಪಣ್ಣವರ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಸರ್ ಎಂ. ವಿಶ್ವೇಶ್ವರಯ್ಯ ದೂರದೃಷ್ಟಿ ಹೊಂದಿದ ಅದಮ್ಯ ಚೇತನರಾಗಿದ್ದು, ಎಂಜಿನಿಯರ್‌ಗಳಿಗೆ ಆದರ್ಶಪ್ರಾಯರಾಗಿದ್ದಾರೆ. ಮೈಸೂರು ದಿವಾನರಾಗಿ ಕನ್ನಡ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೆಸ್ಕಾಂ ವಿಭಾಗದ ಕಾರ್ಯಪಾಲಕ ಅಭಿಯಂತರ ಜಿ.ವಿ.ಸಂಪಣ್ಣವರ ಹೇಳಿದರು.ಪಟ್ಟಣದ ಹೆಸ್ಕಾಂ ಕಚೇರಿಯ ಗಣಪತಿ ಮಂಟಪದಲ್ಲಿ ಮಂಗಳವಾರ ರಾಷ್ಟ್ರೀಯ ಎಂಜಿನಿಯರ್ ದಿನಾಚರಣೆ ಅಂಗವಾಗಿ ಸರ್ ಎಂ.ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರ ಸಾಧನೆ ಹಾಗೂ ಜೀವನ ಮೌಲ್ಯಗಳು ಎಲ್ಲರಿಗೂ ಪ್ರೇರಣೆಯಾಗಿವೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯನಿರ್ವಾಹಕ ಅಭಿಯಂತರ ಗುರುಸ್ವಾಮಿ ಮಾತನಾಡಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನಾವೀನ್ಯತೆ ವೇಗವಾಗಿ ಬೆಳೆಯುತ್ತಿದ್ದು, ಎಂಜಿನಿಯರ್‌ಗಳು ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ನೂತನ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ಬದಲಾಗುವ ಮೂಲಕ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳಾದ ಪಿ.ಬಿ.ಸತ್ತಿ, ವಿ.ಪಿ.ಪಾಂಗಿ, ಆನಂದ ಚಟ್ಟರ್, ಸಂತೋಷ ತೋಟದ, ಚಂದ್ರಶೇಖರ ಬೋಳೆಗಾಂವ, ರಮೇಶ ಗುಗ್ರಿ, ಜಗದೀಶ ಅವಟಿ, ಶೌಕತ ಮುಕ್ಕೇರಿ, ಗಿರೀಶ ಬಿಜಾಪುರ, ಪಾರಿಶ್ ನಂದಪ್ಪನವರ ಸೇರಿದಂತೆ ಸಿಬ್ಬಂದಿ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಎಂಜಿನಿಯರ್ ದಿನವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡ ನಾಡಿನವರಾದ ಅವರು ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
-ಜಿ.ವಿ.ಸಂಪಣ್ಣವರ, ಹೆಸ್ಕಾಂ ವಿಭಾಗದ ಕಾರ್ಯಪಾಲಕ ಅಭಿಯಂತರರು.