ಬೆಂಗಳೂರು ಉತ್ತಮ ಗುಣಮಟ್ಟದ ಜೀವನವನ್ನು ನೀಡುತ್ತದೆ. ವಾಯುಗುಣಮಟ್ಟ, ಸುರಕ್ಷತೆ, ರಸ್ತೆ ವ್ಯವಸ್ಥೆ - ಎಲ್ಲ ದೃಷ್ಟಿಯಿಂದಲೂ ದೆಹಲಿಗಿಂತ ಬೆಂಗಳೂರೇ ರಾಜಧಾನಿಯಾಗಲು ಅರ್ಹವಾಗಿದೆ ಎಂದು ದೆಹಲಿ ಮೂಲದ ಯುವತಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ

ನವದೆಹಲಿ: ಬೆಂಗಳೂರು ಉತ್ತಮ ಗುಣಮಟ್ಟದ ಜೀವನವನ್ನು ನೀಡುತ್ತದೆ. ವಾಯುಗುಣಮಟ್ಟ, ಸುರಕ್ಷತೆ, ರಸ್ತೆ ವ್ಯವಸ್ಥೆ - ಎಲ್ಲ ದೃಷ್ಟಿಯಿಂದಲೂ ದೆಹಲಿಗಿಂತ ಬೆಂಗಳೂರೇ ರಾಜಧಾನಿಯಾಗಲು ಅರ್ಹವಾಗಿದೆ ಎಂದು ದೆಹಲಿ ಮೂಲದ ಯುವತಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳಿಗೆ ಗ್ರಾಸವಾಗಿದೆ.

ಸಮೃದ್ಧಿ ಮಖಿಜಾ ಮೂಲತಃ ದೆಹಲಿಯವರಾಗಿದ್ದು, ಅಲ್ಲಿನ ಜೀವನದಿಂದ ಬೇಸತ್ತು 2 ತಿಂಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಬೆಂಗಳೂರಿನ ಉತ್ತಮ ಜನಜೀವನದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್‌ ಮಾಡಿದ್ದಾರೆ. ಇದು ಕೆಲವೇ ಸಮಯದಲ್ಲಿ ವೈರಲ್ ಆಗಿದೆ.

ಯುವತಿ ಹೇಳಿದ್ದೇನು?:

‘ಬೆಂಗಳೂರು ದೆಹಲಿಗಿಂತ ಉತ್ತಮ ಗುಣಮಟ್ಟದ ಜೀವನವನ್ನು ನೀಡುತ್ತದೆ. 2 ತಿಂಗಳಿಗಿಂತೂ ಹೆಚ್ಚು ಕಾಲ ಇಲ್ಲಿ ವಾಸವಿರುವುದರಿಂದ ಹೇಳುತ್ತಿದ್ದೇನೆ, ಬೆಂಗಳೂರೇ ರಾಷ್ಟ್ರ ರಾಜಧಾನಿಯಾಗಲು ಯೋಗ್ಯ ನಗರವಾಗಿದೆ. ಇತ್ತೀಚೆಗೆ ನನ್ನ ಪಾಲಕರನ್ನು ಭೇಟಿಯಾಗಲು ದೆಹಲಿಗೆ ಹೋಗಿಬಂದ ಬಳಿಕ ಈ ಅನಿಸಿಕೆ ಮತ್ತಷ್ಟು ಬಲವಾಯಿತು. ಇದಕ್ಕೆ ಬಹುಮುಖ್ಯವಾದ ಕಾರಣ ವಾಯುಗುಣಮಟ್ಟ. ದೆಹಲಿಯಲ್ಲಿದ್ದರೆ ಗ್ಯಾಸ್ ಛೇಂಬರಿನಲ್ಲಿದ್ದಂತೆ ಭಾಸವಾಗುತ್ತದೆ. ಅಲ್ಲಿ ನಿತ್ಯಜೀವನ ತ್ರಾಸದಾಯಕವಾಗಿದೆ. ಆದರೆ ಬೆಂಗಳೂರಿನಲ್ಲಿ ಆ ಪರಿಸ್ಥಿತಿಯಿಲ್ಲ’ ಎಂದು ದೆಹಲಿ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

ಸುರಕ್ಷತೆ ಕುರಿತು ಪ್ರಸ್ತಾವಿಸಿರುವ ಅವರು, ‘ರಾತ್ರಿ ಸಹ ಮಹಿಳೆಯರಿಗೆ ಬೆಂಗಳೂರು ಹೆಚ್ಚು ಸುರಕ್ಷಿತವಾಗಿದೆ. ಸ್ನೇಹಿತರನ್ನು ಭೇಟಿಯಾಗಿ, ರಾತ್ರಿ 10 ಗಂಟೆಗೆ ಒಬ್ಬಳೇ ಮನೆಗೆ ಹೋಗುವಾಗಲೂ ಹಿತಕರ ಅನುಭವವಾಯಿತು. ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕಾಳಜಿಯ ವಿಷಯವಾಗಿಲ್ಲ. ಬೆಂಗಳೂರಿಗೆ ಆದ್ಯತೆ ಕೊಡಲು ಇದೂ ಒಂದು ಮುಖ್ಯ ಕಾರಣ’ ಎಂದಿದ್ದಾರೆ.

ಬೆಂಗಳೂರು ರಸ್ತೆಗಳೇ ಉತ್ತಮ:

ದೆಹಲಿಗಿಂತ ಬೆಂಗಳೂರಿನ ಮೂಲಸೌಕರ್ಯ, ನಗರ ವ್ಯವಸ್ಥೆ ಮತ್ತು ರಸ್ತೆಗಳು ಉತ್ತಮ ಎಂದಿರುವ ಮಖಿಜಾ, ‘ಬೆಂಗಳೂರಿನ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳು ಪಾದಚಾರಿಗಳಿಗೆ ಹೆಚ್ಚು ಅನುಕೂಲಕರವಾಗಿವೆ. ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರವಾಸಿಗರು ಕಲುಷಿತ ಗಾಳಿ, ದಟ್ಟಣೆಯ ರಸ್ತೆಗಳು ಮತ್ತು ನಡೆಯಲು ಯೋಗ್ಯವಲ್ಲದ ದೆಹಲಿಗೆ ಏಕೆ ಬರಬೇಕು? ಬೆಂಗಳೂರಿಗೆ ಬಂದರೆ ಜಾಗತಿಕವಾಗಿ ಇನ್ನೂ ಹೆಚ್ಚಿನ ಪ್ರಭಾವ ಉಂಟುಮಾಡಬಹುದು’ಎಂದಿದ್ದಾರೆ.

ಮಿಶ್ರ ಪ್ರತಿಕ್ರಿಯೆ:

ಮಖಿಜಾ ಅವರ ವಿಡಿಯೋಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು, ದೆಹಲಿಯ ವಾಯುಮಾಲಿನ್ಯ ಮತ್ತು ಸುರಕ್ಷತೆ ವಿಷಯವಾಗಿ ಆಕೆಯ ವಾದವನ್ನು ಒಪ್ಪಿಕೊಂಡರೆ, ಇನ್ನು ಕೆಲವರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ನೀರಿನ ಕೊರತೆಗಳನ್ನು ಎತ್ತಿ ತೋರಿಸಿದ್ದಾರೆ. ರಾಷ್ಟ್ರ ರಾಜಧಾನಿಯಾಗುವುದು ಜೀವನ ಗುಣಮಟ್ಟದ ಮೇಲೆ ಮಾತ್ರ ನಿರ್ಧಾರವಾಗುವುದಿಲ್ಲ, ರಾಜಕೀಯ, ಐತಿಹಾಸಿಕ ಮತ್ತು ಆಡಳಿತಾತ್ಮಕ ವಿಚಾರಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.