ವಾಷಿಂಗ್ಟನ್‌: ಉದ್ವಿಗ್ನತೆಯನ್ನು ತಗ್ಗಿಸುವ ಉದ್ದೇಶದಿಂದ ಜಿನೇವಾದಲ್ಲಿ ಅಮೆರಿಕ ಮತ್ತು ಇರಾನ್‌ ಅಣ್ವಸ್ತ್ರದ ಬಗ್ಗೆ ಮಾತುಕತೆ ನಡೆಸಿರುವ ಹೊತ್ತಿನಲ್ಲೇ, ಇಸ್ರೇಲ್‌ ಜತೆ ಸೇರಿಕೊಂಡು ಶೀಘ್ರ ಇರಾನ್‌ ಮೇಲೆ ಅಮೆರಿಕ ಭಾರೀ ದಾಳಿ ನಡೆಸಬಹುದು ಎಂದು ವರದಿಯಾಗಿದೆ. ‘ಇರಾನ್‌ ನಾಶ ಅಮೆರಿಕದಿಂದ ಸಾಧ್ಯವಿಲ್ಲ’ ಎಂದು ಸರ್ವೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿ ಗುಡುಗಿದ ಬೆನ್ನಲ್ಲೇ ಈ ಮಾಹಿತಿ ಬಂದಿದೆ.

ಸುದ್ದಿಸಂಸ್ಥೆ ಆಕ್ಸಿಯೋಸ್ ಪ್ರಕಾರ, ‘ಕಳೆದ ವರ್ಷ ನಡೆಸಿದ್ದ 12 ದಿನಗಳ ಸುದೀರ್ಘ ದಾಳಿಗಿಂತ ಈ ಬಾರಿ ಇಸ್ರೇಲ್‌ ಜತೆ ಸೇರಿ ಅಮೆರಿಕ ಮಾಡಲಿರುವ ಆಕ್ರಮಣ ಭಯಂಕರವಾಗಿರಲಿದೆ ಹಾಗೂ ಹಲವು ವಾರಗಳ ಕಾಲ ನಡೆಯುವ ಸಂಭವವಿದೆ. ಇದಕ್ಕಾಗಿ ಅಮೆರಿಕದ ಸೇನೆ ಈಗಾಗಲೇ ಸಿದ್ಧತೆ ಆರಂಭಿಸಿದೆ.’


ಈಗಾಗಲೇ ವಿಶ್ವದ ಬೃಹತ್‌ ಯುದ್ಧನೌಕೆಯನ್ನು ಇರಾನ್‌ ಸಮೀಪ ಅಮೆರಿಕ ನಿಯೋಜಿಸಿದೆ. ಸಾಲದ್ದಕ್ಕೆ, ಎಫ್‌-35 ಲೈಟ್ನಿಂಗ್ II, ಎಫ್‌-22 ರಾಪ್ಟರ್ ಮತ್ತು ಎಫ್‌-16 ಸೇರಿದಂತೆ 50 ಫೈಟರ್ ಜೆಟ್‌ಗಳನ್ನು ಮಧ್ಯಪ್ರಾಚ್ಯದತ್ತ ಕಳುಹಿಸಿದೆ. ಆ ಪ್ರದೇಶದಲ್ಲಿ ವಾಯು ಮತ್ತು ನೌಕಾಪಡೆಯ ಬಲವರ್ಧನೆಗಾಗಿ ಅವುಗಳನ್ನು ನಿಯೋಜಿಸಿರುವುದಾಗಿ ಅಮೆರಿಕ ಹೇಳುತ್ತಿದ್ದರೂ, ಹಾರ್ಮುಜ್ ಜಲಸಂಧಿಯನ್ನು ಭಾಗಶಃ ಮುಚ್ಚಿ ಇರಾನ್‌ ಸಮರಾಭ್ಯಾಸ ನಡೆಸುತ್ತಿರುವ ಹೊತ್ತಿನಲ್ಲಿ ಈ ಹೆಜ್ಜೆ ಇಟ್ಟಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.2025ರ ಜೂನ್‌ನಲ್ಲಿ ‘ಆಪರೇಷನ್‌ ಮಿಡ್‌ನೈಟ್‌ ಹ್ಯಾಮರ್‌’ ನಡೆಸಿ ಇರಾನ್‌ನ 3 ಅಣ್ವಸ್ತ್ರ ನೆಲೆಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿತ್ತು.