- ಚೀನಾ ರೋಬೋ ಡಾಗ್‌ ತೋರಿಸಿ, ತಾವೇ ಸೃಷ್ಟಿಸಿದ್ದೆಂದ ಗಲ್ಗೋಟಿಯಾಸ್‌ ವಿವಿ ಪ್ರಾಧ್ಯಾಪಕಿ


- ಭಾರಿ ಟ್ರೋಲ್‌ ಬಳಿಕ ತೇಪೆ । ಸುಳ್ಳು ಹೇಳಿದ್ದಕ್ಕೆ ಸ್ಟಾಲ್‌ ಮುಚ್ಚಿಸಿ ನಾಯಿಗೆ ಕೇಂದ್ರ ಗೇಟ್‌ಪಾಸ್‌

ಏನಿದು ರೋಬೋ ಡಾಗ್‌?ಶ್ವಾನಾಕೃತಿಯಲ್ಲಿರುವ ಈ ರೋಬೋಟ್‌ ನಡೆಯುವುದು, ಓಡುವುದು, ಜಿಗಿಯುವುದು, ಕುಣಿಯುವುದು, ಬಿದ್ದು ಏಳುವುದು ಇತ್ಯಾದಿಗಳನ್ನು ಮಾಡುತ್ತದೆ. ಇದನ್ನು ಕೋಡ್‌ಗಳ ಮೂಲಕ ನಿಯಂತ್ರಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಕೋಡಿಂಗ್‌ ಕಲಿಸಲು ಮತ್ತು ಅದರ ಪ್ರಯೋಗ ನಡೆಸಲು ಡಾಗ್‌ ರೋಬೋ ಬಳಕೆಯಾಗುತ್ತದೆ. ಉಳಿದಂತೆ ಈ ರೋಬೋ ಡಾಗ್‌ ಅನ್ನು ಶೋಧಕಾರ್ಯ, ರಕ್ಷಣೆ ಇತ್ಯಾದಿ ಕೆಲಸಗಳಲ್ಲಿ ಬಳಸಲಾಗುತ್ತದೆ.

___==

ಕ್ಯಾಮೆರಾ ನೋಡಿಎಡವಟ್ಟು ಮಾಡಿದ್ಲು!ವಿವಾದ ಬಗ್ಗೆ ನಾವು ಕ್ಷಮೆ ಯಾಚಿಸುತ್ತೇವೆ. ನಮ್ಮ ಸಿಬ್ಬಂದಿಗೆ (ನೇಹಾ ಸಿಂಗ್‌) ರೋಬೋ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲ. ಆಕೆ ಕ್ಯಾಮೆರಾ ನೋಡಿ ಉತ್ಸಾಹದಲ್ಲಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಅವರಿಗೆ ಮಾಧ್ಯಮಗಳೆದುರು ಮಾತನಾಡುವ ಅಧಿಕಾರವೇ ಇರಲಿಲ್ಲ.

ಗಲ್ಗೋಟಿಯಾಸ್ ವಿವಿ, ನೋಯ್ಡಾ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯ ವಸ್ತುಪ್ರದರ್ಶನದಲ್ಲಿ ಉತ್ತರಪ್ರದೇಶದ ನೋಯ್ಡಾ ಮೂಲದ ಗಲ್ಗೋಟಿಯಾಸ್‌ ವಿಶ್ವವಿದ್ಯಾಲಯವು ಚೀನಾ ನಿರ್ಮಿತ ರೋಬೋ ಡಾಗ್ ಅನ್ನು (ರೋಬೋಟ್ ನಾಯಿ) ತನ್ನ ಆವಿಷ್ಕಾರ ಪ್ರದರ್ಶಿಸಿದ್ದು ಭಾರೀ ಟೀಕೆಗೆ ಕಾರಣವಾಗಿದೆ.

ಇದು ವಿವಾದವಾಗುತ್ತಿದ್ದಂತೆ ವಿವಿಯನ್ನು ಪ್ರದರ್ಶನ ಕೇಂದ್ರದಿಂದ ಹೊರದಬ್ಬಲಾಗಿದೆ. ಬಳಿಕ ಎಐ ಶೃಂಗದಲ್ಲಿ ಯಾವುದೇ ಪ್ರದರ್ಶಕರು ತಮ್ಮದಲ್ಲದ ವಸ್ತುಗಳನ್ನು ಪ್ರದರ್ಶಿಸುವುದನ್ನು ಸರ್ಕಾರ ನಿರ್ಬಂಧಿಸಿದೆ. ಇದೆಲ್ಲದರ ನಡುವೆ, ಮೊದಲು ತನ್ನ ಅವಾಂತರದ ಬಗ್ಗೆ ಕ್ಷಮೆ ಕೇಳಲು ವಿವಿ ಹಿಂದೇಟು ಹಾಕಿದರೂ, ವ್ಯಾಪಕ ಜನಾಕ್ರೋಶದ ಬಳಿಕ ಕ್ಷಮೆಯಾಚಿಸಿದೆ.

ಓರಾಯನ್‌ ಪ್ರದರ್ಶನ ವಿವಾದ:

ಖಾಸಗಿ ವಿವಿಯಾಗಿರುವ ಗಲ್ಗೋಟಿಯಾಸ್‌ ಎಐ ಶೃಂಗದಲ್ಲಿನ ತನ್ನ ಸ್ಟಾಲ್‌ನಲ್ಲಿ ‘ಓರಾಯನ್‌’ ಹೆಸರಿನ ರೋಬೋ ಶ್ವಾನವನ್ನು ಪ್ರದರ್ಶನಕ್ಕೆ ಇಟ್ಟಿತ್ತು. ಅದರ ಬಗ್ಗೆ ದೂರದರ್ಶನ ಚಾನೆಲ್‌ಗೆ ಮಾಹಿತಿ ನೀಡುವ ವೇಳೆ ವಿವಿ ಪ್ರಾಧ್ಯಾಪಕಿ ನೇಹಾ ಸಿಂಗ್‌, ‘ಓರಾಯನ್‌ ಅನ್ನು 350 ಕೋಟಿ ರು. ಯೋಜನೆಯಡಿ ನಾವು ಆವಿಷ್ಕಾರ ಮಾಡಿದ್ದೇವೆ’ ಎಂದಿದ್ದರು.

ಇದರ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗುತ್ತಿದ್ದಂತೆ, ‘ಈ ರೋಬೋ ಹೆಸರು ಉನಿಟ್ರೀ. ಇದನ್ನು ಸೃಷ್ಟಿಸಿದವರು ನಾವು’ ಎಂದು ಚೀನೀಯರು ಹೇಳಿಕೊಳ್ಳತೊಡಗಿದರು. ಇದಕ್ಕೆ ಪೂರಕವಾಗಿ ಹಲವು ಸ್ಕ್ರೀನ್‌ಶಾಟ್‌ಗಳನ್ನೂ ಹಂಚಿಕೊಂಡು, ಈ ರೋಬೋ ಡಾಗ್‌ ಆನ್‌ಲೈನ್‌ನಲ್ಲೂ ಲಭ್ಯವಿದೆ ಎಂದು ತಿರುಗೇಟು ನೀಡಿದರು. ತಿಪ್ಪೆ ಸಾರಿಸಲು ವಿವಿ ಯತ್ನ:

ಓರಾಯನ್‌ ರೋಬೋ ಡಾಗ್‌ ಪ್ರದರ್ಶನ ವಿವಾದಕ್ಕೆ ಎಡೆಮಾಡಿಕೊಟ್ಟ ಬೆನ್ನಲ್ಲೇ ಸ್ಪಷ್ಟನೆ ನೀಡಲು ಯತ್ನಿಸಿದ ಗಲ್ಗೋಟಿಯಾಸ್‌ ವಿವಿ, ‘ಸಂಶೋಧನೆಯ ಉದ್ದೇಶದಿಂದ ಸಾಮಾನ್ಯವಾಗಿ ವಿದೇಶಗಳಿಂದ ಇಂತಹ ವಸ್ತುಗಳನ್ನು ತರುತ್ತಿರುತ್ತೇವೆ. ಆದರೆ ನಾವೇ ರೋಬೋ ಡಾಗ್‌ ಸೃಷ್ಟಿಕರ್ತರು ಎಂದು ಎಲ್ಲೂ ಹೇಳಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ’ ಎಂದಿತ್ತು. ಆದರೆ ಪ್ರಾಧ್ಯಾಪಕಿ ನೇಹಾ ಸಿಂಗ್‌, ‘ಇದು ನಮ್ಮ ವಿವಿ ಆವಿಷ್ಕಾರ’ ಎಂದು ನೀಡಿದ್ದ ಹೇಳಿಕೆಯ ವಿಡಿಯೋ ಲಭ್ಯವಿದ್ದ ಕಾರಣ, ‘ವಿವಿ ಹೇಳಿಕೆ ಸುಳ್ಳು’ ಎಂದು ಮತ್ತಷ್ಟು ಜನಾಕ್ರೋಶ ವ್ಯಕ್ತವಾಯಿತು.

ಬಳಿಕ, ವಿವಾದ ಹುಟ್ಟಿಗೆ ಕಾರಣವಾದ ನೇಹಾ ಸಿಂಗ್‌ ಮಾತನಾಡಿ, ‘ವಿಷಯವನ್ನು ಸ್ಪಷ್ಟವಾಗಿ ವಿವರಿಸದ ಕಾರಣ ವಿವಾದ ಉಂಟಾಗಿದೆ. ಬಹುಶಃ ನಾನು ಅದನ್ನು ಸರಿಯಾಗಿ ಸಂವಹನ ಮಾಡಿಲ್ಲ. ಇದರ ಹೊಣೆಯನ್ನು ನಾನು ಹೊರುತ್ತೇನೆ. ನಮ್ಮ ವಿದ್ಯಾರ್ಥಿಗಳು ರೋಬೋ ಬಳಸಿಕೊಂಡು ತಮ್ಮದೇ ಆದ ಉತ್ತಮ ವಸ್ತುಗಳನ್ನು ರಚಿಸುವಂತೆ ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿತ್ತು. ಹೀಗಿರುವಾಗ, ಓರಾಯನ್‌ಅನ್ನು ನಾವೇ ತಯಾರಿಸಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು. ಆದರೆ, ‘ನನ್ನ ಹೇಳಿಕೆ ಸುಳ್ಳು’ ಅಥವಾ ‘ತಪ್ಪಾಗಿತ್ತು’ ಎಂದು ನೇರವಾಗಿ ಒಪ್ಪಿಕೊಳ್ಳಲಿಲ್ಲ.

ವಿವಿಯ ರಿಜಿಸ್ಟ್ರಾರ್‌ ಕೂಡ ಪ್ರಾಧ್ಯಾಪಕಿಯ ಬೆಂಬಲಕ್ಕೆ ನಿಂತು, ‘ನೇಹಾ ಅವರು 2 ಪದ ಬಳಕೆಯಲ್ಲಿ ಗೊಂದಲ ಮಾಡಿಕೊಂಡಿದ್ದಾರೆ. ಡೆವಲಪ್‌ಮೆಂಟ್‌ (ಅಭಿವೃದ್ಧಿ) ಅನ್ನುವ ಬದಲು ಡೆವಲಪ್‌ (ಸೃಷ್ಟಿ) ಎಂದಿದ್ದಾರೆ. ವಿದ್ಯಾರ್ಥಿಗಳ ಸಂಶೋಧನೆಗಾಗಿ ಅದನ್ನು ಚೀನಾದಿಂದ ತಂದಿದ್ದೇವೆ ಹೊರತು ನಾವು ಅದನ್ನು ಸೃಷ್ಟಿಸಿಲ್ಲ’ ಎಂದು ಸಮರ್ಥಿಸಿಕೊಂಡರು.

ಕೇಂದ್ರದಿಂದ ಗೇಟ್‌ಪಾಸ್‌:

ಜಾಗತಿಕ ನಾಯಕರು ಮತ್ತು ಐಟಿ ದಿಗ್ಗಜರು ಆಗಮಿಸಿರುವ ಶೃಂಗದಲ್ಲಿ ಇಂತಹ ಘಟನೆ ನಡೆದಿರುವ ಬೆನ್ನಲ್ಲೇ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಗಲ್ಗೋಟಿಯಾಸ್‌ ವಿವಿಯ ಸ್ಟಾಲ್‌ ಮುಚ್ಚಿಸಿದೆ. ಜತೆಗೆ, ಆ ಪ್ರದೇಶದ ವಿದ್ಯುತ್‌ ಸರಬರಾಜನ್ನು ಕಟ್‌ ಮಾಡಿದೆ.

ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಈ ಬಗ್ಗೆ ಮಾತನಾಡುತ್ತಾ, ‘ತಮ್ಮದಲ್ಲದ ವಸ್ತುಗಳ ಪ್ರದರ್ಶನವನ್ನು ಸಹಿಸುವುದಿಲ್ಲ. ಇದರ ಮುಂದುವರಿಕೆ ಸಹ್ಯವಲ್ಲ. ಈ ವಿವಾದದಿಂದ ಅನ್ಯರ ಶ್ರಮ ವ್ಯರ್ಥವಾಗಬಾರದು’ ಎಂದಿದ್ದಾರೆ.

ಕೊನೆಗೆ ಕ್ಷಮೆಯಾಚನೆ:ಸ್ಪಷ್ಟನೆಗಳಿಂದ ಪ್ರಯೋಜನವಾಗದ ಬೆನ್ನಲ್ಲೇ ಕೊನೆಗೆ ವಿವಿ ಕ್ಷಮೆ ಯಾಚಿಸಿದ್ದು, ‘ಈ ಬಗ್ಗೆ ನಾವು ಕ್ಷಮೆ ಯಾಚಿಸುತ್ತೇವೆ. ನಮ್ಮ ಸಿಬ್ಬಂದಿಗೆ (ನೇಹಾ ಸಿಂಗ್‌) ರೋಬೋ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲ. ಆಕೆ ಕ್ಯಾಮೆರಾ ನೋಡಿ ಉತ್ಸಾಹದಲ್ಲಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಅವರಿಗೆ ಮಾಧ್ಯಮಗಳೆದುರು ಮಾತನಾಡುವ ಅಧಿಕಾರವೇ ಇರಲಿಲ್ಲ’ ಎನ್ನುವ ಮೂಲಕ ಮುಖ ಉಳಿಸಿಕೊಳ್ಳಲು ಪ್ರಯತ್ನಿಸಿದೆ.