ರಾಜ್ಯಾದ್ಯಂತ ಜೈಲಿಗೆ ಬರುವ ಮತ್ತು ಜೈಲಿನಿಂದ ಹೊರಗಡೆ ಹೋಗುವ ಕೈದಿಗಳಿಗೆ ಕಡ್ಡಾಯವಾಗಿ ಎನ್​ಡಿಪಿಎಸ್​​ ತಪಾಸಣೆ ಮಾಡಲಾಗುವುದು ಎಂದು ಕಾರಾಗೃಹ ಇಲಾಖೆ ಪೊಲೀಸ್‌ ಮಹಾನಿರ್ದೇಶಕ ಅಲೋಕಕುಮಾರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯದ ಕೆಲವೆಡೆ ಜೈಲುಗಳಲ್ಲಿರುವ ಕೈದಿಗಳು ಗಾಂಜಾ ವ್ಯಸನಿಗಳಾಗಿರುವುದು ಕಂಡು ಬಂದಿದೆ. ಜತೆಗೆ, ಮಾದಕ ವಸ್ತುಗಳ ಮಾರಾಟ ಜಾಲವೂ ಕಂಡು ಬಂದಿದೆ. ಇದನ್ನು ತಡೆಯಲು ಇನ್ನು ಮುಂದೆ ರಾಜ್ಯಾದ್ಯಂತ ಜೈಲಿಗೆ ಬರುವ ಮತ್ತು ಜೈಲಿನಿಂದ ಹೊರಗಡೆ ಹೋಗುವ ಕೈದಿಗಳಿಗೆ ಕಡ್ಡಾಯವಾಗಿ ಎನ್​ಡಿಪಿಎಸ್​​ ತಪಾಸಣೆ ಮಾಡಲಾಗುವುದು ಎಂದು ಕಾರಾಗೃಹ ಇಲಾಖೆ ಪೊಲೀಸ್‌ ಮಹಾನಿರ್ದೇಶಕ ಅಲೋಕಕುಮಾರ ಹೇಳಿದ್ದಾರೆ.ಬೆಂಗಳೂರು ಹಾಗೂ ಬೆಳಗಾವಿ ಜೈಲುಗಳಲ್ಲಿ ಡ್ರಗ್ಸ್‌, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಬಳಕೆ, ಸಾಗಾಟ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಬುಧವಾರ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಅವರು ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕಾರಾಗೃಹಗಳಲ್ಲಿ ತೀವ್ರ ತಪಾಸಣೆ ನಂತರವೂ ಕದ್ದು ಮುಚ್ಚಿ ಮಾದಕ ದ್ರವ್ಯ ಬಳಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಜೈಲಿಗೆ ಒಳಬರುವ ಮತ್ತು ಹೊರಗಡೆ ಹೋಗುವ ಕೈದಿಗಳಿಗೆ ಕಡ್ಡಾಯವಾಗಿ ಎನ್​ಡಿಪಿಎಸ್​​ ತಪಾಸಣೆ ಮಾಡಲಾಗುವುದು. ಕಾರಾಗೃಹಕ್ಕೆ ಬರುವ ಕೈದಿ ಸೇರಿದಂತೆ ಪ್ರತಿಯೊಬ್ಬರನ್ನು ಭೌತಿಕ ತಪಾಸಣೆಗೆ ಒಳಪಡಿಸಲಾಗುವುದು. ಇನ್ನೊಂದು ವಾರದಲ್ಲಿ ಇದು ಜಾರಿಗೆ ಬರಲಿದೆ. ಜೊತೆಗೆ, ಕಾರಾಗೃಹಗಳಲ್ಲಿ ಯಾವುದೇ ಗದ್ದಲ-ಗೊಂದಲ ಆಗದಂತೆ ತಡೆಯಲು ಯುವ ಅಪರಾಧಿಗಳು, ಹೊಸ ಕೈದಿಗಳನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗುವುದು ಎಂದು ತಿಳಿಸಿದರು.

ಕಾರಾಗೃಹಗಳಲ್ಲಿ ಕೈದಿಗಳಿಗೆ ಮೊಟಕುಗೊಂಡ ಶಿಕ್ಷಣವನ್ನು ಮುಂದುವರಿಸಲು ಅವಕಾಶ ಕಲ್ಪಿಸಲಾಗುವುದು. ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್‌ ಸೇರಿದಂತೆ ವಿವಿಧ ವಿಷಯಗಳಲ್ಲಿ ಕೌಶಲ್ಯಾಧಾರಿತ ತರಬೇತಿ ನೀಡಲಾಗುವುದು. ಜೈಲಿನಿಂದ ಬಿಡುಗಡೆಯಾದ ಬಳಿಕ ಅವರ ಜೀವನಕ್ಕೆ ಇದು ಸಹಕಾರಿಯಾಗಲಿದೆ. ಅಲ್ಲದೆ, ಕೈದಿಗಳು ಮಾನಸಿಕ ಒತ್ತಡದಿಂದ ಹೊರಬರಲು ಸಹಾಯವಾಗುವಂತೆ ಕೈದಿಗಳಿಗೆ ಯೋಗ, ಧ್ಯಾನ ಕಡ್ಡಾಯ ಮಾಡಲಾಗುವುದು ಎಂದು ಅವರು ತಿಳಿಸಿದರು.