ನವದೆಹಲಿ: ಅಮೆರಿಕದಲ್ಲಿರುವ ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿಯನ್ನು ಭಾರತದಲ್ಲೂ ಅಳವಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಭಾರತೀಯ ಕಾಂಗ್ರೆಸ್ ಅನಿವಾಸಿ ಒಕ್ಕೂಟದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಅಂತರ ಕಾಯ್ದುಕೊಂಡಿದೆ. ‘ಪಿತ್ರಾರ್ಜಿತ ಆಸ್ತಿ ಪದ್ಧತಿ ಜಾರಿ ಮಾಡುವ ಯಾವುದೇ ಯೋಚನೆ ಇಲ್ಲ. ಆದರೆ ಇದರ ಮರುಜಾರಿಗೆ ಮೋದಿ ಸರ್ಕಾರ 3 ಬಾರಿ ಯತ್ನಿಸಿತ್ತು’ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಕ್ಷದ ಕಾರ್ಯದರ್ಶಿ ಜೈರಾಂ ರಮೇಶ್, ‘ಸ್ಯಾಮ್ ಪಿತ್ರೋಡಾ ಅವರು ಅತ್ಯಂತ ಪ್ರಬುದ್ಧರಾಗಿದ್ದು, ಹಲವಾರು ವಿಷಯಗಳಲ್ಲಿ ಭಾರತಕ್ಕೆ ತಮ್ಮದೇ ಅದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರು ಭಾರತದ ಏಳಿಗೆಗೆ ಸಂಬಂಧಿಸಿದ ವಿಚಾರಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ ಅವರ ಎಲ್ಲ ಹೇಳಿಕೆಗಳನ್ನು ಪಕ್ಷ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ’ ಎಂದು ತಿಳಿಸಿದ್ದಾರೆ.
ಅಲ್ಲದೆ, ‘ರಾಜೀವ್ ಗಾಂಧಿ ಈ ಕಾಯ್ದೆಯನ್ನು 40 ವರ್ಷ ಹಿಂದೆ ರದ್ದು ಮಾಡಿದ್ದರು. ಆದರೆ 2014ರಲ್ಲಿ ಅಂದಿನ ಮೋದಿ ಸರ್ಕಾರದ ವಿತ್ತ ಖಾತೆ ರಾಜ್ಯ ಸಚಿವ ಈ ಕಾಯ್ದೆ ಮರುಜಾರಿ ಮಾಡುವ ಇಂಗಿತ ವ್ಯಕ್ತಪಡಿದಿದ್ದರು. 2017ರಲ್ಲಿ ಕಾಯ್ದೆ ಮರುಜಾರಿ ಆಗಲಿದೆ ಎಂಬ ಪತ್ರಿಕಾ ವರದಿ ಪ್ರಕಟ ಆಗಿದ್ದವು. ಬಳಿಕ 2018ರಲ್ಲಿ ಪಿತ್ರಾರ್ಜಿತ ಆಸ್ತಿ ಕಾಯ್ದೆ ಹೊಗಳಿದ್ದರು’ ಎಂದಿದ್ದಾರೆ.
ಇದೇ ವೇಳೆ ಪಿತ್ರೋಡಾ ವಿವಾದಕ್ಕೆ ಪ್ರತಿಕ್ರಿಯೆ ನೀಡಿ, ತಮ್ಮ ಹೇಳಿಕೆಯನ್ನು ಭಾರತೀಯ ಮಾಧ್ಯಮಗಳು ತಿರುಚಿವೆ ಎಂದು ಟ್ವೀಟ್ ಮಾಡಿದ್ದಾರೆ.
ಅಮೆರಿಕದ ಪಿತ್ರಾರ್ಜಿತ ಆಸ್ತಿ ತೆರಿಗೆ ಕಾಯ್ದೆ ಎಂದರೇನು?
ಅಮೆರಿಕದಲ್ಲಿ 2 ರೀತಿ ತೆರಿಗೆ ಇದೆ. ಒಂದು ಎಸ್ಟೇಟ್ ಟ್ಯಾಕ್ಸ್, ಮತ್ತೊಂದು ಇನ್‌ಹೆರಿಟೆನ್ಸ್ (ಉತ್ತರಾಧಿಕಾರ) ಟ್ಯಾಕ್ಸ್. 12 ರಾಜ್ಯಗಳಲ್ಲಿ ಎಸ್ಟೇಟ್ ಟ್ಯಾಕ್ಸ್ ಮತ್ತು 6 ರಾಜ್ಯಗಳಲ್ಲಿ ಉತ್ತರಾಧಿಕಾರ ತೆರಿಗೆ ಜಾರಿಯಲ್ಲಿದೆ. ಉತ್ತರಾಧಿಕಾರ ತೆರಿಗೆ ಕಾಯ್ದೆ ಅನ್ವಯ, ವ್ಯಕ್ತಿಯೊಬ್ಬ ಸಾವನ್ನಪ್ಪಿದ ಬಳಿಕ ಆತನ ಆಸ್ತಿಯಲ್ಲಿನ ಒಂದಿಷ್ಟು ಭಾಗವನ್ನು ಸರ್ಕಾರ ವಶಪಡಿಸಿಕೊಂಡರೆ ಉಳಿದ ಪಾಲು ಮಕ್ಕಳಿಗೆ ವರ್ಗ ಆಗುತ್ತದೆ. ಆದರೆ ಪಿತ್ರೋಡಾ ಹೇಳಿದಂತೆ ಶೇ.55 ತೆರಿಗೆ ಇಲ್ಲ. ಶೇ.1ರಿಂದ ಶೇ.18ರವರೆಗೆ ತೆರಿಗೆ ಇದೆ.
ಪಿತ್ರಾರ್ಜಿತ ಆಸ್ತಿ ತೆರಿಗೆ ಯಾರು ಕಟ್ಟಬೇಕು?ಸಾಮಾನ್ಯವಾಗಿ ಸಂಗಾತಿ, ಮಕ್ಕಳು, ಮೊಮ್ಮಕ್ಕಳು ಅವಲಂಬಿತರು ಮತ್ತು ಚಾರಿಟಬೆಲ್ ಟ್ರಸ್ಟ್‌ಗಳಿಗೆ ಇಂಥ ತೆರಿಗೆಯಿಂದ ವಿನಾಯ್ತಿ ಅಥವಾ ಭಾಗಶಃ ವಿನಾಯ್ತಿ ಇರುತ್ತದೆ. ಮಡಿದ ವ್ಯಕ್ತಿಯೊಂದಿಗೆ ಕೌಟುಂಬಿಕ ಸಂಬಂಧ ಹೊಂದಿರದ ವ್ಯಕ್ತಿಗಳ ಮೇಲೆ ತೆರಿಗೆ ಹಾಕಲಾಗುತ್ತದೆ. ಆಸ್ತಿ ಹಂಚಿಕೆ ಪ್ರಮಾಣದ ತೆರಿಗೆ ಪ್ರಮಾಣ ನಿರ್ಧರಿಸಲಾಗುತ್ತದೆ.
ಹಿಂದೆ ಭಾರತದಲ್ಲೂ ಇತ್ತು ಇಂಥ ತೆರಿಗೆಆರ್ಥಿಕ ಅಸಮಾನತೆ ನಿವಾರಿಸುವ ಸಲುವಾಗಿ ಭಾರತದಲ್ಲಿ 1953ರಲ್ಲಿ ಎಸ್ಟೇಟ್ ಡ್ಯೂಟಿ ಟ್ಯಾಕ್ಸ್ ಜಾರಿಗೊಳಿಸಲಾಗಿತ್ತು. 20 ಲಕ್ಷ ರು. ಮೇಲ್ಪಟ್ಟ ಆಸ್ತಿಗೆ ತೆರಿಗೆ ಪ್ರಮಾಣ ಶೇ.85ರವರೆಗೂ ಇರುತ್ತಿತ್ತು. ಮಡಿದ ವ್ಯಕ್ತಿಯಿಂದ ಆಸ್ತಿ ವರ್ಗಾವಣೆ ವೇಳೆ ಈ ತೆರಿಗೆ ಪಾವತಿಸಬೇಕಿತ್ತು. ಆದರೆ ಕಾಯ್ದೆಯಲ್ಲಿನ ಸಂಕೀರ್ಣತೆ ಹಿನ್ನೆಲೆಯಲ್ಲಿ 40 ವರ್ಷ ಹಿಂದೆ (1985ರಲ್ಲಿ) ಅಂದಿನ ಪ್ರಧಾನಿ ರಾಜೀವ್ ಗಾಂಧಿ, ಅದನ್ನು ರದ್ದು ಮಾಡಿದ್ದರು.