ಆಪರೇಷನ್‌ ಬ್ಲೂಸ್ಟಾರ್‌ ತಪ್ಪು, ಅದಕ್ಕೆ ಇಂದಿರಾ ಜೀವ ಬಲಿ

KannadaprabhaNewsNetwork |  
Published : Oct 13, 2025, 02:01 AM IST
ಪಿ. ಚಿದಂಬರಂ | Kannada Prabha

ಸಾರಾಂಶ

  ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ, ‘1984ರಲ್ಲಿ ನಡೆದ ಆಪರೇಷನ್‌ ಬ್ಲೂಸ್ಟಾರ್‌ ಎಂಬ ಒಂದು ತಪ್ಪು ನಿರ್ಣಯದಿಂದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಪ್ರಾಣವನ್ನೇ ಬಲಿಗೊಡಬೇಕಾಯಿತು’ ಎಂದಿದ್ದಾರೆ.

 ನವದೆಹಲಿ: 2008ರ ಮುಂಬೈ ಉಗ್ರ ದಾಳಿಗೆ ತಕ್ಕ ಪ್ರತೀಕಾರ ನೀಡಲು ಅಂದಿನ ತಮ್ಮ ಸರ್ಕಾರ ಒಪ್ಪಿರಲಿಲ್ಲ ಎಂಬ ಹೇಳಿಕೆ ನೀಡಿ ಇತ್ತೀಚೆಗೆ ಪಕ್ಷವನ್ನು ತೀವ್ರ ಮುಜುಗರಕ್ಕೀಡುಮಾಡಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ, ‘1984ರಲ್ಲಿ ನಡೆದ ಆಪರೇಷನ್‌ ಬ್ಲೂಸ್ಟಾರ್‌ ಎಂಬ ಒಂದು ತಪ್ಪು ನಿರ್ಣಯದಿಂದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಪ್ರಾಣವನ್ನೇ ಬಲಿಗೊಡಬೇಕಾಯಿತು’ ಎಂದಿದ್ದಾರೆ.

ಚಿದು ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಮೇಲೆ ಬಿಜೆಪಿ ಮುಗಿಬಿದ್ದಿದ್ದು, ‘ಆಪರೇಷನ್‌ ಬ್ಲ್ಯೂಸ್ಟಾರ್‌ ರಾಜಕೀಯ ದುಸ್ಸಾಹಸವೇ ಹೊರತೂ ರಾಷ್ಟ್ರೀಯ ಅಗತ್ಯವಾಗಿರಲಿಲ್ಲ. ಈ ಸತ್ಯ ಇತಿಹಾಸದಲ್ಲಿ ದಾಖಲಾಗಬೇಕು. ಸುಳ್ಳನ್ನು ಬಹಿರಂಗ ಮಾಡಿದ ಚಿದಂಬರಂ ಮೇಲೆ ಕಾಂಗ್ರೆಸ್‌

ಚಿದಂಬರಂ ಈ ಹೇಳಿಕೆ ಕಾಂಗ್ರೆಸ್‌ಗೆ ಭಾರೀ ಇರಸು ಮುರಸು ಉಂಟು ಮಾಡಿದ್ದು, ಪಕ್ಷದಿಂದ ಎಲ್ಲವನ್ನೂ ಪಡೆದುಕೊಂಡ ನಾಯಕರು ಪಕ್ಷಕ್ಕೆ ಮುಜುಗರ ಉಂಟು ಮಾಡುವ ಕೆಲಸ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಇನ್ನೊಂದೆಡೆ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಕೇಸಿನ ಒತ್ತಡದಿಂದಾಗಿ ಚಿದು ಇಂಥ ಹೇಳಿಕೆ ನೀಡುತ್ತಿರಬಹುದು ಎಂದು ಕಾಂಗ್ರೆಸ್‌ ನಾಯಕ ರಶೀದ್‌ ಅಲ್ವಿ ವ್ಯಂಗ್ಯವಾಡಿದ್ದಾರೆ.

ಇಂದಿರಾ ತಪ್ಪು:

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಶನಿವಾರ ನಡೆದ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಚಿದಂಬರಂ ‘ಉಗ್ರಗಾಮಿಗಳನ್ನು ಸೆರೆಹಿಡಿಯಲು ಬೇರೆ ಮಾರ್ಗವಿತ್ತು. ಆದರೆ ಆಪರೇಷನ್‌ ಬ್ಲೂಸ್ಟಾರ್‌ ತಪ್ಪು ನಿರ್ಧಾರವಾಗಿತ್ತು. ಆ ತಪ್ಪಿಗಾಗಿ ಇಂದಿರಾ ಗಾಂಧಿ ತಮ್ಮ ಪ್ರಾಣವನ್ನೇ ಬಲಿಗೊಟ್ಟರು. ಈ ನಿರ್ಧಾರವನ್ನು ಅವರು ಮಾತ್ರ ಕೈಗೊಂಡಿರಲಿಲ್ಲ. ಇದು ಸೇನೆ, ಗುಪ್ತಚರ ಇಲಾಖೆ, ಪೊಲೀಸರು ಒಗ್ಗೂಡಿ ಕೈಗೊಂಡ ನಿರ್ಣಯವಾಗಿತ್ತು’ ಎಂದರು.

ಅಸಮಾಧಾನ:

ಚಿದಂಬರಂ ಹೇಳಿಕೆಗೆ ಪಕ್ಷದ ಉನ್ನತ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಕ್ಷದಿಂದ ಎಲ್ಲವನ್ನೂ ಪಡೆದುಕೊಂಡವರು ಪಕ್ಷಕ್ಕೆ ತೊಂದರೆ ಆಗುವ ರೀತಿಯ ಹೇಳಿಕೆ ನೀಡಬಾರದು. ಇಂಥ ಹೇಳಿಕೆ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು. ಪದೇ ಪದೇ ಅಂಥದ್ದೇ ಕೆಲಸ ಮಾಡಬಾರದು ಎಂಬ ಅಭಿಪ್ರಾಯದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ರಷೀದ್‌ ಅಲ್ವಿ ಮಾತನಾಡಿ, ‘ಬಿಜೆಪಿಯ ನ್ಯೂನತೆಗಳನ್ನು ಟೀಕಿಸುವ ಬದಲು ಚಿದಂಬರಂ ನಮ್ಮದೇ ಪಕ್ಷದ ನ್ಯೂನತೆಗಳನ್ನು ಎತ್ತಿ ಆಡುತ್ತಿದ್ದಾರೆ. ಅವರ ವಿರುದ್ಧ ಹಲವಾರು ಕ್ರಿಮಿನಲ್‌ ಮೊಕದ್ದಮೆಗಳು ಬಾಕಿಯಿರುವುದರಿಂದ ಈ ರೀತಿ ಹೇಳಿಕೆ ನೀಡುತ್ತಿರಬಹುದು’ ಎಂದು ಟೀಕಿಸಿದ್ದಾರೆ.

ಏನಿದು ಆಪರೇಷನ್‌ ಬ್ಲೂಸ್ಟಾರ್‌?:

ಪ್ರತ್ಯೇಕತಾವಾದಿ ಜರ್ನೈಲ್‌ ಸಿಂಗ್‌ ಭಿಂದ್ರನ್ವಾಲೆ ಸೇರಿದಂತೆ ಹಲವು ಖಲಿಸ್ತಾನಿ ಉಗ್ರರು ಅಮೃತಸರದ ಸ್ವರ್ಣಮಂದಿರದಲ್ಲಿ ಠಿಕಾಣಿ ಹೂಡಿದ್ದರು. 1984ರ ಜೂ.1ರಿಂದ 10ರವರೆಗೆ ಭಾರತೀಯ ಸೇನೆ ‘ಆಪರೇಷನ್‌ ಬ್ಲೂಸ್ಟಾರ್‌’ ಹೆಸರಿನ ಕಾರ್ಯಾಚರಣೆ ನಡೆಸಿ ಉಗ್ರರ ಸೆರೆಹಿಡಿಯಿತು. ಇದು ಸಿಖ್‌ರ ಆಕ್ರೋಶಕ್ಕೆ ಕಾರಣವಾಯಿತು. ಇಂದಿರಾ ಗಾಂಧಿಯವರ ಮೇಲೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ, 5 ತಿಂಗಳ ನಂತರ ಅವರ ಇಬ್ಬರು ಸಿಖ್‌ ಅಂಗರಕ್ಷಕರೇ ಗುಂಡಿಕ್ಕಿ ಹತ್ಯೆ ಮಾಡಿದರು.

PREV
Read more Articles on

Recommended Stories

ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಫಲಪ್ರದ : ಬಿಜೆಪಿ, ಜೆಡಿಯುಗೆ ತಲಾ 101 ಸ್ಥಾನ
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬರೀ ಮೇಲ್ಜಾತಿಯವರಿಗೆ ಆದ್ಯತೆ: ರಾಗಾ