ನವದೆಹಲಿ: ಲೋಕಸಭೆ ಚುನಾವಣೆಗೆ ಕ್ಷಣಗಣನೆ ನಡೆದಿರುವಂತೆಯೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಚುನಾವಣಾ ಸಮಿತಿ ಗುರುವಾರ ರಾತ್ರಿ ಮಹತ್ವದ ಸಭೆ ನಡೆಸಿದೆ. ಮೊದಲ ಪಟ್ಟಿ ಶುಕ್ರವಾರ ಪ್ರಕಟವಾಗುವ ನಿರೀಕ್ಷೆಯಿದೆ.
ದೆಹಲಿ, ಛತ್ತೀಸ್‌ಗಢ, ಕರ್ನಾಟಕ, ತೆಲಂಗಾಣ, ಲಕ್ಷದ್ವೀಪ, ಕೇರಳ, ಮೇಘಾಲಯ, ತ್ರಿಪುರ, ಸಿಕ್ಕಿಂ ಮತ್ತು ಮಣಿಪುರದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ತೆಲಂಗಾಣದ 7 ಸೇರಿ ಹಲವು ಕ್ಷೇತ್ರಗಳ ಅಭ್ಯರ್ಥಿ ಹೆಸರು ಅಂತಿಮವಾಗಿದೆ ಎಂದು ಮೂಲಗಳು ಹೇಳಿವೆ.
ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಇತರ ಹಿರಿಯ ನಾಯಕರು ಪಾಲ್ಗೊಂಡಿದ್ದರು.
ಪ್ರಿಯಾಂಕಾ ಸ್ಪರ್ಧೆ ಅನುಮಾನ?
ಅಮೇಠಿ ಹಾಗೂ ಕೇರಳದ ವಯನಾಡ್‌ನಿಂದ ರಾಹುಲ್ ಗಾಂಧಿ ಮತ್ತು ಈ ಹಿಂದೆ ಸೋನಿಯಾ ಗಾಂಧಿ ಹೊಂದಿದ್ದ ಕ್ಷೇತ್ರವಾದ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಉಮೇದುವಾರಿಕೆ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ.
ಆದರೆ, ಪ್ರಿಯಾಂಕಾ ಸ್ಪರ್ಧೆ ಅನುಮಾನ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆ ಆಗಿರುವ ಕಾರಣ ರಾಯ್‌ಬರೇಲಿ ಕ್ಷೇತ್ರ ತೆರವಾಗಿದೆ.