ಉದ್ಯೋಗ ಖಾತ್ರಿ ವೇತನಕ್ಕೆ ಆಧಾರ್‌ ಕಡ್ಡಾಯ ಎಂದು ಕಾಂಗ್ರೆಸ್‌ ಕಿಡಿ

KannadaprabhaNewsNetwork |  
Published : Jan 02, 2024, 02:15 AM IST
ಆಧಾರ್‌ | Kannada Prabha

ಸಾರಾಂಶ

ಬಡವರ ಶೋಷಿಸಲು ಮೋದಿಯಿಂದ ತಂತ್ರಜ್ಞಾನದ ಅಸ್ತ್ರ ಬಳಕೆಯಾಗುತ್ತಿದೆ. ಈ ಮೂಲಕ ಉದ್ಯೋಗ ಖಾತರಿ ಯೋಜನೆಗೆ ನೊಂದಣಿ ಮಾಡಿಕೊಂಡ 25 ಕೋಟಿ ಬಡವರ ಪೈಕಿ 11 ಕೋಟಿ ಜನರನ್ನು ಕೆಲಸಕ್ಕೆ ಅನರ್ಹಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್ ಆರೋಪಿಸಿದ್ದಾರೆ.

ಪಿಟಿಐ ನವದೆಹಲಿ

ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಕಾರ್ಮಿಕರಿಗೆ ಆಧಾರ್‌ ಆಧಾರಿತ ಕೂಲಿ ಪಾವತಿ ವ್ಯವಸ್ಥೆ ಜಾರಿಗೆ ತಂದಿರುವುದಕ್ಕೆ ಕಾಂಗ್ರೆಸ್‌ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ‘ನರೇಂದ್ರ ಮೋದಿ ಸರ್ಕಾರ ತಂತ್ರಜ್ಞಾನವನ್ನು, ಅದರಲ್ಲೂ ಆಧಾರನ್ನು, ಬಡವರ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಒತ್ತಾಯಿಸಿದ್ದಾರೆ.‘ಕೇಂದ್ರ ಸರ್ಕಾರ ನರೇಗಾ ಕೂಲಿ ಹಣ ಪಾವತಿಗೆ ಆಧಾರ್‌ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್‌) ಕಡ್ಡಾಯಗೊಳಿಸಿದೆ. ಅದಕ್ಕೆ ನೋಂದಣಿ ಮಾಡಿಸಿಕೊಳ್ಳಲು ನೀಡಿದ್ದ ಗಡುವನ್ನು ಐದು ಬಾರಿ ವಿಸ್ತರಿಸಿದ್ದು, ಐದನೇ ಗಡುವು ಡಿ.31ಕ್ಕೆ ಮುಕ್ತಾಯಗೊಂಡಿದೆ. ದೇಶದಲ್ಲಿ ನರೇಗಾ ಅಡಿ ಕೆಲಸ ಮಾಡಲು ನೋಂದಣಿ ಮಾಡಿಸಿಕೊಂಡ 25.69 ಕೋಟಿ ಬಡವರಿದ್ದಾರೆ. ಅವರಲ್ಲಿ 14.33 ಕೋಟಿ ಜನರನ್ನು ಕ್ರಿಯಾಶೀಲ ಕೆಲಸಗಾರರು ಎಂದು ಪರಿಗಣಿಸಲಾಗಿದೆ. ಒಟ್ಟು ಕೆಲಸಗಾರರಲ್ಲಿ 8.9 ಕೋಟಿ (ಶೇ.34.8) ಜನರು ಹಾಗೂ ಕ್ರಿಯಾಶೀಲ ಕೆಲಸಗಾರರ ಪೈಕಿ 1.8 ಕೋಟಿ (ಶೇ.12.7) ಜನರು (ಎರಡೂ ಸೇರಿ ಸುಮಾರು 11 ಕೋಟಿ ಬಡವರು) ಈಗಲೂ ಎಬಿಪಿಎಸ್‌ಗೆ ಅನರ್ಹರಾಗಿದ್ದಾರೆ’ ಎಂದು ಜೈರಾಂ ಮಾಹಿತಿ ನೀಡಿದ್ದಾರೆ.‘ಇದು ತಮ್ಮ ಕುಟುಂಬದ ಹೊಟ್ಟೆ ಹೊರೆಯಲು ಕಷ್ಟಪಟ್ಟು ಕೆಲಸ ಮಾಡುವ ದೇಶದ ಅತ್ಯಂತ ಬಡ ಜನರಿಗೆ ಮೋದಿ ಸರ್ಕಾರ ನೀಡಿದ ಹೊಸ ವರ್ಷದ ಉಡುಗೊರೆಯಾಗಿದೆ. ತಂತ್ರಜ್ಞಾನವನ್ನು, ಅದರಲ್ಲೂ ಆಧಾರ್‌ ಅನ್ನು ಬಡವರ ವಿರುದ್ಧದ ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ಸರ್ಕಾರ ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.ತ್ವರಿತ ಹಣ ಪಾವತಿ, ಮಧ್ಯವರ್ತಿಗಳ ಹಾವಳಿಯಿಲ್ಲದೆ ವೇತನ ನೀಡುವುದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಹಾಗೂ ನಕಲಿ ಜಾಬ್‌ ಕಾರ್ಡ್‌ಗಳನ್ನು ಹೊರಗಿಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಪಾವತಿಗೆ ಎಬಿಪಿಎಸ್‌ ಕಡ್ಡಾಯ, ಕಾಮಗಾರಿಗಳ ಪರಿಶೀಲನೆಗೆ ಡ್ರೋನ್‌ ಬಳಕೆ, ಡಿಜಿಟಲ್ ಹಾಜರಿ ಮುಂತಾದ ತಂತ್ರಜ್ಞಾನ ಆಧರಿತ ಕ್ರಮಗಳನ್ನು ಜಾರಿಗೊಳಿಸಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !