ತಾವು ಅಧಿಕಾರಕ್ಕೆ ಬಂದಲ್ಲಿ ಸೇನೆಯ ಹಿಂದಿನ ನೇಮಕಾತಿ ಪದ್ಧತಿ ಮರುಜಾರಿ ಮಾಡಲಾಗುವುದು ಎಂದು ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ತಿಳಿಸಿದ್ದಾರೆ.
ನವದೆಹಲಿ: ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಅಧಿಕಾರಕ್ಕೆ ಬಂದ ಮರುಕ್ಷಣವೇ ಯುವಜನತೆಯ ಪಾಲಿಗೆ ಕಂಟಕವಾಗಿರುವ ಅಗ್ನಿಪಥ (ಅಗ್ನಿವೀರ) ಸೇನಾ ನೇಮಕಾತಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ನೆಮಕಾತಿ ಪದ್ಧತಿಯನ್ನು ಮರುಜಾರಿ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕರು ಸೋಮವಾರ ಘೋಷಿಸಿದ್ದಾರೆ.
ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೂರೂ ಸೇನಾಪಡೆಗಳ ದಂಡನಾಯಕರಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ‘ಯುವಜನರನ್ನು ತೊಂದರೆಗೆ ಸಿಲುಕಿಸುವ ಅಗ್ನಿಪಥ ಯೋಜನೆಯನ್ನು ಕೂಡಲೇ ರದ್ದುಗೊಳಿಸಬೇಕು.
ಇದರಿಂದ ನಾಲ್ಕು ವರ್ಷಗಳ ಹೊರಬರುವ ಅಗ್ನಿವೀರರಿಗೆ ಮತ್ತೆ ಉದ್ಯೋಗ ಹುಡುಕುವುದು ಕಷ್ಟವಾಗುತ್ತದೆ. ಅಲ್ಲದೆ ಅಗ್ನಿಪಥ ಯೋಜನೆ ಘೋಷಣೆಗೂ ಮೊದಲು ಸೇನೆಗೆ ಆಯ್ಕೆಯಾಗಿದ್ದ 2 ಲಕ್ಷ ಮಂದಿಗೆ ಪ್ರಕ್ರಿಯೆಯನ್ನೇ ರದ್ದುಗೊಳಿಸಿರುವುದಾಗಿ ತಿಳಿಸಿ ಅತಂತ್ರಕ್ಕೆ ಸಿಲುಕಿಸಲಾಗಿದೆ. ಅವರಿಗೂ ಕೂಡಲೇ ನೇಮಕಾತಿ ಆದೇಶವನ್ನು ನೀಡಲು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.
‘ಈ ಯೋಜನೆಗೆ ತಮ್ಮ ಸಹಮತವಿರಲಿಲ್ಲ ಎಂಬುದಾಗಿ ಮಾಜಿ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ಜ। ಮನೋಜ್ ನರವಣೆ ಅವರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ರದ್ದುಗೊಳಿಸಬೇಕು’ ಎಂದು ತಿಳಿಸಿದರು.
ನಿರುದ್ಯೋಗವೇ ಮೋದಿ ಗ್ಯಾರಂಟಿ - ಪ್ರಿಯಾಂಕಾ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ, ‘ಸೇನೆ ಸೇರಿ ದೇಶಸೇವೆ ಮಾಡುವ ಉದ್ದೇಶದಿಂದ ತಮ್ಮೆಲ್ಲ ಶಕ್ತಿಯನ್ನು ಪಣಕ್ಕಿಟ್ಟು ಸೇನಾ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾದರೂ ಅವರಿಗೆ ಉದ್ಯೋಗ ನೀಡದೇ ಲಕ್ಷಾಂತರ ಹುದ್ದೆಯನ್ನು ಖಾಲಿ ಬಿಡುವುದೇ ಮೋದಿ ಗ್ಯಾರಂಟಿಯಾಗಿದೆ’ ಎಂದು ಕಿಡಿಕಾರಿದ್ದಾರೆ.
ಇದರ ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಅತಂತ್ರ ಸೇನಾ ನಿರುದ್ಯೋಗಿಗಳ ಪರ ಬೆಂಬಲ ವ್ಯಕ್ತಪಡಿಸಿ ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಅವರು, ಬಿಜೆಪಿ ವಕ್ತಾರ ಕೈಲಾಶ್ ವಿಜಯವರ್ಗೀಯ ಅವರು ‘ಅಗ್ನಿವೀರರಿಗೆ ನಾಲ್ಕು ವರ್ಷಗಳ ನಂತರ ಎಲ್ಲೂ ಉದ್ಯೋಗ ಸಿಗದಿದ್ದರೆ ಬಿಜೆಪಿ ಕಚೇರಿ ಕಾಯಲು ಅವಕಾಶ ನೀಡಲಾಗುತ್ತದೆ’ ಎಂದು ಹೇಳಿರುವುದನ್ನು ಉಲ್ಲೇಖಿಸಿ, ‘ಯುವಜನರು ಸೇನೆಗೆ ದೇಶಸೇವೆ ಮಾಡಲು ಸೇರುತ್ತಾರೆಯೇ ಹೊರತು ಬಿಜೆಪಿ ಸೇವೆ ಮಾಡಲು ಅಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಏನಿದು ಅಗ್ನಿಪಥ ಯೋಜನೆ?
ಅಗ್ನಿಪಥ ಯೋಜನೆಯಲ್ಲಿ 4 ವರ್ಷಗಳ ಅವಧಿಗೆ ಯುವಕರನ್ನು ಸೇನೆಗೆ ನೇಮಿಸಿಕೊಳ್ಳಲಾಗುತ್ತದೆ. ಅವರಿಗೆ ಅಗ್ನಿವೀರರು ಎನ್ನುತ್ತಾರೆ. ಮುಂದೆ ಅವರಲ್ಲಿ ಶೇ.25ರಷ್ಟು ಮಂದಿಯನ್ನು ಮಾತ್ರ ಅವರ ಸೇವಾ ಸಾಧನೆ ಆಧರಿಸಿ 15 ವರ್ಷಗಳ ಕಾಲ ಮುಂದುವರಿಸಲು ಅವಕಾಶವಿದೆ.
ಉಳಿದವರಿಗೆ ಇತರ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಕಾಯಂ ಸೈನಿಕರಂತೆ ಇವರಿಗೆ ನಿವೃತ್ತಿ ನಂತರದ ಸವಲತ್ತುಗಳು ಸಿಗುವುದಿಲ್ಲ.