ರಾಜೀನಾಮೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಕಾರ : ಕಾಂಗ್ರೆಸ್‌ ವಿರುದ್ಧ ಆಕ್ರೋಶ

KannadaprabhaNewsNetwork |  
Published : Dec 19, 2024, 12:31 AM ISTUpdated : Dec 19, 2024, 04:21 AM IST
ಶಾ | Kannada Prabha

ಸಾರಾಂಶ

‘ಕಾಂಗ್ರೆಸ್‌ ನಾಯಕರು ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ರಾಜ್ಯಸಭೆಯಲ್ಲಿ ಹೇಳಿಕೆಗಳನ್ನು ತಿರುಚಿದ್ದಾರೆ ಮತ್ತು ವಿರೂಪಗೊಳಿಸಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಆರೋಪಿಸಿದ್ದಾರೆ ಹಾಗೂ ಕಾಂಗ್ರೆಸ್‌ ಇಟ್ಟ ರಾಜೀನಾಮೆ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.

  ನವದೆಹಲಿ : ‘ಕಾಂಗ್ರೆಸ್‌ ನಾಯಕರು ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ರಾಜ್ಯಸಭೆಯಲ್ಲಿ ಹೇಳಿಕೆಗಳನ್ನು ತಿರುಚಿದ್ದಾರೆ ಮತ್ತು ವಿರೂಪಗೊಳಿಸಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಆರೋಪಿಸಿದ್ದಾರೆ ಹಾಗೂ ಕಾಂಗ್ರೆಸ್‌ ಇಟ್ಟ ರಾಜೀನಾಮೆ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.

ಅಂಬೇಡ್ಕರ್‌ ಅವರ ಬಗ್ಗೆ ತಾವು ಮಂಗಳವಾರ ರಾಜ್ಯಸಭೆಯಲ್ಲಿ ಆಡಿದ ಮಾತಿಗೆ ಕಿಡಿಕಾರಿ ತಮ್ಮ ರಾಜೀನಾಮೆಗೆ ಆಗ್ರಹಿಸಿದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಶಾ, ‘ಗೊಂದಲವನ್ನು ಹರಡಲು ಮತ್ತು ಜನರನ್ನು ದಾರಿತಪ್ಪಿಸಲು ಕಾಂಗ್ರೆಸ್ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕಾಮೆಂಟ್‌ಗಳನ್ನು ತಪ್ಪಾಗಿ ನಿರೂಪಿಸಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಸತ್ಯಗಳನ್ನು ತಿರುಚುತ್ತಿರುವುದನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್ ಏಕೆ ಹೀಗೆ ಮಾಡುತ್ತಿದೆ? ಎನ್‌ಡಿಎ ಸರ್ಕಾರಗಳು ಸಂವಿಧಾನವನ್ನು ಹೇಗೆ ಎತ್ತಿ ಹಿಡಿದಿವೆ ಎಂಬುದನ್ನು ಬಿಜೆಪಿ ಸಂಸದರು ಸದನದಲ್ಲಿ ಹೇಳಿದರು ಹಾಗೂ ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಮತ್ತು ಮೀಸಲಾತಿ ವಿರೋಧಿ ಎಂದು ಸಾಬೀತು ಮಾಡುವಲ್ಲಿ ಬಿಜೆಪಿ ನಾಯಕರು ಯಶ ಕಂಡರು. ಹೀಗಾಗಿ ಕಾಂಗ್ರೆಸ್‌ ನಮ್ಮ ಮೇಲೆ ಹೀಗೆ ಹರಿಯಾಯುತ್ತಿದೆ’ ಎಂದು ಶಾ ಕಿಡಿಕಾರಿದರು.

’ಕಾಂಗ್ರೆಸ್ ಕೂಡ ವಿಡಿ ಸಾವರ್ಕರ್ ಅವರನ್ನು ಅವಮಾನಿಸಿದೆ ಮತ್ತು ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಗಾಳಿಗೆ ತೂರಿದೆ. ಈ ಎಲ್ಲಾ ಸತ್ಯಗಳು ಹೊರಬಂದಾಗ ಕಾಂಗ್ರೆಸ್ ತನ್ನ ಹಳೆಯ ತಂತ್ರಗಳನ್ನು ಬಳಸಿತು ಮತ್ತು ತಿರುಚಿದ ಸಂಗತಿಗಳನ್ನು ಪ್ರಸ್ತುತಪಡಿಸುವ ಮೂಲಕ ಸಮಾಜವನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡಿತು’ ಎಂದು ಶಾ ಹೇಳಿದರು.‘ನಾನು ಅಂಬೇಡ್ಕರ್ ಅವರನ್ನು ಎಂದಿಗೂ ಅವಮಾನಿಸದ ಪಕ್ಷದಿಂದ ಬಂದವನು’ ಎಂದು ಶಾ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ರಾಜೀನಾಮೆಗೆ ಬೇಡಿಕೆ ಇಟ್ಟ ಬಗ್ಗೆ ಪ್ರಸ್ತಾಪಿಸಿದ ಅವರು, ‘ಕಾಂಗ್ರೆಸ್ ಅಧ್ಯಕ್ಷರಿಗೆ ಸಂತೋಷವಾಗುತ್ತದೆ ಎಂದರೆ ನಾನು ರಾಜೀನಾಮೆ ನೀಡಬಹುದು. ಆದರೆ ನನ್ನ ರಾಜೀನಾಮೆಯಿಂದ ಅವರ ಸಮಸ್ಯೆ ಬಗೆಹರಿಯಲ್ಲ ಹಾಗೂ ಪ್ರಯೋಜನ ಆಗಲ್ಲ. ಏಕೆಂದರೆ ಅವರು ಇನ್ನೂ 15 ವರ್ಷಗಳ ಕಾಲ ಅವರು ವಿಪಕ್ಷ ನಾಯಕ ಸ್ಥಾನದಲ್ಲೇ ಕುಳಿತಿರಬೇಕಾಗುತ್ತದೆ’ ಎಂದು ಲಘು ಶೈಲಿಯಲ್ಲಿ ಹೇಳಿದರು ಹಾಗೂ ರಾಜೀನಾಮೆಗೆ ಪರೋಕ್ಷವಾಗಿ ನಿರಾಕರಿಸಿರು.

‘ಖರ್ಗೆ ಅವರು, ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ತಿರುಚುವ ಮೂಲಕ ತಮ್ಮ ವಿರುದ್ಧದ ಈ ‘ದುರುದ್ದೇಶಪೂರಿತ ಅಭಿಯಾನದ ಭಾಗವಾಗಲು ರಾಹುಲ್ ಗಾಂಧಿಯವರ ಒತ್ತಡದ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಶಾ ಆರೋಪಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ