ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂಬಂಧ ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮಗೊಳಿಸುವಲ್ಲಿ ಯಶಸ್ವಿಯಾಗಿವೆ. ಅದರನ್ವಯ ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳು ತಲಾ 85 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
288 ಸ್ಥಾನಬಲದ ರಾಜ್ಯ ವಿಧಾನಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ 3 ಪಕ್ಷಗಳು ಒಟ್ಟು 255 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಉಳಿದ 33 ಸ್ಥಾನಗಳನ್ನು ಸಮಾಜವಾದಿ ಪಕ್ಷ, ಆಪ್ ಮತ್ತು ಇನ್ನಿತರ ಸಣ್ಣಪುಟ್ಟ ಪಕ್ಷಗಳಿಗೆ ನೀಡಲು ನಿರ್ಧರಿಸಲಾಗಿದೆ.
ಈ ಮೊದಲು ಕಾಂಗ್ರೆಸ್ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿತ್ತಾದರೂ, ಸೀಟು ಹಂಚಿಕೆ ಮಾತುಕತೆ ವೇಳೆ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಒತ್ತಾಯಕ್ಕೆ ಕಟ್ಟುಬಿದ್ದ ತನ್ನ ಸ್ಪರ್ಧಾ ಬಲ ಕಡಿತಕ್ಕೆ ನಿರ್ಧರಿಸಿದೆ.
2019ರ ವಿಧಾನಸಭಾ ಚುನಾವಣೆ ಬಳಿಕ ರಚನೆಯಾಗಿದ್ದ ಮಹಾವಿಕಾಸ ಅಘಾಡಿ ಮೈತ್ರಿಕೂಟ, ಈ ಬಾರಿ ಬಿಜೆಪಿ, ಶಿವಸೇನೆ (ಏಕನಾಥ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಕೂಟದ ಮಹಾಯುತಿ ಮೈತ್ರಿಕೂಟವನ್ನು ಸೋಲಿಸಿ ಅಧಿಕಾರಕ್ಕೆ ಏರುವ ಹುಮ್ಮಸ್ಸಿನಲ್ಲಿದೆ.
ಜಾರ್ಖಂಡ್ ಜೆಎಂಎಂನ 35 ಅಭ್ಯರ್ಥಿ ಪಟ್ಟಿಯಲ್ಲಿ ಸೊರೇನ್, ಪತ್ನಿಗೆ ಟಿಕೆಟ್
ರಾಂಚಿ: ಜಾರ್ಖಂಡ್‌ನಲ್ಲಿ ನ.13 ಮತ್ತು 20 ರಂದು ನಡೆಯಲಿರುವ 2 ಹಂತದ ವಿಧಾನಸಭಾ ಚುನಾವಣೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ತನ್ನ 35 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಬರ್ಹೈತ್‌ನಿಂದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹಾಗೂ ಗಂಡೇ ಕ್ಷೇತ್ರದಿಂದ ಪತ್ನಿ ಕಲ್ಪನಾ ಸೊರೆನ್ ಕಣಕ್ಕಿಳಿದಿದ್ದಾರೆ. ಪಟ್ಟಿಯಲ್ಲಿ ಹೇಮಂತ್ ಸೊರೆನ್ ಸೋದರ ಬಸಂತ್ ಸೊರೆನ್ ಸೇರಿದಂತೆ 32 ಮಂದಿಯ ಹೆಸರು ಪ್ರಕಟಿಸಲಾಗಿದೆ. 81 ವಿಧಾನಸಭೆ ಸ್ಥಾನಗಳ ಪೈಕಿ ಇಂಡಿಯಾ ಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಎಂಎಂ 70 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ 11 ಸ್ಥಾನಗಳಲ್ಲಿ ಆರ್‌ಜೆಡಿ ಮತ್ತು ಎಡ ಪಕ್ಷಗಳು ಕಣಕ್ಕಿಳಿಯಲಿವೆ. ನ.23ರಂದು ಫಲಿತಾಂಶ ಹೊರ ಬೀಳಲಿದೆ.