ರಾಗಾ ವಿರುದ್ಧ ಟೀಕೆ: ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿ ಪ್ರಧಾನಿ ಮೋದಿಗೆ ಖರ್ಗೆ ಪತ್ರ

KannadaprabhaNewsNetwork | Updated : Sep 18 2024, 07:52 AM IST

ಸಾರಾಂಶ

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಮ್ಮ ಪಕ್ಷದ ಕೆಲ ನಾಯಕರು ಆಕ್ಷೇಪಾರ್ಹ ಪದ ಬಳಸಿ ಟೀಕೆ ಮಾಡುತ್ತಿದ್ದಾರೆ. ಅಂಥವರಿಗೆ ಶಿಸ್ತಿನಿಂದ ಇರಲು ಸೂಚಿಸಿ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಮ್ಮ ಪಕ್ಷದ ಕೆಲ ನಾಯಕರು ಆಕ್ಷೇಪಾರ್ಹ ಪದ ಬಳಸಿ ಟೀಕೆ ಮಾಡುತ್ತಿದ್ದಾರೆ. ಅಂಥವರಿಗೆ ಶಿಸ್ತಿನಿಂದ ಇರಲು ಸೂಚಿಸಿ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ಮೋದಿಗೆ ಬರೆದಿರುವ ಪತ್ರದಲ್ಲಿ ಖರ್ಗೆ, ಅಂತಹ ಹೇಳಿಕೆಗಳನ್ನು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದೇಶದ ರಾಜಕೀಯ ಅಧೋಗತಿಗೆ ಹೋಗದಂತೆ ಮತ್ತು ಆ ರೀತಿಯ ಅವಘಡಗಳು ನಡೆಯದಂತೆ ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.

‘ಬಿಜೆಪಿ ನಾಯಕರು ಮತ್ತು ನಿಮ್ಮ ಮೈತ್ರಿ ಕೂಟದ ನಾಯಕರು ಬಳಸುವ ಹಿಂಸೆ ಪ್ರಚೋದಿತ ಭಾಷೆಗಳು ಭವಿಷ್ಯಕ್ಕೆ ಹಾನಿಕಾರಕ. ರೈಲ್ವೆ ರಾಜ್ಯ ಸಚಿವರು ಮತ್ತು ಯುಪಿ ಸಚಿವರೊಬ್ಬರು ಲೋಕಸಭೆ ವಿಪಕ್ಷ ನಾಯಕನನ್ನು ನಂ. 1 ಭಯೋತ್ಪಾದಕ ಎಂದು ಕರೆದಿದ್ದಾರೆ. ಮಹಾರಾಷ್ಟ್ರದ ಶಾಸಕ ರಾಹುಲ್ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರು. ಬಹುಮಾನ ನೀಡುವುದಾಗಿ ಹೇಳುತ್ತಾರೆ.

ಈ ರೀತಿ ಹೇಳಿಕೆಗಳು ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದ ಒರಟುತನ ಸೂಚಿಸುತ್ತದೆ. ನಿಮ್ಮ ನಾಯಕರನ್ನು ಶಿಸ್ತಿನಿಂದ ಮತ್ತು ಸಜ್ಜನಿಕೆಯಿಂದಿರಲು ಹೇಳಿ. ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಸೂಚಿಸಿ. ಈ ರೀತಿ ಹೇಳಿಕೆ ನೀಡಿದವರ ಮೇಲೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುತ್ತೀರಿ ಎನ್ನುವ ಭರವಸೆ ಹೊಂದಿದ್ದೇನೆ’ ಎಂದು ಖರ್ಗೆ ಉಲ್ಲೇಖಿಸಿದ್ದಾರೆ.

ಆತಿಶಿ ಟೀಕಿಸಿದ ಸ್ವಾತಿಗೆ ರಾಜ್ಯಸಭಾ ಸ್ಥಾನ ತೊರೆವಂತೆ ಆಪ್‌ ಸೂಚನೆ

ನವದೆಹಲಿ: ತಮ್ಮದೇ ಪಕ್ಷದ ನಿಯೋಜಿತ ಮುಖ್ಯಮಂತ್ರಿ ಆತಿಷಿ ವಿರುದ್ಧ ಟೀಕೆ ಮಾಡಿರುವ, ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ಗೆ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಮ್‌ಆದ್ಮಿ ಪಕ್ಷ ಆಗ್ರಹಿಸಿದೆ. 

ದೆಹಲಿ ಸಿಎಂ ಸ್ಥಾನಕ್ಕೆ ಆತಿಶಿ ಹೆಸರು ಘೋಷಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಸ್ವಾತಿ, ‘ಇಂದು ದೆಹಲಿ ಪಾಲಿಗೆ ದುಃಖದ ದಿನ. ಉಗ್ರ ಅಫ್ಜಲ್‌ ಗುರುವನ್ನು ಗಲ್ಲಿನಿಂದ ರಕ್ಷಿಸಲು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಬರೆದಿದ್ದವರ ಮಗಳನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತಿದೆ. 

ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯ. ದೆಹಲಿಯನ್ನು ದೇವರೇ ರಕ್ಷಿಸಲಿ’ ಎಂದಿದ್ದರು. ಇದಕ್ಕೆ ಆಪ್‌ ಹಿರಿಯ ನಾಯಕ ದಿಲೀಪ್‌ ಪಾಂಡೆ ಆಕ್ಷೇಪಿಸಿದ್ದು, ‘ಆಪ್‌ನಿಂದ ರಾಜ್ಯಸಭೆ ಸದಸ್ಯೆಯಾದರೂ ಬಿಜೆಪಿ ಪರವಾಗಿ ಮಾತಾಡುವ ಸ್ವಾತಿ ಕೂಡಲೇ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಬಲದಲ್ಲಿ ರಾಜ್ಯಸಭೆಗೆ ಮರಳಲಿ’ ಎಂದರು.

ಪಟಾಕಿ ಉಗ್ರಾಣ ಸ್ಫೋಟ: 2 ಮಕ್ಕಳು ಸೇರಿ ಐವರ ಸಾವು, 11 ಜನರಿಗೆ ಗಾಯ

ಫಿರೋಜಾಬಾದ್‌: ಪಟಾಕಿ ಕಾರ್ಖಾನೆಯಲ್ಲಿನ ಉಗ್ರಾಣದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಸೇರಿ ಐವರು ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ ಇಲ್ಲಿನ ಶಿಖೋಹಾಬಾದ್‌ ಪ್ರದೇಶದಲ್ಲಿ ಬೆಳಗ್ಗೆ 10:30ರ ವೇಳೆಗೆ ಘಟನೆ ನಡೆದಿದ್ದು, 2 ಮತ್ತು 4 ವರ್ಷದ ಮಕ್ಕಳು ಸೇರಿ ಐವರು ಮೃತಪಟ್ಟಿದ್ದಾರೆ. ಜೊತೆಗೆ 11 ಜನರು ತೀವ್ರವಾಗ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಆಸುಪಾಸಿನ 10ಕ್ಕಿಂತ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

ಇಂದು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಸಭೆ: 4 ವರ್ಷಗಳ ಬಳಿಕ ಬಡ್ಡಿ ದರ ಇಳಿಕೆ ನಿರೀಕ್ಷೆ

ವಾಷಿಂಗ್ಟನ್‌: ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ 2 ದಿನಗಳ ಸಭೆ ಮಂಗಳವಾರ ಆರಂಭವಾಗಿದ್ದು, ಬುಧವಾರ ಅದು ತನ್ನ ಸಾಲ ನೀತಿ ಪ್ರಕಟಿಸಲಿದೆ. ಆರ್ಥಿಕ ಹಿಂಜರಿತ ಭೀತಿ, ಹಣದುಬ್ಬರ ಏರಿಕೆ ಮೊದಲಾದ ಕಾರಣಗಳಿಂದ 4 ವರ್ಷಗಳಿಂದ ಬಡ್ಡಿದರ ಇಳಿಕೆ ಮಾಡದ ಬ್ಯಾಂಕ್‌ ಬುಧವಾರ ಶೇ.0.25ರಷ್ಟು ಬಡ್ಡಿದರ ಇಳಿಕೆ ಮಾಡುವ ನಿರೀಕ್ಷೆ ಇದೆ. ಬಡ್ಡಿ ದರ ಇಳಿಕೆ, ದೇಶ ಮತ್ತು ಜಾಗತಿಕ ಅರ್ಥ ವ್ಯವಸ್ಥೆ ಸುಸ್ಥಿತಿಯಲ್ಲಿದೆ ಎಂಬ ಸಂದೇಶ ರವಾನಿಸುವ ಕಾರಣ, ಇಡೀ ಜಾಗತಿಕ ಮಾರುಕಟ್ಟೆ ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ ನಿರ್ಧಾರದ ಮೇಲೆ ಕಣ್ಣಿಟ್ಟಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಇಳಿಸಿದರೆ ಅದು ಇತರೆ ದೇಶಗಳಲ್ಲೂ ಬಡ್ಡಿದರ ಇಳಿಕೆಯ ಆರಂಭಕ್ಕೆ ಮುನ್ನುಡಿ ಬರೆಯಬಹುದು ಎಂಬ ನಿರೀಕ್ಷೆ ಇದೆ.

ಈದ್‌ ಮಿಲಾದ್‌ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಮೂವರ ಸೆರೆ

ಕೋಟಾ: ರಾಜಸ್ಥಾನದ ಕೋಟಾದಲ್ಲಿ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಅನಂತಪುರ ಪ್ರದೇಶದಲ್ಲಿ ‘ಈದ್‌ ಮಿಲಾದ್‌ ಮೆರವಣಿಗೆ ನಡೆಯುತ್ತಿರುವ ವೇಳೆ ಅಶೋಕ ಚಕ್ರದ ಎರಡೂ ಬದಿಯಲ್ಲಿ ಅರ್ಧಚಂದ್ರ ಮತ್ತು ನಕ್ಷತ್ರವನ್ನು ಮುದ್ರಿಸಿದ ರಾಷ್ಟ್ರಧ್ವಜವನ್ನು ಹೊತ್ತಿದ್ದ ವ್ಯಕ್ತಿಯೊಬ್ಬನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಹಾಗೂ ಹಿಂದೂ ಕಾರ್ಯಕರ್ತರು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ವಿಡಿಯೋದಲ್ಲಿ ಕಾಣಿಕೊಂಡ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ರೀತಿಯ ಘಟನೆ ಸೋಮವಾರ ಬಿಹಾರದ ಸಾರಣ್‌ನಲ್ಲಿ ನಡೆದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

Share this article