ಇಂದು ಇಸ್ರೋ ವರ್ಷದ ಮೊದಲ ಉಡಾವಣೆ:15 ಉಪಗ್ರಹ ನಭಕ್ಕೆ

KannadaprabhaNewsNetwork |  
Published : Jan 12, 2026, 02:00 AM IST
ಇಸ್ರೋ | Kannada Prabha

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಈ ವರ್ಷದ ಮೊದಲ ಉಪಗ್ರಹವನ್ನು ಉಡಾಯಿಸಲು ಸಜ್ಜಾಗಿದೆ. ಭಾನುವಾರ ಇಸ್ರೋದ ಪಿಎಲ್‌ಎಲ್‌ವಿ -ಸಿ62 ರಾಕೆಟ್‌, ಡಿಆರ್‌ಇಒದ ವ್ಯೂಹಾತ್ಮಕ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿರುವ ಇಒಎಸ್‌- ಎನ್‌1 ಉಪಗ್ರಹ ಹಾಗೂ 14 ವಿವಿಧ ದೇಶಗಳ ಉಪಗ್ರಹ ಹೊತ್ತು ನಭಕ್ಕೆ ಸಾಗಲಿದೆ.

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಈ ವರ್ಷದ ಮೊದಲ ಉಪಗ್ರಹವನ್ನು ಉಡಾಯಿಸಲು ಸಜ್ಜಾಗಿದೆ. ಭಾನುವಾರ ಇಸ್ರೋದ ಪಿಎಲ್‌ಎಲ್‌ವಿ -ಸಿ62 ರಾಕೆಟ್‌, ಡಿಆರ್‌ಇಒದ ವ್ಯೂಹಾತ್ಮಕ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿರುವ ಇಒಎಸ್‌- ಎನ್‌1 ಉಪಗ್ರಹ ಹಾಗೂ 14 ವಿವಿಧ ದೇಶಗಳ ಉಪಗ್ರಹ ಹೊತ್ತು ನಭಕ್ಕೆ ಸಾಗಲಿದೆ.

ಈ ಹಿಂದೆ ನಿಗದಿಯಾಗಿದ್ದ ಜ.12ರ 10:17ರ ಬದಲಿಗೆ 10:18ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿಯಲಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್‌) ಈ ಯೋಜನೆ ಕೈಗೊಂಡಿದೆ. ಲಾಂಚ್‌ ಆದ 17 ನಿಮಿಷಕ್ಕೆ ಉಪಗ್ರಹಗಳು ಕಕ್ಷೆ ಸೇರಲಿವೆ ಎಂದು ಇಸ್ರೋ ತಿಳಿಸಿದೆ.

==

ಎಲ್‌ಒಸಿ ಬಳಿ ಪಾಕ್‌ ಡ್ರೋನ್‌ಗಳು ಪತ್ತೆ: ಭದ್ರತೆ ಬಿಗಿ, ಶೋಧಜಮ್ಮು: ಭಾನುವಾರ ಸಂಜೆ ಅಂತಾರಾಷ್ಟ್ರೀಯ ಸರಹದ್ದನ್ನು ದಾಟಿ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಬಳಿ ಕೆಲ ಡ್ರೋನ್‌ಗಳು ಹಾರಾಟ ನಡೆಸಿದ್ದು ಪತ್ತೆಯಾಗಿದೆ. ಸಾಂಬಾ, ರಜೌರಿ, ಪೂಂಚ್‌ ಜಿಲ್ಲೆಗಳಲ್ಲಿ 5 ಡ್ರೋನ್‌ಗಳು ಕಂಡುಬಂದಿದ್ದು, ಬಳಿಕ ಪಾಕಿಸ್ತಾನದತ್ತ ಮರಳಿವೆ.ಈ ಬೆಳವಣಿಗೆ ಬೆನ್ನಲ್ಲೇ ಗಡಿಯಲ್ಲಿ ಕಟ್ಟೆಚ್ಚರ ಸಾರಲಾಗಿದೆ. ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಡ್ರೋನ್‌ಗಳು ಪತ್ತೆಯಾಗುತ್ತಿದ್ದಂತೆ ಅವುಗಳತ್ತ ಮೀಡಿಯಂ ಮತ್ತು ಲೈಟ್‌ ಮಷಿನ್‌ ಗನ್‌ಗಳನ್ನು ಬಳಸಿ ಗುಂಡನ್ನೂ ಹಾರಿಸಲಾಯಿತು. ಡ್ರೋನ್‌ಗಳು ಭಾರತದ ಗಡಿಯೊಳಗೆ ಶಸ್ತ್ರಾಸ್ತ್ರ, ಮಾದಕ ವಸ್ತುಗಳಂತಹ ನಿಷಿದ್ಧ ಪದಾರ್ಥಗಳನ್ನು ಹಾಕಿ ಹೋಗಿರುವ ಸಂಭವವಿರುವುದರಿಂದ ಶೋಧ ನಡೆಸಲಾಗುತ್ತಿದೆ.

==

ಗ್ರೋಕ್‌ ಅಶ್ಲೀಲತೆ ಅವಾಂತರ: ಎಕ್ಸ್‌ ತಪ್ಪೊಪ್ಪಿಗೆ, 600 ಖಾತೆ ಡಿಲೀಟ್‌

ಪಿಟಿಐ ನವದೆಹಲಿ

‘ಎಲಾನ್‌ ಮಸ್ಕ್‌ ಒಡೆತನ ಟ್ವೀಟರ್‌ನ (ಎಕ್ಸ್) ಎಐ ಆವೃತ್ತಿಯಾದ ‘ಗ್ರೋಕ್‌’ನಲ್ಲಿ ಎಐ ಬಳಸಿಕೊಂಡು ಅಶ್ಲೀಲತೆ ಪ್ರಸಾರ ಮಾಡಲಾಗುತ್ತಿದೆ’ ಎಂದು ಭಾರತ ಎಚ್ಚರಿಕೆ ನೀಡಿದ ಬೆನ್ನಲ್ಲೇ ಎಕ್ಸ್‌ ತನ್ನ ತಪ್ಪೊಪ್ಪಿಕೊಂಡಿದೆ ಹಾಗೂ 3500 ಪೋಸ್ಟ್‌ಗಳನ್ನು ಬ್ಲಾಕ್ ಮಾಡಿ, 600 ಖಾತೆಗಳನ್ನು ಅಳಿಸಿ ಹಾಕಿದೆ.‘ಎಕ್ಸ್ ತನ್ನ ವೇದಿಕೆಯಲ್ಲಿ ಅಶ್ಲೀಲತೆ ಪ್ರಸಾರದ ಬಗ್ಗೆ ತಪ್ಪೊಪ್ಪಿಕೊಂಡಿದೆ. ಮಾತ್ರವಲ್ಲದೇ ಭವಿಷ್ಯದಲ್ಲಿ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲತೆ ಪ್ರಸಾರ ಮಾಡುವುದಿಲ್ಲ. ಭಾರತದ ಕಾನೂನುಗಳನ್ನು ಪಾಲಿಸುವುದಾಗಿ ಹೇಳಿಕೊಂಡಿದೆ ಎಂದು ಹೇಳಿದೆ’ ಎಂದು ಮೂಲಗಳು ಹೇಳಿವೆ.ಕಳೆದ ವಾರವಷ್ಟೇ ಗ್ರೋಕ್‌ ಬಳಸಿಕೊಂಡು ಹಲವಾರು ವಿಕೃತರು ತಮಗೆ ಬೇಕಾದ ಹುಡುಗಿಯರ ಚಿತ್ರಗಳಿಗೆ ಬಿಕಿನಿ ಹಾಕಿರುವ ಘಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಗ್ರೋಕ್‌ ಮತ್ತು ಎಕ್ಸ್‌ನಲ್ಲಿ ಎಐ ಬಳಸಿಕೊಂಡು ಅಶ್ಲೀಲತೆಯನ್ನು ಪ್ರಸಾರ ಮಾಡಲಾಗುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿತ್ತು.

==

ಅತ್ಯಾಚಾರ ಆರೋಪಿ ಕೇರಳ ಶಾಸಕ ಬಂಧನ

ಕಾಂಗ್ರೆಸ್‌ ಉಚ್ಚಾಟಿತ ಶಾಸಕ ರಾಹುಲ್‌ ಸೆರೆ

3ನೇ ಅತ್ಯಾಚಾರ ಆರೋಪದ ಬೆನ್ನಲ್ಲೇ ಕ್ರಮ

ಶನಿವಾರ ಮಧ್ಯರಾತ್ರಿ ಹೋಟೆಲ್‌ನಿಂದ ಸೆರೆ

ಪತನಂತಿಟ್ಟ (ಕೇರಳ): ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಉಚ್ಚಾಟಿತ ಶಾಸಕ ರಾಹುಲ್‌ ಮಮ್‌ಕೂಟತಿಲ್ ಅವರನ್ನು ಶನಿವಾರ ಮಧ್ಯರಾತ್ರಿ ಕೇರಳ ಪೊಲೀಸರು ಬಂಧಿಸಿದ್ದಾರೆ.ಪೊಲೀಸರ ತಂಡ ಶನಿವಾರ ಮಧ್ಯರಾತ್ರಿ 1 ಗಂಟೆಗೆ ಪಾಲಕ್ಕಾಡ್‌ನ ಹೋಟೆಲ್‌ನಲ್ಲಿದ್ದ ರಾಹುಲ್‌ರನ್ನು ವಶಕ್ಕೆ ಪಡೆಯಿತು. ಮುಂಜಾನೆ 5:30ಕ್ಕೆ ಪತನಂತಿಟ್ಟದ ಪೊಲೀಸ್‌ ಕ್ಯಾಂಪ್‌ಗೆ ಕರೆದೊಯ್ಯಲಾಯಿತು.

ರಾಹುಲ್‌ ಮೇಲೆ ಇತ್ತೀಚೆಗಷ್ಟೆ 3ನೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಕೆನಡಾವಾಸಿಯಾಗಿರುವ, ಪತನಂತಿಟ್ಟದ ಮಹಿಳೆಯೊಬ್ಬರು ರಾಹುಲ್‌ ತನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ, ಗರ್ಭವತಿಯಾದ ಬಳಿಕ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದರು. ಜೊತೆಗೆ ಆಗಾಗ ತನ್ನಿಂದ ಹಣವನ್ನೂ ತೆಗೆದುಕೊಂಡಿದ್ದರು ಎಂದು ದೂರು ನೀಡಿದ್ದರು. ಅದರ ಬೆನ್ನಲ್ಲೇ ಪೊಲೀಸರು ರಾಹುಲ್‌ರನ್ನು ಬಂಧಿಸಿದ್ದಾರೆ.

ಈಗಾಗಲೇ ಅವರ ಮೇಲಿರುವ 2 ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದೆ.

==

ನಾಯಿಯ ಹೆಸರನ್ನು ರಾಮ ಎಂದ ಶಿಕ್ಷಕಿ ಸಸ್ಪೆಂಡ್

ರಾಮು ಎಂದಾಗಬೇಕಿತ್ತು, ಮುದ್ರಣ ದೋಷ: ಶಿಕ್ಷಕಿ

ಪಿಟಿಐ ರಾಯ್‌ಪುರ

ಪ್ರಶ್ನೆ ಪತ್ರಿಕೆಯೊಂದರಲ್ಲಿ ನಾಯಿಯ ಹೆಸರಿಗೆ ಸಂಬಂಧಿಸಿದ ಬಹುಆಯ್ಕೆ ಪ್ರಶ್ನೆಯಲ್ಲಿ ರಾಮ ಎಂದು ಉಲ್ಲೇಖಿಸುವ ಮೂಲಕ ಆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಛತ್ತೀಸ್‌ಗಢದ ಶಿಕ್ಷಕಿಯೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಈ ಸಂಬಂಧ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.ರಾಯ್‌ಪುರದ ಸರ್ಕಾರಿ ಶಾಲೆಗಳಲ್ಲಿ ನಡೆದ ಮಧ್ಯವಾರ್ಷಿಕ ಪರೀಕ್ಷೆ 4ನೇ ತರಗತಿಯ ಇಂಗ್ಲೀಷ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ‘ಮೋನಾಳ ನಾಯಿಯ ಹೆಸರೇನು?’ ಎಂದು ಕೇಳಲಾಗಿತ್ತು. ಇದಕ್ಕೆ ರಾಮ ಸೇರಿ 4 ಆಯ್ಕೆ ನೀಡಲಾಗಿತ್ತು. ಸದ್ಯ ಇದೇ ವಿಚಾರ ವಿವಾದಕ್ಕೆ ಕಾರಣವಾಗಿದೆ. ಭಗವಾನ್‌ ರಾಮ ಹಿಂದೂಗಳ ಪವಿತ್ರ ದೇವನಾಗಿರುವುದರಿಂದ ಆ ಹೆಸರನ್ನು ಉಲ್ಲೇಖಿಸಿದ್ದಕ್ಕೆ ಹಿಂದೂ ಸಂಘಟನೆಗಳು ಕಿಡಿಕಾರಿವೆ.ಹೀಗಾಗಿ ಶಿಕ್ಷಕಿ ಶಿಖಾ ಸೋನಿ ಅವರನ್ನು ಅಮಾನತುಗೊಳಿಸಿದೆ. ಶಿಕ್ಷಕಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ ರಾಮು ಎಂಬ ಪದವಾಗಬೇಕಿತ್ತು. ಆದರೆ ಯು ಅಕ್ಷರ ಬಿಟ್ಟು ಹೋಗಿ ರಾಮ ಎಂದು ಆಗಿದೆ. ಪರಿಶೀಲನೆ ವೇಳೆ ಗಮನಕ್ಕೆ ಬರಲಿಲ್ಲ ಎಂದಿದ್ದಾರೆ. ಧಾರ್ಮಿಕ ಭಾವನೆಗಳಿ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ’ ಎಂದಿದ್ದಾರೆ.

==

ಸೋನಿಯಾ ಆರೋಗ್ಯ ಚೇತರಿಕೆ: ಗಂಗಾರಾಮ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ನವದೆಹಲಿ: ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ.5ರಂದು ಇಲ್ಲಿನ ಶ್ರೀ ಗಂಗಾರಾಮ್‌ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು ಭಾನುವಾರ ಬಿಡುಗಡೆಯಾಗಿದ್ದಾರೆ.ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, ‘ಸೋನಿಯಾ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದರು ಹಾಗೂ ಚೇತರಿಕೆಯನ್ನು ಕಾಣುತ್ತಿದ್ದಾರೆ. ಗುರುವಾರ ಸಂಜೆ 5 ಗಂಟೆಗೆ ಡಿಸ್ಚಾರ್ಜ್‌ ಮಾಡಲಾಗಿದ್ದು, ಮುಂದಿನ ಚಿಕಿತ್ಸೆ ಅವರ ನಿವಾಸದಲ್ಲೇ ನಡೆಯಲಿದೆ’ ಎಂದರು.ಎದೆಯಲ್ಲಿ ಸೋಂಕಿನಿಂದಾಗಿ ಶ್ವಾಸನಾಳದ ಆಸ್ತಮಾ ಉಲ್ಬಣಗೊಂಡ ಕಾರಣ ಸೋನಿಯಾರನ್ನು ಸೋಮವಾರ ಆಸ್ಪತ್ರೆಗೆ ಸೇರಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!