ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್‌ಗೆ ಕ್ಷಣಗಣನೆ ಇಂದು ದಿಕ್ಸೂಚಿ ಬಜೆಟ್‌

KannadaprabhaNewsNetwork | Updated : Jul 23 2024, 05:34 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯ ಕೇಂದ್ರ ಸರ್ಕಾರದ ಮೊದಲ ಬಜೆಟ್‌ ಮಂಗಳವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡನೆ ಆಗಲಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯ ಕೇಂದ್ರ ಸರ್ಕಾರದ ಮೊದಲ ಬಜೆಟ್‌ ಮಂಗಳವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡನೆ ಆಗಲಿದೆ. ದಾಖಲೆಯ ಸತತ 7ನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮುಂಗಡಪತ್ರ ಮಂಡಿಸಲಿದ್ದಾರೆ.

ಇದೇ ವೇಳೆ ಇದು ಮುಂದಿನ 5 ವರ್ಷದ ‘ದಿಕ್ಸೂಚಿ ಬಜೆಟ್‌’ ಆಗಲಿದ್ದು, 2047ರಲ್ಲಿ ‘ವಿಕಸಿತ ಭಾರತ’ದ (ಅಭಿವೃದ್ಧಿ ಹೊಂದಿದ ಭಾರತ) ಕನಸನ್ನು ನನಸಾಗಿಸುವ ಅಡಿಪಾಯ ಹಾಕುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. 

ಈ ಮೂಲಕ ಬಜೆಟ್‌ ಮಹತ್ವಾಕಾಂಕ್ಷಿಯಾಗಿರಲಿದೆ ಹಾಗೂ ದೊಡ್ಡ ದೊಡ್ಡ ಘೋಷಣೆ ಹೊಂದಿರಲಿದೆ ಎಂದು ಸುಳಿವು ನೀಡಿದ್ದಾರೆ.ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಇದು ಮೊದಲ ಬಜೆಟ್‌ ಆಗಿದೆ. 2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ಇದ್ದ ಹಿನ್ನೆಲೆಯಲ್ಲಿ ಹಿಂದಿನ ಮೋದಿ ಸರ್ಕಾರ ಕಳೆದ ಫೆಬ್ರವರಿ ತಿಂಗಳಲ್ಲಿ ಮಧ್ಯಂತರ ಬಜೆಟ್‌ ಮಂಡಿಸಿತ್ತು. ಯಾವುದೇ ಮಹತ್ವದ ಘೋಷಣೆ ಆಗಿರಲಿಲ್ಲ.

ನಿರ್ಮಲಾಗೆ ದಾಖಲೆಯ 7ನೇ ಬಜೆಟ್‌:ನಿರ್ಮಲಾ ಸೀತಾರಾಮನ್‌ ಈ ಬಜೆಟ್ ಮಂಡನೆಯೊಂದಿಗೆ ಸತತ 7 ಬಜೆಟ್‌ ಮಂಡಿಸಿದ ದಾಖಲೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸತತ 6 ಬಜೆಟ್‌ ಮಂಡಿಸಿದ ಮೊರಾರ್ಜಿ ದೇಸಾಯಿ ದಾಖಲೆ ಮುರಿಯಲಿದ್ದಾರೆ. ನಿರ್ಮಲಾ ಈಗಾಗಲೇ ಸತತ 5 ಬಜೆಟ್‌ ಮಂಡಿಸಿದ ಮನಮೋಹನ್‌ ಸಿಂಗ್‌, ಅರುಣ್‌ ಜೇಟ್ಲಿ, ಚಿದಂಬರಂ ಮತ್ತು ಯಶವಂತ ಸಿನ್ಹಾ ದಾಖಲೆ ಮುರಿದ್ದಾರೆ. ಆದರೆ ಒಟ್ಟಾರೆ (ಸತತ ಅಲ್ಲ) 10 ಬಜೆಟ್‌ ಮಂಡಿಸಿದ ದಾಖಲೆ ಈಗಲೂ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಹೆಸರಲ್ಲೇ ಇದೆ.

-ಕೋಟ್‌60 ವರ್ಷಗಳ ನಂತರ ಸರ್ಕಾರವು 3ನೇ ಬಾರಿಗೆ ಮರಳಿ ಬಂದು 3ನೇ ಅವಧಿಯ ಮೊದಲ ಬಜೆಟ್ ಅನ್ನು ಮಂಡಿಸುವ ಸೌಭಾಗ್ಯವನ್ನು ಪಡೆದಿರುವುದು ಹೆಮ್ಮೆಯ ವಿಷಯ. ಮಂಗಳವಾರದ ಕೇಂದ್ರ ಬಜೆಟ್ ಮುಂದಿನ 5 ವರ್ಷಗಳ ಪಯಣದ ದಿಕ್ಸೂಚಿಯಾಗಲಿದೆ ಮತ್ತು 2047ರಲ್ಲಿ ‘ವಿಕಸಿತ್ ಭಾರತ್’ ಕನಸನ್ನು ನನಸಾಗಿಸಲು ಅಡಿಪಾಯ ಹಾಕುತ್ತದೆ.

- ನರೇಂದ್ರ ಮೋದಿ, ಪ್ರಧಾನಿ

Share this article