ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿ ಅರ್ಜಿ : ದಿಲ್ಲಿ ಕೋರ್ಟ್‌ ನಕಾರ

KannadaprabhaNewsNetwork | Updated : Dec 14 2024, 05:00 AM IST

ಸಾರಾಂಶ

2023ರ ಕರ್ನಾಟಕ  ಚುನಾವಣೆ ವೇಳೆ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎನ್ನಲಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಜಾಗೊಳಿಸಿದೆ.

ನವದೆಹಲಿ: 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು ಎನ್ನಲಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಜಾಗೊಳಿಸಿದೆ.

2023ರ ಏಪ್ರಿಲ್ 27 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಖರ್ಗೆ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದರು.ಈ ವೇಳೆ ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ದೂರಿದ್ದರು. ಅಲ್ಲದೇ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಬೇಕೆಂದು ಕೋರಿದ್ದರು.

ಆದರೆ ಇದಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷ್ಯಾಧಾರಗಳನ್ನು ನೀಡದ ಕಾರಣ, ಎಫ್‌ಐಆರ್‌ ದಾಖಲಿಗೆ ನ್ಯಾಯಾಲಯ ನಿರಾಕರಿಸಿದೆ.

ಮತ್ತೊಂದೆಡೆ ಪ್ರಕರಣದ ಪೂರ್ವ ಸಮನ್ಸ್‌ ಸಾಕ್ಷ್ಯಕ್ಕಾಗಿ ವಿಚಾರಣೆಯನ್ನು ಮಾ.27ಕ್ಕೆ ಮುಂದೂಡಿದೆ.

30 ದಿಲ್ಲಿ ಶಾಲೆ, ಮುಂಬೈನ ಆರ್‌ಬಿಐ ಕಚೇರಿಗೆ ಬಾಂಬ್ ಬೆದರಿಕೆ

ನವದೆಹಲಿ/ ಮುಂಬೈ: ದೆಹಲಿಯ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಮುಂದುವರೆದಿದ್ದು, ಶುಕ್ರವಾರ ಮತ್ತೆ 30 ಶಾಲೆಗಳಿಗೆ ಇಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆಯನ್ನು ಹಾಕಿದ್ದಾರೆ. ಮತ್ತೊಂದೆಡೆ ಮುಂಬೈನ ಆರ್‌ಬಿಐ ಕಚೇರಿಗೆ ಕೂಡ ಐಇಡಿ ಸ್ಪೋಟದ ಬೆದರಿಕೆ ಬಂದಿದೆ.ಶುಕ್ರವಾರ ಬೆಳಿಗ್ಗೆ ದೆಹಲಿಯ 30 ಶಾಲೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇಮೇಲ್‌ಗೆ ಕಿಡಿಗೇಡಿಗಳು ಸಂದೇಶ ಕಳುಹಿಸಿದ್ದರು. ಆದರೆ ತಪಾಸಣೆ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿಬಾಂಬ್ ಕರೆ ಎನ್ನುವುದು ದೃಢವಾಗಿದೆ. ಡಿ.9ರಂದು ದಿಲ್ಲಿಯ ಸುಮಾರು 44 ಶಾಲೆಗಳಿಗೆ ಇದೇ ರೀತಿಯ ಸಂದೇಶ ಬಂದಿತ್ತು.

ಮುಂಬೈನ ಆರ್‌ಬಿಐ ಕಚೇರಿಗೂ ಬೆದರಿಕೆ:

ಮತ್ತೊಂದೆಡೆ ದಕ್ಷಿಣ ಮುಂಬೈನ ಆರ್‌ಬಿಐ ಕಚೇರಿಗೆ , ಕಚೇರಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇಡಲಾಗಿದೆ ಎನ್ನುವ ಸಂದೇಶ ರಷ್ಯನ್ ಭಾಷೆಯಲ್ಲಿ ಇಮೇಲ್‌ಗೆ ಬಂದಿದೆ. ಆದರೆ ಪೊಲೀಸರ ತಪಾಸಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ನಾಳೆ ಮಹಾ ಸಚಿವ ಸಂಪುಟ ವಿಸ್ತರಣೆ, ಹೊಸ ಸಚಿವರ ಶಪಥ ಸ್ವೀಕಾರ

ಮುಂಬೈ: ಮಹಾರಾಷ್ಟ್ರದಲ್ಲಿ ಡಿ.15ರಂದು ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಇದೇ ವೇಳೆ ನಾಗ್ಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಈ ಕುರಿತು ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದು, ‘ಒಟ್ಟು 30ರಿಂದ 32 ಸಚಿವರು ಶಪಥ ಸ್ವೀಕಾರ ಮಾಡಲಿದ್ದಾರೆ’ ಎಂದರು. ಅತ್ತ ಬಿಜೆಪಿಯ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನ್ಕುಳೆ ಅವರು ಡಿಸಿಎಂಗಳಾದ ಅಜಿತ್‌ ಹಾಗೂ ಶಿಂಧೆಯವರನ್ನು ಶುಕ್ರವಾರ ಪ್ರತ್ಯೇಕವಾಗಿ ಭೇಟಿಯಾಗಿ ಸಚಿವ ಸಂಪುಟ ರಚನೆಯನ್ನು ಅಂತಿಮಗೊಳಿಸಿದ್ದಾರೆ.ಈಗಾಗಲೇ ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಅವರು ಸಿಎಂ ಆಗಿ, ಎನ್‌ಸಿಪಿಯ ಅಜಿತ್‌ ಪವಾರ್‌ ಹಾಗೂ ಶಿವಸೇನೆಯ ಏಕನಾಥ ಶಿಂಧೆ ಪ್ರಮಾಣ ಸ್ವೀಕರಿಸಿದ್ದಾರೆ.

ವಾಯುಭಾರ ಕುಸಿತ: 2ನೇ ದಿನವೂ ತಮಿಳುನಾಡು, ಕೇರಳದಲ್ಲಿ ಭಾರೀ ಮಳೆ

ಚೆನ್ನೈ/ತಿರುವನಂತಪುರಂ: ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಶುಕ್ರವಾರವೂ ಮಳೆ ಮುಂದುವರೆದಿದೆ, ಮತ್ತೊಂದೆಡೆ ಕೇರಳದಲ್ಲಿಯೂ ವರುಣ ಅಬ್ಬರಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ತಮಿಳುನಾಡಿನ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಇಲ್ಲಿನ ತಮಿರಬರಣಿ ನದಿಗೆ ನೀರಿನ ಒಳ ಹರಿವು ಹೆಚ್ಚಾಗಿರುವ ಪರಿಣಾಮ ತೂತುಕುಡಿ ಜಿಲ್ಲಾಡಳಿತ ಶ್ರೀವೈಕುಂಟಂ ಮತ್ತು ಎರಲ್ ಪ್ರದೇಶಗಳಲ್ಲಿ ಪ್ರವಾಹದ ಎಚ್ಚರಿಕೆಯನ್ನು ನೀಡಿದ್ದು, ತಗ್ಗು ಪ್ರದೇಶಗಳಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಲು ಸೂಚಿಸಿದೆ. ಇನ್ನು ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ತಿರುನಲ್ವೇಲಿಯಲ್ಲಿ ಮನೆಯೊಂದು ಕುಸಿದು ಅವಘಡ ಸಂಭವಿಸಿದೆ. 14 ಜಿಲ್ಲೆಗಳಲ್ಲಿ ಮಳೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೇರಳದಲ್ಲೂ ಮಳೆ:

ಮತ್ತೊಂದೆಡೆ ಶುಕ್ರವಾರ ಕೇರಳದಲ್ಲಿಯೂ ನಿರಂತರವಾಗಿ ಮಳೆಯಾಗಿದೆ. ಇಲ್ಲಿನ ತಿರುವನಂತಪುರಂ, ಕೊಲ್ಲಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್‌ ಘೋಷಣೆ ಮಾಡಿದ್ದು, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಈ ಮಧ್ಯೆ ಕೇರಳ ವಿಪತ್ತು ನಿರ್ವಹಣಾ ಪಡೆಯು ಜನರಿಗೆ ಸುರಕ್ಷಿತವಾಗಿರುವಂತೆ ಹಲವು ಮಾರ್ಗಸೂಚಿಗಳನ್ನು ನೀಡಿದೆ.

ನಿರ್ಗಮನಕ್ಕೂ ಮುನ್ನ 4 ಭಾರತೀಯರು ಸೇರಿ 1500 ಜನರಿಗೆ ಬೈಡೆನ್‌ ಕ್ಷಮಾದಾನ

ವಾಷಿಂಗ್ಟನ್‌: ಮುಂದಿನ ವರ್ಷ ಅಧಿಕಾರದಿಂದ ಕೆಳಗಿಳಿಯಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅದಕ್ಕೂ ಮೊದಲು 4 ಭಾರತೀಯರು ಸೇರಿ, ವಿವಿಧ ಆಪರಾಧಗಳಲ್ಲಿ ಬಂಧಿತರಾಗಿದ್ದ 1500 ಜನರಿಗೆ ಕ್ಷಮಾದಾನ ನೀಡಿದ್ದಾರೆ. ಮೀರಾ ಸಚ್‌ದೇವ್‌, ಬಾಬುಭಾಯ್‌ ಪಟೇಲ್‌, ಕೃಷ್ಣ ಮೋಟೆ ಹಾಗೂ ವಿಕ್ರಮ್‌ ದತ್ತಾಗೆ ಅವರು ಕ್ಷಮೆಗೆ ಪಾತ್ರರಾದ ಭಾರತೀಯರು.ತಮ್ಮ ಕ್ಯಾನ್ಸರ್‌ ಸಂಸ್ಥೆಯಲ್ಲಿನ ಅಕ್ರಮ ವ್ಯವಹಾರಗಳ ಸಂಬಂಧ ಮೀರಾ ಸಚ್‌ದೇವ್‌ಗೆ 2012ರಲ್ಲಿ 69 ಕೋಟಿ ದಂಡ ಹಾಗೂ 20 ವರ್ಷ ಸೆರೆವಾಸ, ಬಾಬುಭಾಯ್‌ಗೆ ಡ್ರಗ್‌ ದಂಧೆ ಸೇರಿ ಕೆಲ ಅಕ್ರಮಗಳಿಗೆ 2013ರಲ್ಲಿ 17 ವರ್ಷ ಜೈಲುವಾಸ ಶಿಕ್ಷೆ, ನಶಾವಸ್ತು ಪ್ರಕರಣದಲ್ಲಿ ಕೃಷ್ಣಾ ಮೋಟೆಗೆ 2013ರಲ್ಲಿ ಜೀವಾವಧಿ ಶಿಕ್ಷೆ ಹಾಗೂ 2012ರಲ್ಲಿ ದತ್ತಾಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 235 ತಿಂಗಳ ಸೆರೆವಾಸ ವಿಧಿಸಲಾಗಿತ್ತು.

---ಕ್ಷಮಾದಾನದ ಮುನ್ನ ಮಾತನಾಡಿದ ಬೈಡೆನ್‌, ‘ಅಮೆರಿಕವು ಸಾಧ್ಯತೆ ಹಾಗೂ 2ನೇ ಅವಕಾಶದ ಭರವಸೆಯ ಮೇಲೆ ನಿರ್ಮಾಣವಾಗಿದೆ. ಅಧ್ಯಕ್ಷನಾಗಿರುವ ನನಗೆ, ಪಶ್ಚಾತ್ತಾಪ ಪಡುತ್ತಿರುವವರನ್ನು ಕ್ಷಮಿಸಿ ಪುನರ್ವಸತಿ ಕಲ್ಪಿಸುವ ಅಧಿಕಾರವಿದೆ. ಇದನ್ನು ಬಳಸಿ, ಸುಧಾರಣೆಯ ಲಕ್ಷಣಗಳನ್ನು ತೋರಿಸಿದ 39 ಜನ ಸೇರಿದಂತೆ ದೀರ್ಘಾವಧಿಯ ಜೈಲುವಾಸ ಶಿಕ್ಷೆಗೆ ಒಳಗಾಗಿರುವ 1500 ಜನರಿಗೆ ಕ್ಷಮೆ ನೀಡುತ್ತಿದ್ದೇನೆ’ ಎಂದರು.

Share this article