ನವದೆಹಲಿ: ಯಾವುದೇ ವ್ಯಕ್ತಿಗೆ ಜಾಮೀನು ನೀಡುವಾಗ, ಜಾಮೀನು ಅವಧಿಯಲ್ಲಿ ಆತ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ ಎಂಬ ಷರತ್ತು ವಿಧಿಸುವಂತಿಲ್ಲ.
ಇಂಥ ಷರತ್ತು ಆತನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ ಇಂಥದ್ದೇ ಷರತ್ತು ಒಡ್ಡಿದ್ದ ಒಡಿಶಾ ಹೈಕೋರ್ಟ್ ಆದೇಶ ವಜಾಗೊಳಿಸಿದೆ.
ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಿವಶಂಕರ್ ದಾಸ್, ಜಾಮೀನಿನ ಮೇಲೆ ಬಿಡುಗಡೆಯಾದ ಅವಧಿಯಲ್ಲಿ ಬೆಹ್ರಾಂಪುರ ಮುನ್ಸಿಪಲ್ ಕಾರ್ಪೋರೇಷನ್‌ನ ಮೇಯರ್ ಆಗಿ ಆಯ್ಕೆಯಾಗಿದ್ದರು.
ಜಾಮೀನು ನೀಡುವಾಗ ಯಾವುದೇ ರಾಜಕೀಯ ಚಟುವಟಿಕೆ ನಡೆಸದಂತೆ ಹೈಕೋರ್ಟ್ ಅವರಿಗೆ ಷರತ್ತು ವಿಧಿಸಿತ್ತು. ಈ ಷರತ್ತು ಹಿಂಪಡೆಯುವಂತೆ 2022ರಲ್ಲಿ ದಾಸ್ ಹೈಕೋರ್ಟ್ ಮೊರೆ ಹೋಗಿದ್ದರು.
ಆದರೆ ಜಾಮೀನಿನ ಮೇಲೆ ಬಿಡುಗಡೆಯಾದ ಅವಧಿಯಲ್ಲಿ ದಾಸ್ ಮೇಲೆ ಹತ್ಯೆ ಯತ್ನ ನಡೆದಿದೆ. ಹೀಗಾಗಿ ರಾಜಕೀಯ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ರಾಜ್ಯ ಸರ್ಕಾರ ವಾದಿಸಿತ್ತು.
ಈ ವಾದ ಒಪ್ಪಿದ್ದ ಹೈಕೋರ್ಟ್ ಇಂಥ ಅವಕಾಶ ಕಾನೂನು ಸುವ್ಯವಸ್ಥೆಗೆ ಭಂಗ ತರಬಹುದು ಎಂದು ಹೇಳಿ, ಷರತ್ತು ತೆಗೆಯಲು ನಿರಾಕರಿಸಿತ್ತು. ಹೀಗಾಗಿ ದಾಸ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.