ಅಮ್ಮಾನ್ : ಭಾರತ ಮತ್ತು ಅರಬ್ ರಾಷ್ಟ್ರದ ನಡುವಿನ ನಿಕಟ ಸಂಬಂಧದ ದ್ಯೋತಕವಾಗಿ ಜೋರ್ಡಾನ್ ಯುವರಾಜ ಅಲ್ ಹುಸೇನ್ ಬಿನ್ ಅಬ್ದುಲ್ಲಾ-2 ಮಂಗಳವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂರಿಸಿಕೊಂಡು ತಾವೇ ಕಾರು ಚಲಾಯಿಸಿದ ಅಪರೂಪದ ಪ್ರಸಂಗ ನಡೆಯಿತು.
ಕ್ರೌನ್ ಪ್ರಿನ್ಸ್ ಅಲ್ ಹುಸೇನ್ ಅವರು ಪ್ರವಾದಿ ಮೊಹಮ್ಮದ್ ಅವರ 42 ನೇ ತಲೆಮಾರಿನ ನೇರ ವಂಶಸ್ಥರು ಎಂಬುದು ಇಲ್ಲಿ ಗಮನಾರ್ಹ. ಮೋದಿ 4 ದಿನಗಳ ವಿದೇಶ ಪ್ರವಾಸ ಅಂಗವಾಗಿ ಸೋಮವಾರ ಜೋರ್ಡಾನ್‌ಗೆ ಆಗಮಿಸಿದ್ದರು. ಈ ನಿಮಿತ್ತ ಅವರನ್ನು ಜೋರ್ಡಾನ್ ವಸ್ತುಸಂಗ್ರಹಾಲಯಕ್ಕೆ ಅಬ್ದುಲ್ಲಾ-2, ತಮ್ಮ ಕಾರಿನಲ್ಲಿ ಕರೆದೊಯ್ದರು.
ಅಮ್ಮಾನ್ ಬಳಿಯ ರಾಸ್ ಅಲ್-ಐನ್ ಜಿಲ್ಲೆಯಲ್ಲಿರುವ ಜೋರ್ಡಾನ್ ವಸ್ತುಸಂಗ್ರಹಾಲಯವು ದೇಶದ ಅತಿದೊಡ್ಡ ವಸ್ತು ಸಂಗ್ರಹಾಲಯವಾಗಿದೆ. 2014 ರಲ್ಲಿ ನಿರ್ಮಿಸಲಾದ ಈ ವಸ್ತುಸಂಗ್ರಹಾಲಯವು, ದೇಶದ ಮಹತ್ವದ ಪುರಾತತ್ವ ಮತ್ತು ಐತಿಹಾಸಿಕ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸುತ್ತದೆ ಹಾಗೂ ಇತಿಹಾಸಪೂರ್ವ ಕಾಲದಿಂದ ಇಂದಿನವರೆಗಿನ ಈ ಪ್ರದೇಶದ ನಾಗರಿಕತೆಯ ಪ್ರಯಾಣವನ್ನು ಗುರುತಿಸುತ್ತದೆ.
ಇದಲ್ಲದೆ, 15 ಲಕ್ಷ ವರ್ಷಗಳಷ್ಟು ಹಳೆಯದಾದ ಪ್ರಾಣಿಗಳ ಮೂಳೆಗಳು ಮತ್ತು 9,000 ವರ್ಷಗಳಷ್ಟು ಹಳೆಯದಾದ ಐನ್ ಗಜಲ್ ಸುಣ್ಣದ ಪ್ಲಾಸ್ಟರ್ ಪ್ರತಿಮೆಗಳನ್ನು ಒಳಗೊಂಡಿದೆ, ಇದನ್ನು ವಿಶ್ವದ ಅತ್ಯಂತ ಹಳೆಯದು ಎಂದು ಪರಿಗಣಿಸಲಾಗಿದೆ.
ಅಡಿಸ್ ಅಬಾಬಾ: 3 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪೂರ್ವ ಆಫ್ರಿಕಾ ದೇಶವಾದ ಇಥಿಯೋಪಿಯಾಗೆ ಬಂದಿಳಿದರು. ಅವರು ಈ ದೇಶಕ್ಕೆ ಕಾಲಿಡುತ್ತಿರುವುದು ಇದೇ ಮೊದಲು.
ಮೋದಿ ಅವರನ್ನು ಸ್ವಾಗತಿಸಿದ ಪ್ರಧಾನಿ ಡಾ। ಅಬಿ ಅಹ್ಮದ್ ಅಲಿ, ಸ್ನೇಹದ ದ್ಯೋತಕವಾಗಿ ತಾವೇ ಕಾರು ಚಲಾಯಿಸಿಕೊಂಡು ಮೊದಿ ಅವರನ್ನು ಹೋಟೆಲ್‌ಗೆ ಕರೆದೊಯ್ದರು. ಅಲ್ಲಿ ನಡೆದ ವಿಶೇಷ ಇಥಿಯೋಪಿಯಾ ಕಾಫಿ ಪಾರ್ಟಿಯಲ್ಲಿ ಮೋದಿ ಪಾಲ್ಗೊಂಡರು. ಭಾರತೀಯ ಸಂಜಾತರೂ ಮೋದಿ ಅವರನ್ನು ನೋಡಿ ಸಂಭ್ರಮಿಸಿದರು.
ಮೋದಿ ಇಲ್ಲಿನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದು, ಭಾರತವು ಪ್ರಜಾಪ್ರಭುತ್ವದ ಜನನಿ ಎನ್ನಿಸಿಕೊಂಡ ಪಯಣದ ಬಗ್ಗೆ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಭಾರತ-ಇಥಿಯೋಪಿಯ ಸಹಯೋಗ ಹೇಗೆ ಮೌಲ್ಯ ತಂದುಕೊಡಬಹುದು ಎಂಬ ಬಗ್ಗೆ ವಿವರಿಸಲಿದ್ದಾರೆ. ಜೋರ್ಡಾನ್‌ನಿಂದ ಇಥಿಯೋಪಿಯಾಗೆ ಬಂದಿರುವ ಮೋದಿ, ಡಿ.17ರಂದು ಒಮಾನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.