ಕಚ್ಚಾತೈಲ ಗಗನನ ಮುಖಿ : ಬ್ಯಾರೆಲ್‌ಗೆ 120 ಡಾಲರ್‌ಗೇರಿಕೆ

KannadaprabhaNewsNetwork |  
Published : Mar 10, 2026, 02:45 AM ISTUpdated : Mar 10, 2026, 04:22 AM IST
Crude oil price rise

ಸಾರಾಂಶ

ತೀವ್ರಗೊಂಡಿರುವ ಇರಾನ್‌ ಕದನವು ತೈಲ ಹಾಗೂ ಹಣಕಾಸು ಮಾರುಕಟ್ಟೆಗಳನ್ನು ದಂಗುಬಡಿಸಿದ್ದು, ಸೋಮವಾರ ತೈಲ ಬೆಲೆಗಳು ಭಾರೀ ಪ್ರಮಾಣದ ಏರಿಕೆ ಕಂಡಿವೆ. ಬ್ಯಾರೆಲ್‌ಗೆ 120 ಡಾಲರ್‌ ಗಡಿ ಸಮೀಪಿಸಿವೆ. ಇದು 2022ರ ನಂತರದ ಅತಿ ಗರಿಷ್ಠವಾಗಿದೆ.

 ಶಿಕಾಗೋ: ತೀವ್ರಗೊಂಡಿರುವ ಇರಾನ್‌ ಕದನವು ತೈಲ ಹಾಗೂ ಹಣಕಾಸು ಮಾರುಕಟ್ಟೆಗಳನ್ನು ದಂಗುಬಡಿಸಿದ್ದು, ಸೋಮವಾರ ತೈಲ ಬೆಲೆಗಳು ಭಾರೀ ಪ್ರಮಾಣದ ಏರಿಕೆ ಕಂಡಿವೆ. ಬ್ಯಾರೆಲ್‌ಗೆ 120 ಡಾಲರ್‌ ಗಡಿ ಸಮೀಪಿಸಿವೆ. ಇದು 2022ರ ನಂತರದ ಅತಿ ಗರಿಷ್ಠವಾಗಿದೆ.

ಕಳೆದ ವರ್ಷ 64 ಡಾಲರ್‌ಗೆ ಕಚ್ಚಾತೈಲ ಬೆಲೆ ಇಳಿದಿತ್ತು. ಇದಲ್ಲದೆ ಯುದ್ಧ ಆರಂಭಕ್ಕೂ ಮುನ್ನ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 74 ಡಾಲರ್‌ ಇತ್ತು. ಅಲ್ಲದೆ, ಭಾನುವಾರ ಕಚ್ಚಾತೈಲ ಬೆಲೆ 92 ಡಾಲರ್‌ ಇತ್ತು. ಹೀಗಾಗಿ ಕೇವಲ 10 ದಿನದಲ್ಲಿ ಬೆಲೆ 46 ಡಾಲರ್‌ನಷ್ಟು ಹಾಗೂ ಒಂದೇ ದಿನದಲ್ಲಿ 28 ಡಾಲರ್‌ ಏರಿಕೆ ಆದಂತಾಗಿದೆ. ಇದರಿಂದ ವಿಶ್ವಾದ್ಯಂತ ತೈಲ ಬೆಲೆ ಏರಿಕೆ ಭೀತಿ ಎದುರಾಗಿದೆ.

ಗಲ್ಫ್‌ನ ಪ್ರಮುಖ ಉತ್ಪಾದಕರು ಉತ್ಪಾದನೆಯನ್ನು ಕಡಿಮೆ ಮಾಡಿದ್ದರಿಂದ, ಇರಾನ್‌ ದೇಶವು ತನ್ನ ಮೇಲಿನ ದಾಳಿಗೆ ಪ್ರತೀಕಾರವಾಗಿ ಹೋರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ, ಭಾನುವಾರ ಇಸ್ರೇಲ್‌ ಸೇನೆಯು ಇರಾನ್‌ನ 30 ತೈಲಾಗಾರಗಳ ಮೇಲೆ ದಾಳಿ ಮಾಡಿದ್ದರಿಂದ ತೈಲ ಬೆಲೆ ಗಗನಮುಖಿಯಾಗಿವೆ.

ಗಗನಮುಖಿ:

ಬ್ರೆಂಟ್ ಕಚ್ಚಾ ತೈಲ ದರವು, ಪ್ರತಿ ಬ್ಯಾರೆಲ್‌ಗೆ ದಿನದ ಆರಂಭದಲ್ಲಿ $119.50 ಕ್ಕೆ ಏರಿತು. ಆದರೆ ನಂತರ ಪ್ರತಿ ಬ್ಯಾರೆಲ್‌ಗೆ 107.80 ಡಾಲರ್‌ಗೆ ವಹಿವಾಟು ನಡೆಸಿತು.

ಈ ನಡುವೆ, ಇನ್ನೊಂದು ತೈಲ ಪೇಟೆಯಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್, ಪ್ರತಿ ಬ್ಯಾರೆಲ್‌ಗೆ 119.48 ಡಾಲರ್‌ಗೆ ಏರಿತು. ಆದರೆ ಮತ್ತೆ ಪ್ರತಿ ಬ್ಯಾರೆಲ್‌ಗೆ 103 ಡಾಲರ್‌ಗೆ ಇಳಿಯಿತು.ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ 2022ರಲ್ಲಿ ಕಚ್ಚಾ ತೈಲಗಳು ಪ್ರಸ್ತುತ ಮಟ್ಟಕ್ಕೆ ಹೋಗಿದ್ದವು. ಇದಾದ ನಂತರ ಇಷ್ಟೊಂದು ಏರಿಕೆ ಇದೇ ಮೊದಲು.

ಯುದ್ಧದ ಪರಿಣಾಮ:

ಸ್ವತಂತ್ರ ಸಂಶೋಧನಾ ಸಂಸ್ಥೆ ‘ರಿಸ್ಟಾಡ್ ಎನರ್ಜಿ’ ಪ್ರಕಾರ, ಸುಮಾರು 15 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ (ವಿಶ್ವದ ತೈಲದ ಸುಮಾರು 20%) ಸಾಮಾನ್ಯವಾಗಿ ಹೋರ್ಮುಜ್ ಜಲಸಂಧಿಯ ಮೂಲಕ ಪ್ರತಿದಿನ ರವಾನೆಯಾಗುತ್ತದೆ. ಆದರೆ ಇರಾನ್‌ ಯುದ್ಧದಿಂದ ಸೌದಿ ಅರೇಬಿಯಾ, ಕುವೈತ್, ಇರಾಕ್, ಕತಾರ್, ಬಹ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇರಾನ್‌ನ ತೈಲ ಹಾಗೂ ಅನಿಲ ಸಾಗಣೆ ಮೇಲೆ ಪರಿಣಾಮ ಬೀರಿದೆ. ಈ ಜಲಸಂಧಿಯ ಮೂಲಕ ಹಾದು ಹೋಗುವ ಹಡಗುಗಳು ಬಹುತೇಕ ಸ್ಥಗಿತಗೊಂಡಿವೆ.

ಇನ್ನು ಕಚ್ಚಾ ತೈಲ ರಫ್ತು ಮಾಡುವ ಸಾಮರ್ಥ್ಯ ಕಡಿಮೆಯಾದ ಕಾರಣ, ಸೌದಿ ಅರೇಬಿಯಾ, ಇರಾಕ್, ಕುವೈತ್ ಮತ್ತು ಯುಎಇಗಳು ತಮ್ಮ ತೈಲ ಉತ್ಪಾದನೆಯನ್ನು ಕಡಿತಗೊಳಿಸಿವೆ.

ಯುದ್ಧ ಪ್ರಾರಂಭವಾದಾಗಿನಿಂದ ಇರಾನ್, ಇಸ್ರೇಲ್ ಮತ್ತು ಅಮೆರಿಕಗಳು ಪರಸ್ಪರರ ತೈಲ ಮತ್ತು ಅನಿಲ ಸೌಲಭ್ಯಗಳ ಮೇಲೆ ದಾಳಿ ಮಾಡಿವೆ. ಇದು ಪೂರೈಕೆಯ ಕಳವಳಗಳನ್ನು ಉಲ್ಬಣಗೊಳಿಸಿದೆ.

ಬ್ಯಾರೆಲ್‌ಗೆ 10,549 ರು.ಗೇರಿದ ಫ್ಯೂಚರ್ಸ್‌ ಕಚ್ಚಾ ತೈಲ 

 ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ತೈಲಗಳ ಬೆಲೆ ಗಗನಕ್ಕೇರುತ್ತಿದ್ದು, ಭಾರತದಲ್ಲಿ ಫ್ಯೂಚರ್ಸ್‌ ಕಚ್ಚಾ ತೈಲವು ಶೇ.26ರಷ್ಟು ಏರಿಕೆಕಂಡು ಬ್ಯಾರೆಲ್‌ಗೆ 10,549ಕ್ಕೆ ತಲುಪಿದೆ. ಇದು ಇದುವರೆಗಿನ ಅತಿ ಗರಿಷ್ಠವಾಗಿದೆ.ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ (ಎಂಸಿಎಕ್ಸ್‌)ನಲ್ಲಿ ಮಾರ್ಚ್‌ ವಿತರಣೆಗೆ ಕಚ್ಚಾ ತೈಲವು 2186 ರು. ಏರಿಕೆಯಾಗಿದೆ. ಶುಕ್ರವಾರವಷ್ಟೇ ಬ್ಯಾರೆಲ್‌ ಕಚ್ಚಾ ತೈಲದ ದರ 8,363 ರು.ಗಳಷ್ಟಿತ್ತು. ಮತ್ತೊಂದೆಡೆ ಈ ದರವು ಮುಂದಿನ ದಿನಗಳಲ್ಲಿ 11,300 ರು.ಗೆ ಏರಿಕೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಯುದ್ಧದಿಂದ ಎಲ್‌ಪಿಜಿ ಅಭಾವ : ಪುಣೆ ಶವಾಗಾರದಲ್ಲಿ ಎಲ್‌ಪಿಜಿ

ಪುಣೆ: ಮಧ್ಯಪ್ರಾಚ್ಯ ಯುದ್ಧದಿಂದ ಎಲ್‌ಪಿಜಿ ಕೊರತೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬೃಹತ್‌ ಶವಾಗಾರವಾಗಿರುವ ಪುಣೆ ವೈಕುಂಠ ಧಾಮವು ಎಲ್‌ಪಿಜಿ ಬದಲಿಗೆ ಎಲೆಕ್ಟ್ರಿಕ್‌ ಯಂತ್ರಗಳ ಮೂಲಕ ಶವಗಳ ಅಂತ್ಯಸಂಸ್ಕಾರಕ್ಕೆ ನಿರ್ಧರಿಸಿದೆ.ಪುಣೆಯ ನವಿ ಪೇಠದಲ್ಲಿ 17 ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಶವಾಗಾರದಲ್ಲಿ ದಿನಕ್ಕೆ ಕನಿಷ್ಠ 20 ಶವಗಳ ದಹನಕ್ರಿಯೆ ನಡೆಯುತ್ತದೆ. ಇದೀಗ ಎಲ್‌ಪಿಜಿ ಕೊರತೆಯ ಆತಂಕ ಎದುರಾಗಿರುವುದರಿಂದ ಅದರ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬದಲಿದೆ ಎಲೆಕ್ಟ್ರಿಕ್‌ ಯಂತ್ರದ ಮೂಲಕ ಶವಗಳ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಸದ್ಯಕ್ಕೆ ಹೆಚ್ಚಳವಿಲ್ಲ: ಕೇಂದ್ರ

ಪಿಟಿಐ ನವದೆಹಲಿಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ಗಳನ್ನು ದಾಟಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸದ್ಯಕ್ಕೆ ಹೆಚ್ಚಿಸುವುದಿಲ್ಲ ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ.

‘ದೇಶಾದ್ಯಂತ ನಿರಂತರ ಇಂಧನ ಪೂರೈಕೆ ಮಾರ್ಗಗಳನ್ನು ನಿರ್ವಹಿಸಲು ಅಧಿಕಾರಿಗಳು ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ, ಆದರೆ ಚಿಲ್ಲರೆ ಇಂಧನ ಬೆಲೆಗಳನ್ನು ಹೆಚ್ಚಿಸುವ ಯಾವುದೇ ತಕ್ಷಣದ ಯೋಜನೆ ಇಲ್ಲ’ ಎಂದು ಅವು ಹೇಳಿವೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರಸ್ತುತ ವೆಚ್ಚದ ಒತ್ತಡವನ್ನು ಸದ್ಯಕ್ಕೆ ನಿಭಾಯಿಸುವ ನಿರೀಕ್ಷೆಯಿದೆ.ಶುಕ್ರವಾರದಿಂದಲೇ ಜಾರಿಯಾಗುವಂತೆ ಸರ್ಕಾರ ಎಲ್‌ಪಿಜಿ ದರವನ್ನು 60 ರು. ಹೆಚ್ಚಿಸಿತ್ತು.

ಉ.ಪ್ರ. ಹಳ್ಳಿಯಲ್ಲಿ ಎಲ್‌ಪಿಜಿ ಬೆಲೆ 1500 ರು.! 

ಲಖನೌ: ಯುದ್ಧದ ಕಾರಣ ಎಲ್‌ಪಿಜಿ, ತೈಲ ಬೆಲೆ ಹೆಚ್ಚಬಹುದು ಹಾಗೂ ಹಾಹಾಕಾರ ಆಗಬಹುದು ಎಂಬ ವದಂತಿಗಳು ಸೃಷ್ಟಿಯಾಗಿದ್ದು, ಕೆಲವರು ಇದೇ ಪರಿಸ್ಥಿತಿಯ ದುರ್ಲಾಭ ಪಡೆದು ಮನಬಂದ ದರಕ್ಕೆ ಎಲ್‌ಪಿಜಿ ಮಾರಾಟ ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಪ್ರತಾಪಗಢ ಎಂಬಲ್ಲಿ 1500 ರು.ಗೆ ಒಂದು ಎಲ್‌ಪಿಜಿ ಮಾರಾಟವಾಗುತ್ತಿದೆ.

ಮಾ.7ರ ವೈರಲ್‌ ವಿಡಿಯೋವೊಂದು, ಗ್ಯಾಸ್ ಏಜೆನ್ಸಿಯ ಹೊರಗೆನೂರಾರು ಜನರು ತಮ್ಮ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಾಲುಗಟ್ಟಿ ಕುಳಿತಿರುವುದನ್ನು ತೋರಿಸಿದೆ. ಅನೇಕ ಊರುಗಳಲ್ಲೂ ಇದೇ ಸ್ಥಿತಿ ಇದೆ.ಈ ಬಗ್ಗೆ ಅಳಲು ತೋಡಿಕೊಂಡ ಪ್ರತಾಪ್‌ಗಢ ಮಹಿಳೆಯೊಬ್ಬರು, ‘ಕಾಳಸಂತೆಯಲ್ಲಿ 1,500 ರು.ಗೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ. ಇದು ರಮ್ಜಾನ್‌ ಮಾಸ. ನಮಗೆ ಮನೆಯಲ್ಲಿ ಗ್ಯಾಸ್‌ ಬೇಕೇಬೇಕು. ವಿಧಿಯಿಲ್ಲ’ ಎಂದು ಹೇಳಿಕೊಂಡರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೊಲ್ಲಿ ಯುದ್ಧದಿಂದ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ಭಾರಿ ವ್ಯತಯ : ಗ್ಯಾಸ್‌ ಬರದಿದ್ದರೆ ಹೋಟೆಲ್‌ ಬಂದ್‌
ಲೆಬನಾನ್‌ ಮನೆ ಮೇಲೆ ಇಸ್ರೇಲ್‌ ಅಪಾಯಕಾರಿ ಬಿಳಿ ರಂಜಕ ಪ್ರಯೋಗ