;Resize=(412,232))
ಅಮರಾವತಿ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು ಮೋಂಥಾ ಹೆಸರಿನ ಚಂಡಮಾರುತವಾಗಿ ಪರಿವರ್ತಿತವಾಗಿದ್ದು, ಸೋಮವಾರ ಆಂಧ್ರಪ್ರದೇಶದ ಕರಾವಳಿಯ ಮೇಲೆ ಅಪ್ಪಳಿಸಿದೆ. ಜೊತೆಗೆ ಮಂಗಳವಾರ ಸಂಜೆಯ ವೇಳೆಗೆ ಅದು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡು ಕಾಕಿನಾಡದ ಸಮೀಪ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣದ ಮಧ್ಯೆ ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಚಂಡಮಾರುತದ ಬಗ್ಗೆ ಪ್ರಧಾನಿಗಳ ಕಚೇರಿಗೆ ನಿರಂತರ ಮಾಹಿತಿ ನೀಡುವ ಜವಾಬ್ದಾರಿಯನ್ನು ಐಟಿ ಸಚಿವ ನಾರಾ ಲೋಕೇಶ್ ಅವರಿಗೆ ನೀಡಲಾಗಿದೆ.
ಚಂಡಮಾರುತ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಆಂಧ್ರದಲ್ಲಿ ಶಿಕ್ಷಣ ಸಂಸ್ಥೆಗಳಿಗೆ 3 ದಿನ ರಜೆ ಘೋಷಿಸಲಾಗಿದೆ. ಜೊತೆಗೆ ಮುಂದಿನ 3 ದಿನಗಳ ಅವಧಿಯಲ್ಲಿ ಉಭಯ ರಾಜ್ಯಗಳಲ್ಲಿ ರೈಲು ಮತ್ತು ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯವಾಗುವ ಸಾಧ್ಯತೆ ಇದೆ.
‘ಸುಂದರವಾದ ಹೂವು’ ಎಂಬರ್ಥದ ಹೆಸರಿನ ಈ ಚಂಡಮಾರುತವು ಸೋಮವಾರ ಸಂಜೆ ವೇಳೆಗೆ ಆಂಧ್ರದ ಕರಾವಳಿ ಮೇಲೆ ಅಪ್ಪಳಿಸಿದ್ದು ಭಾರೀ ಮಳೆಗೆ ಕಾರಣವಾಗಿದೆ. ಆಂಧ್ರದ ಜೊತೆಗೆ, ನೆರೆಯ ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲೂ ಮಳೆ ಸುರಿಯುತ್ತಿದೆ. ಇದು ಮುಂದಿನ 12 ತಾಸುಗಳಲ್ಲಿ ನೈಋತ್ಯ ಮತ್ತು ಪಶ್ಚಿಮಮಧ್ಯ ಬಂಗಾಳ ಕೊಲ್ಲಿಯ ಮೇಲಿಂದ ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದ್ದು, ಬಳಿಕ ಉತ್ತರ ಮತ್ತು ವಾಯುವ್ಯದ ಕಡೆ ತಿರುಗಿ, ಅ.28ರ ಸಂಜೆ ಅಥವಾ ರಾತ್ರಿ ಇದು ರೌದ್ರರೂಪ ತಳೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತದ ಕರಾವಳಿಯ 8 ಜಿಲ್ಲೆಯ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಎಚ್ಚರಿಕೆಯ ಹೊರತಾಗಿಯೂ ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಲು ಹಿಂದೇಟು ಹಾಕುತ್ತಿರುವವರ ಮನೆಗಳಿಗೆ ಅವರ ಅನುಪಸ್ಥಿತಿಯಲ್ಲಿ ಪೊಲೀಸ್ ಭದ್ರತೆಯನ್ನೂ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಹಾನಿಯನ್ನು ತಗ್ಗಿಸಿ ಶೂನ್ಯ ಸಾವಾಗುವಂತೆ ನೋಡಿಕೊಳ್ಳುವ ಗುರಿಯೊಂದಿಗೆ ಈಗಾಗಲೇ 5,000 ಜನರಿರುವ 128 ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು, ಅಗ್ನಿಶಾಮಕ ದಳಗಳನ್ನು ಅಪಾಯದಲ್ಲಿರುವ 8 ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.
ಅತ್ತ ಪಶ್ಚಿಮ ಬಂಗಾಳದಲ್ಲಿ ಮಂಗಳವಾರದಿಂದ 4 ದಿನ ವಿಪರೀತ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ಮಳೆನೀರು ನಿಂತು ಪ್ರವಾಹ ಸ್ಥಿತಿ ಸೃಷ್ಟಿಯಾಗಿ, ಡಾರ್ಜೀಲಿಂಗ್ ಮತ್ತು ಕಲಿಂಪಾಂಗ್ ಜಿಲ್ಲೆಗಳಲ್ಲಿ 7ರಿಂದ 20 ಸೆಂ.ಮೀ. ಮಳೆಯಿಂದಾಗಿ ಭೂಕುಸಿತವಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.