ವಿಮಾನ ದುರಂತಕ್ಕೆ ಬಲಿಯಾದವರ ಸಂಖ್ಯೆ 270ಕ್ಕೇರಿಕೆ

Published : Jun 15, 2025, 04:15 AM ISTUpdated : Jun 15, 2025, 04:17 AM IST
PM Modi visits the Air India AI-171 flight crash site in Ahmedabad

ಸಾರಾಂಶ

ಗುಜರಾತಿನ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಏರಿಕೆಯಾಗುತ್ತಿದ್ದು, ಇದುವರೆಗೆ 270 ಜನರ ಶವಗಳು ಪತ್ತೆಯಾಗಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಅಹಮದಾಬಾದ್: ಗುಜರಾತಿನ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಏರಿಕೆಯಾಗುತ್ತಿದ್ದು, ಇದುವರೆಗೆ 270 ಜನರ ಶವಗಳು ಪತ್ತೆಯಾಗಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ನಡುವೆ ಏರಿಂಡಿಯಾ ವಿಮಾನ ಪತನಕ್ಕೆ ಕಾರಣ ಪತ್ತೆ ಹಚ್ಚಲು ತನಿಖೆಗಾಗಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಆರಂಭದಲ್ಲಿ ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ 265 ಜನರು ಬಲಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ದುರಂತದ ಸ್ಥಳದಿಂದ ಇದುವರೆಗೂ ಒಟ್ಟು 270 ಶವಗಳು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ರವಾನೆಯಾಗಿದೆ. ಇನ್ನು ಇಲ್ಲಿನ ಅಗ್ನಿಶಾಮಕ ಮತ್ತು ತರ್ತು ಸೇವೆ (ಎಎಫ್‌ಇಎಸ್‌) ಘಟಕವು ಮೇಘನಿ ನಗರದ ಬಿ.ಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನಿಂದ ಕಳೆದ 24 ಗಂಟೆಯಲ್ಲಿ ಒಂದು ಶವ ಮತ್ತು ಅರ್ಧಂಬರ್ಧ ಸುಟ್ಟ ದೇಹಗಳ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಗುರುವಾರ ನಡೆದ ಈ ಘನಘೋರ ದುರಂತದ ಪತ್ತೆಗಾಗಿ ಕೇಂದ್ರ ಸರ್ಕಾರ ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ವಿಮಾನ ಪತನಕ್ಕೆ ಕಾರಣ, ಮತ್ತು ಭವಿಷ್ಯದಲ್ಲಿ ಇಂತಹ ಘಟನೆ ತಡೆಗಟ್ಟಲು ಮತ್ತು ನಿರ್ವಹಿಸಲು ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ರೂಪಿಸುವುದರ ಮೇಲೆ ಗಮನ ಹರಿಸುತ್ತದೆ. ಇನ್ನು ಈ ಸಮಿತಿಗೆ ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಲಂಡನ್‌ಗೆ ಹೊರಟಿದ್ದ ಬೆಂಗ್ಳೂರಿನ ಐಟಿ ಉದ್ಯೋಗಿ ಬಲಿ 

ಇಂದೋರ್: ಅಹಮದಾಬಾದ್‌ ವಿಮಾನ ಅಪಘಾತದಲ್ಲಿ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಕೂಡಾ ಸಾವನ್ನಪ್ಪಿದ ವಿಷಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ 28 ವರ್ಷದ ಹರ್‌ಪ್ರೀತ್‌ ಕೌರ್‌, ಲಂಡನ್‌ನಲ್ಲಿರುವ ತಮ್ಮ ಪತಿ ರಾಬಿ ಹೋರಾ ಭೇಟಿಗೆಂದು ಲಂಡನ್‌ ವಿಮಾನ ಹತ್ತಿದ್ದರು. ಅವರು ಮೊದಲು ಜೂ.19ಕ್ಕೆ ಲಂಡನ್‌ಗೆ ತೆರಳುವುದಕ್ಕೆ ಯೋಚಿಸಿದ್ದರು. ಆದರೆ ತಮ್ಮ ಪತಿ ಜನ್ಮದಿನ ಆಚರಿಸುವ ಕಾರಣಕ್ಕೆ ಮುಂಚಿತವಾಗಿಯೇ ಟಿಕೆಟ್‌ ಬುಕ್ ಮಾಡಿ ಹೊರಟಿದ್ದರು. ಲಂಡನ್‌ಗೆ ಹೋದ ಬಳಿಕ ದಂಪತಿ ಯುರೋಪ್ ಪ್ರವಾಸದ ಪ್ಲ್ಯಾನ್ ಕೂಡ ಮಾಡಿದ್ದರು. ಆದರೆ ದುರಂತ ಎನ್ನುವಂತೆ ಗಂಡನನ್ನು ಸೇರುವ ಮುನ್ನವೇ ಹರ್‌ಪ್ರೀತ್‌ ಏರಿಂಡಿಯಾ ವಿಮಾನ ಅವಘಡದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ