70 ಕ್ಷೇತ್ರಗಳ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ : ಬಿಜೆಪಿಗೋ? ಆಮ್‌ಆದ್ಮಿಗೋ?

KannadaprabhaNewsNetwork |  
Published : Feb 08, 2025, 12:31 AM ISTUpdated : Feb 08, 2025, 07:31 AM IST
ದೆಹಲಿ ಚುನಾವಣಾ ಫಲಿತಾಂಶ | Kannada Prabha

ಸಾರಾಂಶ

 ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಹೊರಬೀಳಲಿದೆ. ಇದರೊಂದಿಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಮತ್ತು ಒಂದೊಂದೇ ರಾಜ್ಯಗಳಲ್ಲಿ ತನ್ನ ಹಿಡಿತ ಸಾಧಿಸಲು ಹಂಬಲಿಸುತ್ತಿರುವ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ ಜಿದ್ದಾಜಿದ್ದಿಗೆ ತೆರೆ ಬೀಳಲಿದೆ.

ನವದೆಹಲಿ: ಫೆ.5ರಂದು 70 ಕ್ಷೇತ್ರಗಳ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಹೊರಬೀಳಲಿದೆ. ಇದರೊಂದಿಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಮತ್ತು ಒಂದೊಂದೇ ರಾಜ್ಯಗಳಲ್ಲಿ ತನ್ನ ಹಿಡಿತ ಸಾಧಿಸಲು ಹಂಬಲಿಸುತ್ತಿರುವ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ ಜಿದ್ದಾಜಿದ್ದಿಗೆ ತೆರೆ ಬೀಳಲಿದೆ. 

ಒಂದೊಮ್ಮೆ ಬಿಜೆಪಿ ಬಹುಮತ ಪಡೆದರೆ, ಬರೋಬ್ಬರಿ 27 ವರ್ಷಗಳ ನಂತರ ದೆಹಲಿಯ ಗದ್ದುಗೆಗೇರಿದಂತಾಗುತ್ತದೆ. ಹೀಗಾದಲ್ಲಿ, ಆಪ್‌ನ 10 ವರ್ಷಗಳ ಆಡಳಿತ ಅಂತ್ಯವಾಗಲಿದೆ. ಜೊತೆಗೆ, ಆಪ್‌ ಆಡಳಿತ ಪಂಜಾಬ್‌ಗೆ ಮಾತ್ರ ಸೀಮಿತವಾಗಿರಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.

2020ರಲ್ಲಿ ನಡೆದ ಚುನಾವಣೆಯಲ್ಲಿ ಆಪ್‌ 62 ಸ್ಥಾನ ಗೆದ್ದು ಜಯಭೇರಿ ಬಾರಿಸಿದ್ದರೆ ಬಿಜೆಪಿ 8 ಸ್ಥಾನ ಗೆದ್ದಿತ್ತು. ಕಾಂಗ್ರೆಸ್‌ ಒಂದೂ ಸ್ಥಾನ ಗೆಲ್ಲಲು ಸಫಲವಾಗಿರಲಿಲ್ಲ.

ಸಮೀಕ್ಷೆ ಹೇಳಿದ್ದೇನು?:ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಯಲ್ಲಿ ಬಹುಮತದ ಸುಳಿವು ನೀಡಿವೆ. 13 ಸಮೀಕ್ಷೆಗಳ ಪೈಕಿ 11 ಬಿಜೆಪಿಗೆ ಅಧಿಕಾರಕ್ಕೇರಲಿದೆ ಎಂದರೆ, ಕೇವಲ 2 ಸಮೀಕ್ಷೆಗಳು ಆಪ್‌ ಪರ ಭವಿಷ್ಯ ನುಡಿದಿವೆ. ಆದರೆ ಯಾವುದೇ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 3ಕ್ಕಿಂತ ಹೆಚ್ಚು ಸ್ಥಾನ ಪಡೆದಿಲ್ಲ ಆದರೆ ಕಳೆದ ಬಾರಿ ಚುನಾವಣೆ ನಡೆದಾಗಲೂ ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಖಚಿತ ಎಂದು ಹೇಳಿದ್ದು, ಫಲಿತಾಂಶ ಮಾತ್ರ ಆಪ್‌ ಮುಡಿಗೆ ದೆಹಲಿ ಕಿರೀಟ ತೊಡಿಸಿದ್ದನ್ನು ಮರೆಯುವಂತಿಲ್ಲ.ಈ ಬಾರಿ ಮೂರೂ ಪಕ್ಷಗಳು ಅಧಿಕಾರಕ್ಕೆ ಏರುವ ಹಠದಲ್ಲಿ ಹಿಂದೆಂದೂ ಕಂಡುಕೇಳರಿಯದ ರೀತಿಯಲ್ಲಿ ಗ್ಯಾರಂಟಿ ಘೋಷಿಸಿವೆ. ಒಂದು ವೇಳೆ ಈ ಗ್ಯಾರಂಟಿ ಜಾರಿಗೆ ತಂದರೆ ಇತಿಹಾಸದಲ್ಲೇ ಮೊದಲ ಬಾರಿಗೆ ದೆಹಲಿಯ ಬಜೆಟ್‌ ಕೊರತೆ ಅನುಭವಿಸಬೇಕಾಗಿ ಬರಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಶನಿವಾರದ ಫಲಿತಾಂಶ, ಅದರಲ್ಲಿ ಗೆಲ್ಲುವ ಪಕ್ಷ, ಗೆದ್ದ ಪಕ್ಷವು ಭರವಸೆ ಜಾರಿಗೊಳಿಸುವ ಪರಿ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

ದೆಹಲಿ ರಾಜಕೀಯದಲ್ಲಿ ಹೈ ಡ್ರಾಮಾ

ನವದೆಹಲಿ: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಕ್ಕೂ ಮುನ್ನಾ ದಿನ ದೆಹಲಿಯಲ್ಲಿ ಭಾರೀ ರಾಜಕೀಯ ಹೈಡ್ರಾಮಾ ನಡೆದಿದೆ. ತಮ್ಮ 16 ಅಭ್ಯರ್ಥಿಗಳನ್ನು ಸೆಳೆಯಲು ಬಿಜೆಪಿ ತಲಾ 15 ಕೋಟಿ ರು. ಆಫರ್‌ ಮಾಡಿತ್ತು ಎಂಬ ಆಪ್‌ನ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಹೇಳಿಕೆ ಕುರಿತು ತನಿಖೆಗೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಪಟಾಫಟ್‌ ಆದೇಶ ಹೊರಡಿಸಿದ್ದಾರೆ.

ಆದರೆ ಹೊರಬಿದ್ದ ಬೆನ್ನಲ್ಲೇ ದೆಹಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕೇಜ್ರಿವಾಲ್‌ ಸೇರಿದಂತೆ ಆಪ್‌ನ ಹಲವು ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಸೂಕ್ತ ದಾಖಲೆ ಹೊಂದಿಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳನ್ನು ಕೇಜ್ರಿವಾಲ್‌ ಮನೆಯ ಒಳಗೆ ಬಿಡಲು ನಿರಾಕರಿಸಲಾಗಿದೆಈ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್‌ ನೀಡಿರುವ ಎಸಿಬಿ ಅಧಿಕಾರಿಗಳು ನೀವು ಮಾಡಿರುವ ಆರೋಪಕ್ಕೆ ಸಾಕ್ಷ್ಯ ನೀಡಿ. ತನಿಖೆಗೆ ಸಹಕರಿಸಿ ಎಂದು ಸೂಚಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?:16 ಆಪ್‌ ಅಭ್ಯರ್ಥಿಗಳ ಪಕ್ಷಾಂತರಕ್ಕೆ ಬಿಜೆಪಿಯ ಆಫರ್‌ ಬಗ್ಗೆ ಟ್ವೀಟ್‌ ಮಾಡಿದ್ದು ನೀವೇ ಹೌದಾ? ಹೌದಾದರೆ ಅದಕ್ಕೆ ಸಂಬಂಧಿಸಿದ ದಾಖಲೆ ನೀಡಿ. ಯಾವ 16 ಅಭ್ಯರ್ಥಿಗಳಿಗೆ ಆಫರ್‌ ನೀಡಲಾಗಿತ್ತು ಎಂಬುದನ್ನು ತಿಳಿಸಿ. ಒಂದು ವೇಳೆ ಇದಕ್ಕೆ ಸೂಕ್ತ ಸಾಕ್ಷ್ಯಧಾರ ನೀಡದೇ ಹೋದಲ್ಲಿ ನೀವು ಮತ್ತು ನಿಮ್ಮ ಪಕ್ಷದ ನಾಯಕರು ಮಾಡಿದ ಆರೋಪಗಳು ದೆಹಲಿಯ ಜನರಲ್ಲಿ ಆತಂಕ ಮತ್ತು ಅರಾಜತೆ ಸೃಷ್ಟಿಸಲು ನಡೆಸಿದ ಯತ್ನ ಎಂದು ಪರಿಗಣಿಸಿ ಏಕೆ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿ ಎಂದು ಸೂಚಿಸಲಾಗಿದೆ.

ಕೇಜ್ರಿ ಆರೋಪ ಏನಿತ್ತು?:ನಮ್ಮ 16 ಅಭ್ಯರ್ಥಿಗಳಿಗೆ ಬಿಜೆಪಿಯವರು ಕರೆ ಮಾಡಿ ಪಕ್ಷ ಬದಲಿಸುವಂತೆ ಕೋರಿ 15 ಕೋಟಿ ಆಫರ್‌ ನೀಡಿದ್ದಾರೆ ಎಂದು ಕೇಜ್ರಿವಾಲ್‌ ಗುರುವಾರ ಆರೋಪಿಸಿದ್ದರು. ಇದನ್ನು ಆಪ್‌ನ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಕೂಡ ಬೆಂಬಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್‌, ‘ಕೇಜ್ರಿವಾಲ್‌ ಹಾಗೂ ಸಂಜಯ್‌ ಸಿಂಗ್‌ ಅವರ ಆರೋಪ ಗಂಭೀರವಾಗಿದೆ. ಅವರು ಇದಕ್ಕೆ ಯಾವುದೇ ಸಾಕ್ಷಿ ಒದಗಿಸಿಲ್ಲ. ಆದ್ದರಿಂದ ಈ ಕುರಿತ ಎಸಿಬಿ ತನಿಖೆ ಅಗತ್ಯ’ ಎಂದಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ