ಬಿಜೆಪಿ ಸಪ್ತಾಶ್ವ ಸವಾರಿಗೆ ಆಪ್‌ ಬ್ರೇಕ್‌ ಹಾಕುತ್ತಾ?

KannadaprabhaNewsNetwork | Updated : Apr 14 2024, 07:11 AM IST

ಸಾರಾಂಶ

ರಾಷ್ಟ್ರದ ರಾಜಧಾನಿಯಾಗಿರುವ ನವದೆಹಲಿಯಲ್ಲಿ ಈ ಬಾರಿ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದ್ದು, ಇಂಡಿಯಾದ ಭಾಗವಾಗಿ ಕಾಂಗ್ರೆಸ್‌ ಹಾಗೂ ಆಪ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದುರಿಂದ ರಾಜಕೀಯ ಸಮೀಕರಣಗಳು ಬದಲಾಗಿವೆ.

ರಾಷ್ಟ್ರದ ರಾಜಧಾನಿಯಾಗಿರುವ ನವದೆಹಲಿಯಲ್ಲಿ ಈ ಬಾರಿ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದ್ದು, ಇಂಡಿಯಾದ ಭಾಗವಾಗಿ ಕಾಂಗ್ರೆಸ್‌ ಹಾಗೂ ಆಪ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದುರಿಂದ ರಾಜಕೀಯ ಸಮೀಕರಣಗಳು ಬದಲಾಗಿವೆ. ಬಿಜೆಪಿ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಎಲ್ಲ 7 ಲೋಕಸಭಾ ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದರೂ ಈ ಬಾರಿ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷಗಳ ಒಗ್ಗಟ್ಟು ಅದಕ್ಕೆ ಮುಳುವಾಗುವ ಸಾಧ್ಯತೆಗಳು ದಟ್ಟವಾಗಿವೆ.

ಹೇಗಿದೆ ಬಿಜೆಪಿ ಅಲೆ?

ನರೇಂದ್ರ ಮೋದಿ ಅಭಿವೃದ್ಧಿ ಮಾಡಿರುವುದು ಬಿಜೆಪಿ ಪಾಲಿಗೆ ಪ್ಲಸ್‌. ಇದೆ ಹುಮ್ಮಸ್ಸಿನಲ್ಲಿ ಬಿಜೆಪಿ ಮನೋಜ್‌ ತಿವಾರಿ ಒಬ್ಬರನ್ನು ಬಿಟ್ಟಿ ಎಲ್ಲ ಹಾಲಿ ಸಂಸದರನ್ನು ಬದಲಿಸಿದೆ. ಹಾಗಾಗಿದಿದು ಅದರ ಪಾಲಿಗೆ ಮುಳುವಾಗಲೂಬಹುದು. ಆದರೆ ಅರವಿಂದ್‌ ಕೇಜ್ರಿವಾಲ್‌ ಸದಾ ಕಾಲ ಆರೋಪಿಸುವಂತೆ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಲೋಕಸಭಾ ಚುನಾವಣೆಯ ಎದುರಿನಲ್ಲಿ ಅವರನ್ನು ಬಂಧಿಸಿದ್ದರ ಪರಿಣಾಮವನ್ನು ಮತದಾನದ ವೇಳೆ ಬಿಜೆಪಿ ಬೆಲೆ ತೆರಬೇಕಾಗಬಹುದು. ಆದರೆ ಅದರಿಂದ ಬಿಜೆಪಿಗೆ ಲಾಭವಾಗಲಿದೆಯೇ ಅಥವಾ ನಷ್ಟವಾಗಲಿದೆಯೇ ಎಂಬುದು ಫಲಿತಾಂಶವೆ ಉತ್ತರಿಸಬೇಕು. ಮತ್ತೊಂದೆಡೆ ಬಿಜೆಪಿ ನರೇಂದ್ರ ಮೋದಿಯನ್ನೇ ಅತಿಯಾಗಿ ನೆಚ್ಚಿಕೊಂಡಿದ್ದು, ಹರ್ಷವರ್ಧನ್‌, ಸುಷ್ಮಾ ಸ್ವರಾಜ್‌ ಬಳಿಕ ಪ್ರಬಲ ಸ್ಥಳೀಯ ನಾಯಕರನ್ನು ಬಿಜೆಪಿ ಬೆಳೆಸಿಲ್ಲ. ಕಿರಣ್‌ ಬೇಡಿಯನ್ನು ಬೆಳೆಸುವ ಪ್ರಯತ್ನ ಕೂಡ ಫಲ ನೀಡಿಲ್ಲ. ಹಾಗಾಗಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿರುವ ಬಿಜೆಪಿಯ ತಂತ್ರಗಾರಿಕೆ ಎಷ್ಟರ ಮಟ್ಟಿಗೆ ಲಾಭ ಮಾಡಿಕೊಡಬಲ್ಲದು ಎಂಬುದನ್ನು ಕಾದು ನೋಡಬೇಕಿದೆ.

ಖಾತೆ ತೆರೆಯಬಲ್ಲದೇ ಆಪ್‌?

ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸುತ್ತಿದ್ದರೂ ಕಳೆದ 10 ವರ್ಷಗಳಿಂದ ಆಮ್‌ ಅದ್ಮಿ ಪಕ್ಷಕ್ಕೆ ದೆಹಲಿ ಲೋಕಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಪಕ್ಷವು ರಾಷ್ಟ್ರೀಯ ಸ್ಥಾನಮಾನ ಗಳಿಸಿದ ಖ್ಯಾತಿ ಹೊಂದಿದ್ದರೂ ತನ್ನ ತವರು ರಾಜ್ಯದಲ್ಲಿ ಸಂಸದನನ್ನು ಗೆಲ್ಲಿಸಿಕೊಳ್ಳಲು ಆಮ್‌ ಆದ್ಮಿ ಪಕ್ಷ ತೀವ್ರವಾಗಿ ತಿಣುಕಾಡುತ್ತಿದೆ. ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಗೆಲುವು ಸಾಧ್ಯವಾಗದ ಕಾರಣ ಈ ಬಾರಿ ಆಮ್‌ ಆದ್ಮಿ ಪಕ್ಷ ಕಾಂಗ್ರೆಸ್‌ನೊಂದಿಗೆ ಕಣಕ್ಕಿಳಿದಿದೆ. ಈ ಬಾರಿ ಕೇವಲ ನವದೆಹಲಿ, ದಕ್ಷಿಣ, ಪಶ್ಚಿಮ ಮತ್ತು ಪೂರ್ವ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಜೊತೆಗೆ ಪಕ್ಷದ ನಾಯಕ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿರುವುದು ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ಮಾಡಿಕೊಡುವ ಸಾದ್ಯತೆಯಿದ್ದು, ಈ ಕುರಿತು ಸಚಿವೆ ಆತಿಷಿ ಮೇಲಿಂದ ಮೇಲೆ ಬಿಜೆಪಿಗೆ ವಾಗ್ದಾಳಿಇ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ಗೆ ಉಳಿವಿನ ಪ್ರಶ್ನೆ:

ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷದ ಪ್ರವೇಶದಿಂದ ತನ್ನ ನೆಲೆಯನ್ನೇ ಕಳೆದುಕೊಂಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಇದು ಅಳಿವು ಉಳಿವಿನ ಪ್ರಶ್ನೆಯಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌ ರಾಷ್ಟ್ರ ರಾಜಕಾರಣಕ್ಕೆ ತೆರಳಿದ ಬಳಿಕ ಪಕ್ಷದ ರಾಜ್ಯ ಘಟಕದಲ್ಲಿ ನಾಯಕತ್ವವೇ ಇಲ್ಲವಾಗಿದ್ದು, ಆಮ್‌ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದು ತುಸು ಸಮಾಧಾನ ಮೂಡಿಸಿದೆ. ಈ ಬಾರಿ ಕಾಂಗ್ರೆಸ್‌ ದೆಹಲಿಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದ್ದು, ತನ್ನ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ಸ್ಪರ್ಧೆ ಹೇಗೆ?

ನವದೆಹಲಿ ಲೋಕಸಭಾ ಚುನಾವಣೆ ಈ ಬಾರಿ ಸಂಪೂರ್ಣವಾಗಿ ಅರವಿಂದ್‌ ಕೇಜ್ರಿವಾಲ್‌ ಬಂಧನದ ಸುತ್ತವೇ ನಡೆಯುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯು ರಾಮಮಂದಿರ, ಸಿಎಎ ಮುಂತಾದ ವಿಚಾರಗಳನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿದ್ದರೂ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷಗಳು ಸದಾಕಾಲ ಅರವಿಂದ್‌ ಕೇಜ್ರಿವಾಲ್‌ ಬಂಧನದ ಸುದ್ದಿಯನ್ನೇ ಜನರಿಗೆ ಮೇಲಿಂದ ಮೇಲೆ ತಿಳಿಸುವ ಮೂಲಕ ಜನರ ಸಿಂಪತಿ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಲ್ಲದೆ ಈ ಬಾರಿ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದು ಬಿಜೆಪಿ ಜೊತೆಗೆ ನೇರ ಹಣಾಹಣಿಗೆ ಅಖಾಡ ಸೃಷ್ಟಿಸಿದೆ. ಕಳೆದ ಬಾರಿ ಇದು ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟು ಬಿಜೆಪಿ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ಕಾರಣವಾಗಿತ್ತು. ಇದರಿಂದ ಉಭಯ ಪಕ್ಷಗಳು ಎಚ್ಚೆತ್ತು ಮೈತ್ರಿ ಮಾಡಿಕೊಂಡಿರುವ ಪರಿಣಾಮ ಆಮ್‌ ಆದ್ಮಿ ಪಕ್ಷ ಈ ಬಾರಿ ದೆಹಲಿಯಲ್ಲಿ ಖಾತೆ ತೆರೆಯಬಹುದು ಎಂದು ನಿರೀಕ್ಷಿಸಲಾಗಿದೆ.

ರಾಜ್ಯ ವಿಶ್ಲೇಷಣೆ: ದೆಹಲಿ

ಮತದಾನ ದಿನಾಂಕ: ಮೇ.25

ಮತದಾನದ ಹಂತಗಳು: 1

ಒಟ್ಟು ಲೋಕಸಭಾ ಕ್ಷೇತ್ರಗಳು: 7ಪ್ರಮುಖ ಹುರಿಯಾಳುಗಳು: ಮನೋಜ್‌ ತಿವಾರಿ (ಬಿಜೆಪಿ), ಬಾನ್ಸುರಿ ಸ್ವರಾಜ್‌ (ಬಿಜೆಪಿ), ಸೋಮನಾಥ್‌ ಭಾರ್ತಿ (ಆಪ್‌), ಮಹಾಬಲ ಮಿಶ್ರಾ (ಆಪ್‌), ಪ್ರವೀಣ್‌ ಖಂಡೇಲ್‌ವಾಲ್‌ (ಬಿಜೆಪಿ).

ಪ್ರಮುಖ ಕ್ಷೇತ್ರಗಳು:

ನವದೆಹಲಿ, ಚಾಂದಿನಿ ಚೌಕ್‌, ಈಶಾನ್ಯ ದೆಹಲಿ, ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ, ಪೂರ್ವ ದೆಹಲಿ, ವಾಯವ್ಯ ದೆಹಲಿ

2019ರ ಫಲಿತಾಂಶ

ಪಕ್ಷ ಸ್ಥಾನ ಶೇಕಡಾ

ಬಿಜೆಪಿ 7 56.9

ಆಪ್‌ 0 18.1

ಕಾಂಗ್ರೆಸ್‌ 0 22.5

Share this article