ದಿಲ್ಲಿ: ದೇಶದ ಇತಿಹಾಸದಲ್ಲೇ ಗರಿಷ್ಠ 53 ತಾಪ?

KannadaprabhaNewsNetwork | Updated : May 30 2024, 05:18 AM IST

ಸಾರಾಂಶ

ದೆಹಲಿಯಲ್ಲಿ ಜಾಗತಿಕ ಗರಿಷ್ಠ ತಾಪಮಾನಕ್ಕಿಂತ ಕೇವಲ ನಾಲ್ಕು ಡಿಗ್ರಿ ಕಡಿಮೆಯಿದ್ದು, ಮತ್ತೊಮ್ಮೆ ಪರಿಶೀಲಿಸುವುದಾಗಿ ಹವಾಮಾನ ಇಲಾಖೆ ತಿಳಿಸಿದೆ

ನವದೆಹಲಿ: ಕಳೆದ ಕೆಲ ದಿನಗಳಿಂದ ದೇಶದ ಉತ್ತರ ಮತ್ತು ಪೂರ್ವದ ರಾಜ್ಯಗಳು ಕಂಗೆಡುವಂತೆ ಮಾಡಿರುವ ಸುಡುಬಿಸಿಲು ಇದೀಗ ಹೊಸ ದಾಖಲೆ ಸೃಷ್ಟಿಸಿದೆ.

 ಬುಧವಾರ ದೆಹಲಿಯ ಮುಂಗೇಶ್‌ಪುರದಲ್ಲಿ 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಭಾರತದಲ್ಲಿ ದಾಖಲಾದ ಈವರೆಗಿನ ಅತಿ ಹೆಚ್ಚು ಉಷ್ಣಾಂಶ ಎನ್ನಿಸಿಕೊಂಡಿದೆ. ಆದರೆ ಇದು ಇದುವರೆಗೆ ದೇಶದಲ್ಲಿ ದಾಖಲಾದ ಸಾರ್ವಕಾಲಿಕ ದಾಖಲೆಯಾದ ಕಾರಣ, ಮಾಪನದ ಸೆನ್ಸರ್‌ಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅಧಿಕೃತವಾಗಿ ಮಾಹಿತಿ ನೀಡುವುದಾಗಿ ಹವಾಮಾನ ಇಲಾಖೆ ಹೇಳಿದೆ.

ಒಂದು ವೇಳೆ ಉಷ್ಣಾಂಶ 52.9 ಡಿಗ್ರಿ ದಾಖಲಾಗಿದ್ದರೆ, ಅದು ವಿಶ್ವದಾಖಲೆಗಿಂತ ಕೇವಲ 4 ಡಿಗ್ರಿ ಕಡಿಮೆ ಎನ್ನಿಸಿಕೊಳ್ಳಲಿದೆ. ಈ ಹಿಂದೆ ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿರುವ ಡೆತ್‌ವ್ಯಾಲಿಯ ಗ್ರೀನ್‌ಲ್ಯಾಂಡ್‌ ರ್‍ಯಾಂಚ್‌ನಲ್ಲಿ 56.7 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿದ್ದೇ ಇದುವರೆಗಿನ ವಿಶ್ವದಾಖಲೆಯಾಗಿದೆ.

ದೆಹಲಿ ಮಾತ್ರವಲ್ಲದೇ, ರಾಜಸ್ಥಾನ, ಪಂಜಾಬ್‌, ಹರ್ಯಾಣ, ಬಿಹಾರ, ಜಾರ್ಖಂಡ್‌, ಒಡಿಶಾ ಮೊದಲಾದ ರಾಜ್ಯಗಳಲ್ಲೂ ಬುಧವಾರ ಗರಿಷ್ಠ ಉಷ್ಣಾಂಶ 44ರಿಂದ 49 ಡಿಗ್ರಿ ಸೆಲ್ಷಿಯಸ್‌ವರೆಗೆ ದಾಖಲಾಗಿದೆ.

ದಾಖಲೆ ಬಿಸಿಲು:ರಾಷ್ಟ್ರ ರಾಜಧಾನಿಯಲ್ಲಿ 52.9 ಡಿಗ್ರಿ ತಾಪಮಾನ ದಾಖಲಾಗಿದ್ದು ನಗರದ 3 ಕೋಟಿ ಜನರನ್ನು ಬೆಚ್ಚಿಬೀಳಿಸಿದೆ. ಇದು ಮಂಗಳವಾರವಷ್ಟೇ ದಾಖಲಾಗಿದ್ದ ನಗರದ 49.4 ಡಿಗ್ರಿ ಸೆಲ್ಸಿಯಸ್‌ ತಾಪಮಾನದ ದಾಖಲೆ ಮುರಿದಿದೆ. ಮಧ್ಯಾಹ್ನ 2.20ಕ್ಕೆ ಮಂಗೇಶ್‌ಪುರದಲ್ಲಿ 52.9 ಡಿಗ್ರಿ ತಾಪ ಇತ್ತು ಎಂದು ತಾಪಮಾನ ನಿಗಾ ಕೇಂದ್ರದಲ್ಲಿ ದಾಖಲಾಗಿದೆ.

ರಾಜಸ್ಥಾನದಿಂದ ಹೊಡೆದ ಬಿಸಿ ಗಾಳಿಯ ಪರಿಣಾಮ ಇದಾಗಿದ್ದು, ಇದು ಮೊದಲು ಅಪ್ಪಳಿಸಿದ್ದು ಮಂಗೇಶ್‌ಪುರಕ್ಕೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.

 ದಿಲ್ಲಿಯ ಉಳಿದ ಭಾಗಗಳಲ್ಲೂ ತಾಪಮಾನ 49 ಡಿಗ್ರಿ ಆಸುಪಾಸಿನಲ್ಲಿತ್ತು.

ಬಿಸಿಲಿನ ಬೆನ್ನಲ್ಲೇ ಮಳೆ:ಈ ನಡುವೆ ಕಂಡು ಕೇಳರಿಯದ ಬಿಸಿಲಿನ ಬೆನ್ನಲ್ಲೇ ದೆಹಲಿಯಲ್ಲಿ ಬುಧವಾರ ಸಂಜೆಯೂ ಸ್ವಲ್ಪ ಸಮಯ ಮಳೆಯಾಗಿದೆ. 

ಜನತೆ ಹೈರಾಣು:ಭಾರೀ ಬಿಸಿಲಿನ ಪರಿಣಾಮ ದೆಹಲಿ ಜನತೆ ಹೈರಾಣಾಗಿದ್ದು ಮಕ್ಕಳು, ವೃದ್ಧರು ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಸುಡುಬಿಸಿಲಿನಿಂದಾಗಿ ದಿನಕ್ಕೆ 3 ಬಾರಿ ಸ್ನಾನ ಮಾಡುವಂತಾಗಿದೆ. ಆದರೆ ನಗರದಲ್ಲಿ ಇದೀಗ ನೀರಿಗೂ ಕೊರತೆ ಎದುರಾಗಿದೆ ಎಂದು ಜನರು ಗೋಳು ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಹೊರಗಿನ ವಾತಾವರಣದಲ್ಲಿ ಕೆಲಸ ಮಾಡುವ ಹೊರ ರಾಜ್ಯಗಳ ಕಾರ್ಮಿಕರು, ಬಿಸಿಲ ಝಳ ತಡೆಯಲಾಗದೇ ತವರಿಗೆ ಮರಳಿದ್ದು ಕಾರ್ಮಿಕರ ಕೊರತೆ ಎದುರಾಗಿದೆ ಎಂದು ಕಟ್ಟಡ ನಿರ್ಮಾಣಗಾರರು ಹೇಳಿದ್ದಾರೆ.

ಜನರಿಗೆ ನೆರವು- ಉಪರಾಜ್ಯಪಾಲ ಸೂಚನೆ:

ಬುಧವಾರ ತಾಪಮಾನ ತಾರಕ್ಕಕೇರಿದ ಬಳಿಕ ದಿಲ್ಲಿ ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮಧ್ಯಾಹ್ನದಿಂದ 3 ಗಂಟೆಯವರೆಗೆ ಕಾರ್ಮಿಕರಿಗೆ ವೇತನ ಸಹಿತ ವಿರಾಮ ನೀಡಬೇಕು. ನಿರ್ಮಾಣ ಸ್ಥಳಗಳಲ್ಲಿ ನೀರು ಮತ್ತು ಎಳೆನೀರಿನ ವ್ಯವಸ್ಥೆ ಮಾಡಬೇಕು. ಬಸ್ ನಿಲ್ದಾಣಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ಕೆಲಸದ ಸ್ಥಳದಲ್ಲಿ ಕಡ್ಡಾಯವಾಗಿ ಕೂಲರ್‌/ಫ್ಯಾನ್‌ ಇರಬೇಕು. ಶಿಫ್ಟ್‌ ಕೆಲಸಗಳಿದ್ದರೆ ಆದಷ್ಟು ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ನೌಕರರಿಗೆ ಕೆಲಸ ನೀಡಬಾರದು ಎಂದು ನಿರ್ದೇಶಿಸಿದ್ದಾರೆ.

Share this article