ನವದೆಹಲಿ: ಭರ್ಜರಿ ಬಹುಮತದೊಂದಿಗೆ ರಾಜಧಾನಿಯಲ್ಲಿ ಎರಡು ದಶಕದ ಬಳಿಕ ಗೆಲುವು ಸಾಧಿಸಿದ ಬಿಜೆಪಿಯಲ್ಲಿ ಸದ್ಯ ಮುಖ್ಯಮಂತ್ರಿ ಆಯ್ಕೆ ಕಸರತ್ತು ಜೋರಾಗಿದ್ದು, ಈ ಬಾರಿ ಬಿಜೆಪಿ ಅಚ್ಚರಿ ಎನ್ನುವಂತೆ ಮಹಿಳಾ ನಾಯಕಿಯೊಬ್ಬರಿಗೆ ಬಿಜೆಪಿ ಸಿಎಂ ಪಟ್ಟ ನೀಡಬಹುದು ಎನ್ನುವ ಗುಸುಗುಸು ಜೋರಾಗಿದೆ.
ಪರ್ವೇಶ್ ವರ್ಮಾ, ಸತೀಶ್ ಉಪಾಧ್ಯಾ, ವಿಜೇಂದ್ರ ಗುಪ್ತಾ, ಪವನ್ ಶರ್ಮಾರಂತಹ ನಾಯಕರ ಹೆಸರಿನ ಜೊತೆಗೆ ಬಿಜೆಪಿಯಲ್ಲಿ ಸಿಎಂ ರೇಸ್‌ಗೆ ಮಹಿಳಾ ಶಾಸಕಿಯರ ಹೆಸರು ಕೂಡ ಮುಂಚೂಣಿಯಲ್ಲಿದೆ. 48 ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿಯಲ್ಲಿ ನಾಲ್ವರು ಮಹಿಳೆಯರು ಗೆಲುವು ಸಾಧಿಸಿದ್ದಾರೆ. ನೀಲಂ ಪಹಲ್ವಾನ್, ರೇಖಾ ಗುಪ್ತಾ, ಪೂನಂ ಶರ್ಮಾ, ಶಿಖಾ ರಾಯ್ ಗೆದ್ದಿದ್ದು, ಬಿಜೆಪಿ ಇವರಲ್ಲಿ ಯಾರಿಗಾದರೂ ಮಣೆ ಹಾಕಿ ಸಿಎಂ ಪಟ್ಟ ನೀಡಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಇನ್ನು ದೆಹಲಿಯಲ್ಲಿ ಈ ಹಿಂದೆ ಮಹಿಳೆಯರು ಸಿಎಂ ಪಟ್ಟವನ್ನು ಅಲಂಕರಿಸಿ, ಉತ್ತಮ ಆಡಳಿತಕ್ಕೆ ಹೆಸರಾಗಿದ್ದರು. ಬಿಜೆಪಿ 1998ರಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಸಿಎಂ ಹುದ್ದೆ ನೀಡಿತ್ತು. ಅವರು ದೆಹಲಿ ಸಿಎಂ ಆಗಿ ಆಯ್ಕೆಯಾದ ಮೊದಲ ಮಹಿಳೆ . ಇನ್ನು ಕಾಂಗ್ರೆಸ್‌ನಿಂದ ಶೀಲಾ ದೀಕ್ಷಿತ್ ದೆಹಲಿ ಸಿಎಂ ಆಗಿ ಅಧಿಕಾರ ನಡೆಸಿದ್ದರು. ಮೂರು ಅವಧಿಗೆ ಅಧಿಕಾರ ನಡೆಸಿದ್ದ ಅವರು ದೆಹಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಲ್ಲೊಬ್ಬರು. ಇನ್ನು ಆಪ್ ಕೇಜ್ರಿವಾಲ್ ರಾಜೀನಾಮೆ ನಂತರ ಕಳೆದ ವರ್ಷ ಆತಿಶಿಗೆ ಸಿಂಗ್ ಪಟ್ಟ ಕಟ್ಟಿತ್ತು.
ಪಂಜಾಬ್ ಬಿಕ್ಕಟ್ಟು?: ಇಂದು ಸಿಎಂ, ಶಾಸಕರ ಜೊತೆ ಕೇಜ್ರಿವಾಲ್ ಸಭೆ
ನವದೆಹಲಿ: ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಪಕ್ಷದ ಪಂಜಾಬ್ ಘಟಕದಲ್ಲೂ ಬಿಕ್ಕಟ್ಟು ಮೂಡಿದೆ ಎಂಬ ಸುದ್ದಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಮಂಗಳವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮತ್ತು ಶಾಸಕರೊಂದಿಗೆ ಮಹತ್ವದ ಸಭೆ ಹಂಚಿಕೊಂಡಿದ್ದಾರೆ.
ದೆಹಲಿ ಸರ್ಕಾರವನ್ನೇ ಮುಖವಾಡವಾಗಿ ಬಳಸಿ ಆಪ್ ಎಲ್ಲೆಡೆ ಪಕ್ಷ ವಿಸ್ತರಣೆ ಗುರಿ ರೂಪಿಸಿತ್ತು. ಆದರೆ ಇದೀಗ ದೆಹಲಿಯಲ್ಲೇ ಅಧಿಕಾರ ಕಳಚಿದೆ. ಅದಕ್ಕಿಂತ ಮೇಲಾಗಿ ಪಕ್ಷದ ಹಿರಿಯಾದ ಕೇಜ್ರಿವಾಲ್, ಸಿಸೋಡಿಯಾ ಅವರಂಥ ಪ್ರಮುಖರೇ ಸೋತಿದ್ದು, ಪಂಜಾಬ್‌ನ ಶಾಸಕರಲ್ಲೂ ಆತಂಕ ಮೂಡಿಸಿದೆ ಎಂದು ವರದಿಗಳು ಹೇಳಿವೆ.
ಮತ್ತೊಂದೆಡೆ ಆಪ್‌ನ 30 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಬಾಂಬ್ ಸ್ಫೋಟಿಸಿದ್ದರು. ಜೊತೆಗೆ ಮಾನ್ ವಿರುದ್ಧ ಒಂದಷ್ಟು ಶಾಸಕರು ಬಂಡೆದಿದ್ದಾರೆ ಎಂಬ ಗುಸುಗುಸು ಕೂಡಾ ಎದ್ದಿತ್ತು. ಈ ಎಲ್ಲಾ ಬೆಳವಣಿಗೆಗಳು ಆಪ್‌ನಲ್ಲಿ ಭಾರೀ ತಲ್ಲಣಕ್ಕೆ ಕಾರಣವಾಗಿ, ಇರುವ ಒಂದು ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ವತಃ ಕೇಜ್ರಿವಾಲ್ ಪಂಜಾಬ್‌ಗೆ ಧಾವಿಸಿ ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ನಡೆಯುತ್ತಿರುವ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ ಆಪ್ ಅಸಮಾಧಾನ ವದಂತಿ ತಳ್ಳಿ ಹಾಕಿದ್ದು, ಇದು ‘ನಿಯಮಿತ ಕಾರ್ಯತಂತ್ರದ ಅಧಿವೇಶನ’ ಎಂದು ಕರೆದಿದೆ. ‘ ಪಕ್ಷದ ನಿರಂತರ ಪ್ರಕ್ರಿಯೆ, ಅದರ ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸಲು ಎಲ್ಲ ಘಟಕಗಳಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಲಾಗುತ್ತದೆ. ಅದರ ಭಾಗವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಪ್ ಶಾಸಕರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮುಂದಿನ ಯೋಜನೆಗಳ ಕುರಿತು ಚರ್ಚಿಸಲಿದ್ದಾರೆ’ ಎಂದು ಆಪ್ ಮಲ್ವಿಂದರ್ ಸಿಂಗ್ ಹೇಳಿದ್ದಾರೆ.
ಕೇಜ್ರಿ ಸೋಲಿಗೆ ಪಿಕೆ ನೀಡಿದ ಕಾರಣಗಳೇನು?
ನವದೆಹಲಿ: ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳಿಗೆ ರಣತಂತ್ರ ರೂಪಿಸಿಕೊಡುವ ಪ್ರಶಾಂತ್ ಕಿಶೋರ್, ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷದ ಸೋಲಿಗೆ ಕಾರಣಗಳೇನು ಎಂದು ವಿಶ್ಲೇಷಿಸಿದ್ದಾರೆ. ಆಪ್ ಸೋಲಿಗೆ ಅವರು ಹಲವು ಕಾರಣಗಳನ್ನು ನೀಡಿದ್ದಾರೆ.1. ಅಬಕಾರಿ ಹಗರಣದಲ್ಲಿ ಬಂಧಿಸಲ್ಪಡುತ್ತಿದ್ದಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಎಡವಟ್ಟು
2. ಚುನಾವಣೆ ಸಂದರ್ಭದಲ್ಲಿ ರಾಜೀನಾಮೆ ನೀಡಿ, ಇನ್ಯಾರನ್ನೂ(ಆತಿಶಿ) ಸಿಎಂ ಸ್ಥಾನದಲ್ಲಿ ಕೂರಿಸಿದ್ದು
3. ಒಂದೊಮ್ಮೆ ಎದುರಾಳಿಗಳಾಗಿದ್ದ ಲಾಲು, ಸೋನಿಯಾ ಒಳಗೊಂಡ ಇಂಡಿಯಾ ಕೂಟ ಸೇರಿದ್ದು4. ದೆಹಲಿ ಚುನಾವಣೆಗೂ ಮುನ್ನ ಮೈತ್ರಿಯಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧೆಯ ನಿರ್ಧಾರ
5. ದೆಹಲಿಯಲ್ಲಿ ಸತತ 10 ವರ್ಷ ಆಡಳಿತ ನಡೆಸಿದ್ದರಿಂದ ಸೃಷ್ಟಿಯಾಗಿ ಆಡಳಿತ ವಿರೋಧಿ ಅಲೆ6. ಮೂಲಸೌಕರ್ಯ ಅಭಿವೃದ್ಧಿ ಕೊರತೆ, ಉತ್ತಮ ಆಡಳಿತ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದ್ದು
7. ಬಹುದೊಡ್ಡ ಸಂಖ್ಯೆಯಲ್ಲಿರುವ ಸ್ಲಂ ನಿವಾಸಿಗಳ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರದ ಸೋಲು